ತರಕಾರಿ ಬಲು ದುಬಾರಿ! ಮಳೆ ಪರಿಣಾಮ ಹೆಚ್ಚಿದ ದರ! ಜನರಿಗೆ ಮತ್ತಷ್ಟು ಹೊರೆ!

​​ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿಗಳ ಪೂರೈಕೆಯಲ್ಲಿ ಕೊರತೆಯಾಗಿ ದರ ದುಬಾರಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಚ್‌, ಬೀನ್ಸ್‌, ಟೊಮೆಟೊ, ಈರುಳ್ಳಿ ಸೇರಿದಂತೆ ಹಲವ ತರಕಾರಿ ದರ ಹೆಚ್ಚಾಗಿದೆ.

ತರಕಾರಿ ಬಲು ದುಬಾರಿ! ಮಳೆ ಪರಿಣಾಮ ಹೆಚ್ಚಿದ ದರ! ಜನರಿಗೆ ಮತ್ತಷ್ಟು ಹೊರೆ!
Linkup
ಎಸ್‌.ಕೆ.ಚಂದ್ರಶೇಖರ್‌ ''ಎರಡು ದಿನದ ಹಿಂದೆಯಷ್ಟೇ ನಾಲ್ಕು ಕೆ.ಜಿ.ಈರುಳ್ಳಿಗೆ 100 ರೂ. ಎಂದು ಬೋರ್ಡ್‌ ಹಾಕಿದ್ರಿ, ಇಂದು ಒಂದು ಕಿಲೋಗೆ 50 ರೂ. ಎಂದರೆ ಖರೀದಿಸುವುದಾದರೂ ಹೇಗೆ...?,'' ''ನಾನೇನ್‌ ಮಾಡ್ಲಿ ಮೇಡಂ, ಮಾರ್ಕೆಟ್‌ನಲ್ಲಿ ಮಾಲೇ ಸಿಗ್ತಿಲ್ಲ. ಅವರು ಹೇಳಿದ ರೇಟ್‌ಗೆ ತಗೊಂಡು ಬಂದು ಮಾರಾಟ ಮಾಡ್ತಿದ್ದೇನೆ ಅಷ್ಟೆ,''ಕುವೆಂಪುನಗರದ ಗೃಹಿಣಿ ಶಾರದಮ್ಮ ಹಾಗೂ ವ್ಯಾಪಾರಿ ವೆಂಕಟೇಶ ಅವರ ನಡುವಿನ ವಾಕ್ಸಮರವಿದು. ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿಗಳ ಪೂರೈಕೆಯಲ್ಲಿ ಕೊರತೆಯಾಗಿ ದರ ದುಬಾರಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಚ್‌, ಬೀನ್ಸ್‌, ಟೊಮೆಟೊ, ಈರುಳ್ಳಿ ಸೇರಿದಂತೆ ಹಲವ ತರಕಾರಿ ದರ ಹೆಚ್ಚಾಗಿದ್ದು, ರಿಟೇಲ್‌ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ. ಮಳೆಗೆ ಬಹುತೇಕ ಕಡೆ ತರಕಾರಿ ಬೆಳೆ ಹಾನಿಯಾಗಿದೆ. ಟೊಮಾಟೊ, ಬೀನ್ಸ್‌ ಸೇರಿದಂತೆ ನಾನಾ ತರಕಾರಿ, ಸೊಪ್ಪುಗಳು ನೆಲಕಚ್ಚಿದ್ದು ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈ ಹಿಂದೆ ಕೆ.ಜಿ.ಗೆ 25-30 ರೂ. ದರವಿದ್ದ ಟೊಮೆಟೊ 40-50ಕ್ಕೆ ಏರಿಕೆಯಾಗಿದೆ. ಒಂದು ಕಂತೆ ದಂಟು, ಮೆಂತ್ಯ, ಪಾಲಕ್‌, ಸಬ್ಸಿಗೆ, ಕೊತ್ತಂಬರಿ ಸೊಪ್ಪು 10 ರೂ. ಆಸು-ಪಾಸಿನಲ್ಲಿದೆ. ಸತತ ಮಳೆ ಎಫೆಕ್ಟ್: ಜಿಲ್ಲೆಯಲ್ಲಿ ಕಳೆದ ತಿಂಗಳು ವರುಣ ಆರ್ಭಟಿಸಿದ್ದರಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗಿತ್ತು. ಅದೇ ರೀತಿ ನವೆಂಬರ್‌ ಮೊದಲ ವಾರದಲ್ಲೂ ಮುಂದುವರಿದಿದ್ದರಿಂದ ದೀಪಾವಳಿ ಸಮಯದಲ್ಲಿ ತರಕಾರಿಗೆ ಹೆಚ್ಚಿನ ಬೇಡಿಕೆಯಿತ್ತು. ಪ್ರಸ್ತುತ ಬೇಡಿಕೆಯಿದ್ದರೂ ತರಕಾರಿಗಳ ಪೂರೈಕೆ ಕುಸಿತ ಕಂಡಿದೆ. ಈರುಳ್ಳಿ, ಟೊಮೆಟೊ ದಿಢೀರ್‌ ದುಬಾರಿ 15-20ರೂ.