ನಿಲ್ಲದ ಕೊರೊನಾ ಲಸಿಕೆ ರಾಜಕಾರಣ, ಹೆಚ್ಚಿನ ವಾಕ್ಸಿನ್‌ಗೆ ಬಿಜೆಪಿಯೇತರ ರಾಜ್ಯಗಳ ಪಟ್ಟು

ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಢ, ದಿಲ್ಲಿ ಮತ್ತು ಪಶ್ಚಿಮ ಬಂಗಾಳಗಳು ಜುಲೈ ತಿಂಗಳಿನಲ್ಲಿ ಹೆಚ್ಚಿನ ಲಸಿಕೆ ಪೂರೈಸುವಂತೆ ಕೇಂದ್ರವನ್ನು ಆಗ್ರಹಿಸಿವೆ. ಆದರೆ, ರಾಜ್ಯಗಳು ಲಸಿಕೆ ವಿಚಾರದಲ್ಲಿ ನಾಚಿಕೆಗೇಡಿನ ರಾಜಕೀಯ ನಿಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಟೀಕಿಸಿದ್ದಾರೆ.

ನಿಲ್ಲದ ಕೊರೊನಾ ಲಸಿಕೆ ರಾಜಕಾರಣ, ಹೆಚ್ಚಿನ ವಾಕ್ಸಿನ್‌ಗೆ ಬಿಜೆಪಿಯೇತರ ರಾಜ್ಯಗಳ ಪಟ್ಟು
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಬಿಜೆಪಿಯೇತರ ರಾಜ್ಯಗಳ ನಡುವಿನ 'ಲಸಿಕೆ ಸಂಘರ್ಷ' ಮುಂದುವರಿದಿದ್ದು, ಜುಲೈ ತಿಂಗಳಿನಲ್ಲಿ ಹೆಚ್ಚಿನ ಲಸಿಕೆ ಪೂರೈಸುವಂತೆ ಈ ರಾಜ್ಯಗಳು ಕೇಂದ್ರವನ್ನು ಆಗ್ರಹಿಸಿವೆ. ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಢ, ದಿಲ್ಲಿ ಮತ್ತು ಪಶ್ಚಿಮ ಬಂಗಾಳಗಳು ಹೆಚ್ಚಿನ ಲಸಿಕೆ ಪೂರೈಸುವಂತೆ ಕೇಂದ್ರವನ್ನು ಆಗ್ರಹಿಸಿವೆ. ''ಸಂಭವನೀಯ ಮೂರನೇ ಅಲೆ ತಡೆಯಲು ಸಜ್ಜಾಗಬೇಕಿದೆ. ಹೆಚ್ಚಿನ ಜನರಿಗೆ ಲಸಿಕೆ ನೀಡಲು ನಾವು ಶಕ್ತರಾಗಿದ್ದೇವೆ. ಹೀಗಾಗಿ ಜುಲೈ ತಿಂಗಳಿನಲ್ಲಿಯೇ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ನಿರೋಧಕ ಲಸಿಕೆ ಪೂರೈಸಿ,'' ಎಂದು ಈ ರಾಜ್ಯಗಳು ಆಗ್ರಹಿಸಿವೆ. ರಾಜ್ಯಗಳ ಬೇಡಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು, ''ರಾಜ್ಯಗಳು ಲಸಿಕೆ ವಿಚಾರದಲ್ಲಿ ನಾಚಿಕೆಗೇಡಿನ ರಾಜಕೀಯ ನಿಲ್ಲಿಸಿ ಉತ್ತಮ ಆಡಳಿತದತ್ತ ಗಮನ ನೀಡಬೇಕು. ರಾಜ್ಯಗಳಿಗೆ ಜುಲೈನಲ್ಲಿ 12 ಕೋಟಿ ಡೋಸ್‌ ಲಸಿಕೆ ನೀಡಲಾಗುವುದು. ಅಂದರೆ ನಿತ್ಯ 50-60 ಲಕ್ಷ ಡೋಸ್‌ ನೀಡಬಹುದು. ಇದಲ್ಲದೆ ಖಾಸಗಿ ಕೋಟಾದಲ್ಲಿಯೂ ಒಟ್ಟು ಉತ್ಪಾದನೆಯ ಶೇ.25ರಷ್ಟು ಲಸಿಕೆ ಲಭ್ಯವಿದೆ,'' ಎಂದು ತಿಳಿಸಿದ್ದಾರೆ. ಸಮಸ್ಯೆ ಇರುವುದು ನಿಜ ಆದರೆ, ಕೇಂದ್ರ ಸರಕಾರದ ಅಧಿಕಾರಿಗಳು ಲಸಿಕೆ ಪೂರೈಕೆ ವಿಚಾರದಲ್ಲಿ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ''ಲಸಿಕೆ ಪೂರೈಕೆ ವಿಚಾರದಲ್ಲಿ ಕೇಂದ್ರವು ರಾಜಕಾರಣ ಅಥವಾ ಪಕ್ಷಪಾತ ಮಾಡುತ್ತಿಲ್ಲ. ಜನಸಂಖ್ಯೆ ಆಧರಿಸಿ ಪ್ರೊರೇಟಾ ಆಧಾರದಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ಸಾಗಣೆ, ಕಡಿಮೆ ಉತ್ಪಾದನೆ ಸೇರಿದಂತೆ ಕೆಲವು ಸಮಸ್ಯೆಗಳಿವೆ. ಆಗಸ್ಟ್‌ ವೇಳೆಗೆ ಎಲ್ಲವೂ ಸರಿಹೋಗಬಹುದು,'' ಎಂದು ಮಾಹಿತಿ ನೀಡಿದ್ದಾರೆ. ಕೈಕೊಟ್ಟ ಭಾರತ್‌ ಬಯೋಟೆಕ್‌ 'ಕೊವ್ಯಾಕ್ಸಿನ್‌' ಅನ್ನು ಉತ್ಪಾದಿಸುತ್ತಿರುವ ಭಾರತ್‌ ಬಯೋಟೆಕ್‌ ಉತ್ಪಾದನೆ ಪ್ರಮಾಣ ಹೆಚ್ಚಿಸದೇ ಇರುವುದು ಸಮಸ್ಯೆಯ ಮೂಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಕಳೆದ ಐದು ತಿಂಗಳಲ್ಲಿ ಭಾರತ್‌ ಬಯೋಟೆಕ್‌ ಕೇವಲ ನಾಲ್ಕು ಕೋಟಿ ಡೋಸ್‌ ಪೂರೈಸಿದೆ. ಈಗಾಗಲೇ ಒಪ್ಪಿಕೊಂಡಿರುವಂತೆ ಮುಂದಿನ ಆರು ತಿಂಗಳಲ್ಲಿ 48 ಕೋಟಿ ಡೋಸ್‌ ಸರಬರಾಜು ಮಾಡಲು ಉತ್ಪಾದನೆಯನ್ನು ಒಂಬತ್ತು ಪಟ್ಟು ಹೆಚ್ಚಳ ಮಾಡಬೇಕಿದೆ,'' ಎಂದು ಅವರು ತಿಳಿಸಿದ್ದಾರೆ.