ಡ್ರೋನ್‌ ದಾಳಿ ನಿಗ್ರಹಕ್ಕೆ 'ಡಿಆರ್‌ಡಿಒ'ದಿಂದ ಅತ್ಯಾಧುನಿಕ ಡಿ-4 ತಂತ್ರಜ್ಞಾನ ಅಭಿವೃದ್ಧಿ

ದೇಶದ ಭದ್ರತೆಗೆ ಬೆದರಿಕೆಯೊಡ್ಡಿರುವ ಡ್ರೋನ್‌ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ದೇಶದಲ್ಲಿ ತಂತ್ರಜ್ಞಾನ ಲಭ್ಯವಿದೆ ಎಂದು ಡಿಆರ್‌ಡಿಒ ತಿಳಿಸಿದ್ದು, ಜಮ್ಮುವಿನಲ್ಲಿ ನಡೆದಂತಹ ಡ್ರೋನ್‌ ದಾಳಿಗಳನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಿದೆ.

ಡ್ರೋನ್‌ ದಾಳಿ ನಿಗ್ರಹಕ್ಕೆ 'ಡಿಆರ್‌ಡಿಒ'ದಿಂದ ಅತ್ಯಾಧುನಿಕ ಡಿ-4 ತಂತ್ರಜ್ಞಾನ ಅಭಿವೃದ್ಧಿ
Linkup
ಹೊಸದಿಲ್ಲಿ: ದೇಶದ ಭದ್ರತೆಗೆ ಬೆದರಿಕೆಯೊಡ್ಡಿರುವ ಡ್ರೋನ್‌ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ದೇಶದಲ್ಲಿ ತಂತ್ರಜ್ಞಾನ ಲಭ್ಯವಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ () ತಿಳಿಸಿದೆ. ''ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿ-4 ಡ್ರೋನ್‌ ವ್ಯವಸ್ಥೆಯು ಜಮ್ಮುವಿನಲ್ಲಿ ನಡೆದಂತಹ ಡ್ರೋನ್‌ ದಾಳಿಗಳನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದೇ ತಂತ್ರಜ್ಞಾನ ಜಮ್ಮುವಿನಲ್ಲಿ ಇದ್ದಿದ್ದರೆ ಡ್ರೋನ್‌ಗಳನ್ನು ಹೊಡೆದುರುಳಿಸಬಹುದಿತ್ತು,'' ಎಂದು ಡಿಆರ್‌ಡಿಒ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಸಿಸ್ಟಮ್ಸ್‌ (ಇಸಿಎಸ್‌) ಮಹಾ ನಿರ್ದೇಶಕಿ ಜಿಲ್ಲೆಲಾಮುದಿ ಮಂಜುಳಾ ತಿಳಿಸಿದ್ದಾರೆ. ''ಡಿ-4 ವ್ಯವಸ್ಥೆಯು 4 ಕಿಲೋಮೀಟರ್‌ ಮೇಲೆ ಹಾರಾಡುವ ಡ್ರೋನ್‌ಗಳನ್ನು ಪತ್ತೆಹಚ್ಚುವ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಹಲವು ಸೆನ್ಸಾರ್‌ಗಳು, ಡ್ರೋನ್‌ಗಳನ್ನು ಹೊಡೆದುರುಳಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಅತಿ ಸಣ್ಣ ಡ್ರೋನ್‌ಗಳ ಹಾರ್ಡ್‌ವೇರ್‌ ಹಾಳುಮಾಡಿ, ಅದನ್ನು ನಿಷ್ಕ್ರಿಯಗೊಳಿಸುವ ದಕ್ಷತೆ ಹೊಂದಿದೆ,'' ಎಂದು ಮಾಹಿತಿ ನೀಡಿದ್ದಾರೆ. ''ಕಳೆದ ಗಣರಾಜ್ಯೋತ್ಸವದ ವೇಳೆ ರಾಜಪಥ್‌ ಪರೇಡ್‌ಗೆ ಭದ್ರತೆ ಒದಗಿಸಲು ಇದೇ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು. ಹಗಲು-ರಾತ್ರಿ ಈ ತಂತ್ರಜ್ಞಾನ ಬಳಸಿ ಕಣ್ಗಾವಲು ಇರಿಸಿದ್ದು, ಒಂದೇ ಒಂದು ಅನುಮಾನಾಸ್ಪದ ಅಂಶಕ್ಕೆ ಆಸ್ಪದ ನೀಡಿಲ್ಲ,'' ಎಂದು ವಿವರಿಸಿದ್ದಾರೆ. ಕಳೆದ ಭಾನುವಾರ ಜಮ್ಮು ವಿಮಾನ ನಿಲ್ದಾಣದಲ್ಲಿದ್ದ ವಾಯುನೆಲೆ ಮೇಲೆ ಪಾಕಿಸ್ತಾನ ಬೆಂಬಲಿತ ಲಷ್ಕರೆ ಉಗ್ರರು ಎರಡು ಡ್ರೋನ್‌ಗಳ ಮೂಲಕ ಬಾಂಬ್‌ ದಾಳಿ ನಡೆಸಿದ್ದು, ಇದಾದ ಬಳಿಕ ಕಟ್ಟೆಚ್ಚರ ವಹಿಸಲಾಗಿದೆ. ಭಾನುವಾರ ರಾತ್ರಿಯೇ ಹಾರಾಡಿದ ಮತ್ತೆರೆಡು ಡ್ರೋನ್‌ಗಳನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದರು. ಶುಕ್ರವಾರವೂ ಭಾರತದ ಗಡಿಯಲ್ಲಿ ಹಾರಾಟ ನಡೆಸಿದ ಪಾಕಿಸ್ತಾನದ ಡ್ರೋನ್‌ ಅನ್ನು ಬಿಎಸ್‌ಎಫ್‌ ಹಿಮ್ಮೆಟ್ಟಿಸಿದೆ. ಡಿ-4 ವೈಶಿಷ್ಟ್ಯ ಏನು? * 4 ಕಿ.ಮೀ. ಎತ್ತರದಲ್ಲಿ ಹಾರಾಡುವ ಡ್ರೋನ್‌ ಪತ್ತೆ, ಹೊಡೆದುರುಳಿಸುವ ಸಾಮರ್ಥ್ಯ * ಹಲವು ಸೆನ್ಸಾರ್‌ ಅಳವಡಿಕೆ, ಡ್ರೋನ್‌ ಹಾರ್ಡ್‌ವೇರ್‌ ನಿಷ್ಕ್ರಿಯಗೊಳಿಸುವ ದಕ್ಷತೆ * ಏಕಕಾಲದಲ್ಲಿ ಎರಡು ಶತ್ರು ಡ್ರೋನ್‌ಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಕೇರಳದಲ್ಲಿ ಡ್ರೋನ್‌ ಸಂಶೋಧನೆ ಲ್ಯಾಬ್‌ ಭದ್ರತಾ ವ್ಯವಸ್ಥೆಗೆ ಸವಾಲಾಗಿರುವ ಡ್ರೋನ್‌ಗಳನ್ನು ಪತ್ತೆಹಚ್ಚಲು ಕೇರಳದಲ್ಲಿ ಡ್ರೋನ್‌ ಸಂಶೋಧನಾ ಲ್ಯಾಬ್‌ ನಿರ್ಮಿಸಲಾಗುವುದು ಎಂದು ಕೇರಳ ಪೊಲೀಸ್‌ ಮುಖ್ಯಸ್ಥ ಅನಿಲ್‌ ಕಾಂತ್‌ ತಿಳಿಸಿದ್ದಾರೆ. ''ಭದ್ರತಾ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಡ್ರೋನ್‌ಗಳನ್ನು ನಿಗ್ರಹಿಸಲು ಕೇಂದ್ರ ಸರಕಾರದ ಜತೆ ಕೇರಳ ಪೊಲೀಸರು ಕೈಜೋಡಿಸುತ್ತಾರೆ. ಡ್ರೋನ್‌ಗಳನ್ನು ಪತ್ತೆಹಚ್ಚಲು, ಅವುಗಳನ್ನು ನಿಗ್ರಹಿಸಲು ರಾಜ್ಯದ ಸೈಬರ್‌ಡೋಮ್‌ ನೆರವಿನಿಂದ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಲಾಗುವುದು,'' ಎಂದು ಹೇಳಿದ್ದಾರೆ. ಪಾಕ್‌ ಉಗ್ರರಿಂದಲೇ ದಾಳಿ ''ಪಾಕಿಸ್ತಾನ ಕೃಪಾಪೋಷಿತ ಲಷ್ಕರೆ ತಯ್ಬಾ ಹಾಗೂ ಜೈಶೆ ಮೊಹಮ್ಮದ್‌ ಉಗ್ರರೇ ಜಮ್ಮು-ಕಾಶ್ಮೀರದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ , ಸುಧಾರಿತ ಸ್ಫೋಟಕ ಸಾಧನ ಹಾಗೂ ಮಾದಕವಸ್ತುಗಳನ್ನು ಎಸೆಯುತ್ತಿದ್ದಾರೆ ,'' ಎಂದು ಜಮ್ಮು-ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕ ದಿಲ್ಬಾಗ್‌ ಸಿಂಗ್‌ ತಿಳಿಸಿದ್ದಾರೆ. ''ಕಣಿವೆಯಲ್ಲಿ ಶಾಂತಿ ಸ್ಥಾಪನೆ, ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸುವ ದಿಸೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಗಳು ಪಾಕ್‌ ಉಗ್ರರ ನಿದ್ದೆಗೆಡಿಸಿದೆ. ಹಾಗಾಗಿಯೇ ಅವರು ಗಡಿಯಲ್ಲಿ ಇನ್ನಿಲ್ಲದ ಕುತಂತ್ರ ಮಾಡುತ್ತಿದ್ದು, ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ, ಐಇಡಿ, ಡ್ರಗ್ಸ್‌ ಎಸೆಯುತ್ತಿದ್ದಾರೆ. ಆದರೆ, ಉಗ್ರರನ್ನು ಮಟ್ಟಹಾಕಲು ನಮ್ಮ ಸೇನೆ ಸಮರ್ಥವಾಗಿದೆ,'' ಎಂದು ಹೇಳಿದ್ದಾರೆ.