ಗೆ ದೊರೆಯುತ್ತಿದ್ದ ಟೊಮಾಟೊ ಈಗ ಬಲು ದುಬಾರಿಯಾಗಿದೆ. ನಿರಂತರ ಮಳೆಯಿಂದಾಗಿ ಬೆಳೆ ನೆಲಕಚ್ಚಿದ್ದು, ಅದರಲ್ಲೂ ಹುಣಸೂರು, ಎಚ್‌.ಡಿ.ಕೋಟೆ ಹಾಗೂ ನಂಜನಗೂಡು ಭಾಗದಲ್ಲಿ ಹೆಚ್ಚು ಬೆಳೆಯುವ ಟೊಮೆಟೊ, ಎಲೆಕೋಸು, ಬಾಳೆಗೆ ಬೇಡಿಕೆ ಹೆಚ್ಚಿದೆ. ಮಳೆಗೆ ಸಿಲುಕಿ ಕೆಲವೆಡೆ ಬೆಳೆ ನಾಶವಾಗಿದ್ದು, ಪೂರೈಕೆ ಕುಸಿತ ಕಂಡಿದೆ. ಇದರಿಂದ ಟೊಮೆಟೊ ದರ ಏರಿಕೆಯಾಗುವ ಜತೆಗೆ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಬೆಳೆ ಕೂಡ ಬಾರದೆ ಗ್ರಾಹಕರಿಗೆ ಸಮಸ್ಯೆಯಾಗಿದೆ. ಕಾರ್ತಿಕ ಮಾಸದಲ್ಲಿ ಮತ್ತಷ್ಟು ಹೆಚ್ಚಳ ಸಾಧ್ಯತೆ ಕಾರ್ತಿಕ ಮಾಸ ಆರಂಭವಾಗಿರುವುದರಿಂದ ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ಆರಂಭವಾಗಿರುವುದರಿಂದ ತರಕಾರಿಗಳ ಬಳಕೆಯಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲೂ ಮಳೆ ಹೀಗೆಯೇ ಮುಂದುವರಿದರೆ ತರಕಾರಿ, ಹಣ್ಣು , ಹೂಗಳ ಬೆಲೆಗಳಲ್ಲಿ ಮತ್ತಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ. ತರಕಾರಿಗಳ ಬೆಲೆ ವಿವರ
ತರಕಾರಿ ಹಳೆಯ ದರ ಪ್ರಸ್ತುತ ದರ
ಟೊಮೇಟೋ 30 50
ಬೆಂಡೆಕಾಯಿ 40 60
ಬದನೆಕಾಯಿ 10 30
ಕ್ಯಾರೆಟ್ 30 60
ಬೀನ್ಸ್‌ 40 60
ಈರುಳ್ಳಿ 30 50
"ಮಳೆ ಹೆಚ್ಚಾಗಿರುವುದರಿಂದ ತರಕಾರಿ ಬೆಳೆ ರೋಗಕ್ಕೆ ತುತ್ತಾಗಿ ಕೊಳೆಯುತ್ತಿದ್ದು, ಜಿಲ್ಲೆಯಲ್ಲಿ 240 ಹೆಕ್ಟೇರ್‌ ಬಾಳೆ ಹಾಗೂ ತರಕಾರಿ ಬೆಳೆ ನಷ್ಟಕ್ಕೀಡಾಗಿದೆ." -ಕೆ.ರುದ್ರೇಶ್‌ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ "ತರಕಾರಿ ದರ ದುಬಾರಿಯಾಗಿರುವುರಿಂದ ತರಕಾರಿ ಹಾಗೂ ಸೊಪ್ಪು ಬಳಸುವುದನ್ನು ಕಡಿಮೆ ಮಾಡಿ ಒಣ ಕಾಳುಗಳ ಸಾಂಬರ್‌ ಮಾಡಲಾಗುತ್ತಿದೆ." - ಶ್ರುತಿ ಗೃಹಿಣಿ, ಹೆಬ್ಬಾಳು