ನವೋದ್ಯಮಗಳಿಗೆ ಭಾರತದ್ದೇ ನೇತೃತ್ವ: ​ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ!

ಜಗತ್ತು ಈಗ ನವೋದ್ಯಮಗಳ ಯುಗದಲ್ಲಿದ್ದು, ಭಾರತವು ಜಾಗತಿಕವಾಗಿ ಇದರ ನೇತೃತ್ವವನ್ನು ವಹಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. 'ಮನ್‌ ಕೀ ಬಾತ್‌'ನ 83ನೇ ಸಂಚಿಕೆಯಲ್ಲಿ ಭಾನುವಾರ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು.

ನವೋದ್ಯಮಗಳಿಗೆ ಭಾರತದ್ದೇ ನೇತೃತ್ವ: ​ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ!
Linkup
ಹೊಸದಿಲ್ಲಿ: ಜಗತ್ತು ಈಗ ನವೋದ್ಯಮಗಳ ಯುಗದಲ್ಲಿದ್ದು, ಭಾರತವು ಜಾಗತಿಕವಾಗಿ ಇದರ ನೇತೃತ್ವವನ್ನು ವಹಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಸಿಕ ಬಾನುಲಿ ಭಾಷಣ 'ಮನ್‌ ಕೀ ಬಾತ್‌'ನ 83ನೇ ಸಂಚಿಕೆಯಲ್ಲಿ ಭಾನುವಾರ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ''ಭಾರತದ ಏಳಿಗೆಗೆ ನವೋದ್ಯಮಗಳ ಕೊಡುಗೆ ಅಪಾರವಾಗಿದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಹ ಸಂತಸದ ಸಂಗತಿಯಾಗಿದೆ. ಇಂತಹ ಹಲವು ಕಾರಣಗಳಿಂದಾಗಿಯೇ ಜಾಗತಿಕ ನವೋದ್ಯಮ ಕ್ಷೇತ್ರವನ್ನು ಭಾರತ ಮುನ್ನಡೆಸುವಂತಾಗಿದೆ,'' ಎಂದರು. ''ಆಧುನಿಕ ಭಾರತದಲ್ಲಿ ಎಲ್ಲರೂ ನವೋದ್ಯಮ ಎಂಬ ಹೆಸರು ಕೇಳಿದ್ದೇವೆ. ಅದರಲ್ಲೂ ಇತ್ತೀಚೆಗೆ ಯೂನಿಕಾರ್ನ್‌ ನವೋದ್ಯಮ ಪದ ಬಳಕೆ ಶುರುವಾಗಿದೆ. ಅಂದರೆ, 100 ಕೋಟಿ ಡಾಲರ್‌ ಹೂಡಿಕೆ ಇರುವ ನವೋದ್ಯಮಗಳಿಗೆ ಯೂನಿಕಾರ್ನ್‌ ನವೋದ್ಯಮ ಎನ್ನುತ್ತಾರೆ. ಇಂತಹ ನವೋದ್ಯಮಗಳ ಸಂಖ್ಯೆ ಭಾರತದಲ್ಲಿ 70 ಇದೆ. ಇವುಗಳಲ್ಲಿ ಹೂಡಿರುವ ಮೊತ್ತವೇ ಏಳು ಸಾವಿರ ಕೋಟಿ ರೂ. ಆಗುತ್ತದೆ. ಹಾಗಾಗಿ ಇದು ನವೋದ್ಯಮಗಳ, ಅದರಲ್ಲೂ ಯೂನಿಕಾರ್ನ್‌ ಸ್ಟಾರ್ಟ್‌ಅಪ್‌ಗಳ ಯುಗವಾಗಿದೆ,'' ಎಂದು ಶ್ಲಾಘಿಸಿದರು. ''ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಯೂನಿಕಾರ್ನ್‌ ನವೋದ್ಯಮ ಇರಲಿ, ನವೋದ್ಯಮಗಳ ಸಂಖ್ಯೆ ಕಡಿಮೆಯೇ ಇತ್ತು. ದೇಶಾದ್ಯಂತ 2015ರಲ್ಲಿ 9ರಿಂದ 10 ಯೂನಿಕಾರ್ನ್‌ಗಳಿದ್ದವು. ಆದರೆ, ಯೂನಿಕಾರ್ನ್‌ಗಳಲ್ಲಿ ಜಾಗತಿಕವಾಗಿ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ನಾವು ಬೆಳೆಯುತ್ತಿದ್ದೇವೆ. ಒಂದು ವರದಿ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಯೂನಿಕಾರ್ನ್‌ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಹೆಚ್ಚಾಗಿದ್ದು, 10 ತಿಂಗಳಲ್ಲಿ 10 ದಿನಗಳಿಗೆ ಒಂದರಂತೆ ನೂತನ ಯೂನಿಕಾರ್ನ್‌ಗಳ ಸಂಖ್ಯೆ ಹೆಚ್ಚಾಗಿದೆ,'' ಎಂದು ತಿಳಿಸಿದರು. ನರೇಂದ್ರ ಮೋದಿ ಅವರು ಭಾಷಣದ ವೇಳೆ ಹಲವು ವಿಷಯ ಪ್ರಸ್ತಾಪಿಸಿದರು. ಡಿಸೆಂಬರ್‌ನಲ್ಲಿ ಆಚರಿಸುವ ನೌಕಾ ದಿನ, ಸಶಸ್ತ್ರ ಪಡೆಗಳ ಧ್ವಜ ದಿನ, ಡಿ.16ರಂದು 1971ರ ಯುದ್ಧದ ಗೆಲುವಿನ ಸುವರ್ಣ ಮಹೋತ್ಸವ ಆಚರಣೆ ಕುರಿತು ಉಲ್ಲೇಖಿಸಿದರು. ''ಡಿ.6ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುಣ್ಯಸ್ಮರಣೆಯಿದ್ದು, ಅವರ ತತ್ತ್ವಾದರ್ಶ ಪಾಲಿಸೋಣ,'' ಎಂದೂ ಕರೆ ನೀಡಿದರು. ಹಾಗೆಯೇ, ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳ ಜತೆ ಸಂವಾದ ನಡೆಸಿ, ಅವರ ಆರೋಗ್ಯ, ಚಿಕಿತ್ಸೆ ಸೇರಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ, ''ಎಲ್ಲರೂ ಪರಿಸರ ರಕ್ಷಣೆ ಮಾಡೋಣ. ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ,'' ಎಂದರು. ಸೇವೆಯೇ ಪರಮೋಚ್ಚ ಗುರಿ ''ನನಗೆ ಅಧಿಕಾರದ ದಾಹ ಇಲ್ಲ. ನಾನು ಈಗ ಅಧಿಕಾರದಲ್ಲಿಇದ್ದೇನೆ, ಮುಂದೆಯೂ ಇರುತ್ತೇನೆ ಎಂದು ಭಾವಿಸಿಲ್ಲ. ಜನರ ಸೇವೆಯೇ ನನ್ನ ಗುರಿಯಾಗಿದ್ದು, ಅದೇ ಸರ್ವೋಚ್ಚವಾದುದು ಎಂಬುದಾಗಿ ಭಾವಿಸಿದ್ದೇನೆ,'' ಎಂದು ಪ್ರಧಾನಿ ಹೇಳಿದರು. ಆಯುಷ್ಮಾನ್‌ ಭಾರತ್‌ ಫಲಾನುಭವಿಯೊಬ್ಬರು, ''ಮುಂದಿನ ಚುನಾವಣೆಯಲ್ಲಿಯೂ ನೀವೇ ಮತ್ತೆ ಅಧಿಕಾರಕ್ಕೆ ಬರಬೇಕು,'' ಎಂದು ಹಾರೈಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ''ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವುದು ಎಂದರೆ ಅಧಿಕಾರ ಪಡೆಯುವುದಲ್ಲ. ಜನರ ಸೇವೆಗಾಗಿಯೇ ಪ್ರಧಾನಿ ಇರುವುದು ಎಂಬುದು ನನ್ನ ಭಾವನೆಯಾಗಿದ್ದು, 'ಪ್ರಧಾನ ಸೇವಕ'ನಾಗಿಯೇ ಇರುತ್ತೇನೆ,'' ಎಂದರು. ಕೊರೊನಾ ಕುರಿತು ಜಾಗೃತಿ ವಹಿಸಲು ಕರೆ ಕೊರೊನಾ ಸೋಂಕಿನ ರೂಪಾಂತರಿಗಳು 'ಓಮಿಕ್ರಾನ್‌' ಜಗತ್ತಿಗೇ ಆತಂಕ ತಂದೊಡ್ಡಿರುವ ಮಧ್ಯೆಯೇ ''ಯಾವುದೇ ಕಾರಣಕ್ಕೂ ಜನ ಕೊರೊನಾ ವಿಷಯದಲ್ಲಿ ಮೈಮರೆಯಬಾರದು,'' ಎಂದು ಪ್ರಧಾನಿ ಕರೆ ನೀಡಿದರು. ''ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಸಾಂಕ್ರಾಮಿಕದ ನಿರ್ನಾಮ ಆಗಿಲ್ಲ. ಹಾಗಾಗಿ ಎಲ್ಲರೂ ಸಾಮಾಜಿಕ ಅಂತರ ಸೇರಿ ಎಲ್ಲ ಮುಂಜಾಗ್ರತಾ ಕ್ರಮ ಪಾಲಿಸುವುದು ಅನಿವಾರ್ಯ,'' ಎಂದರು.