ಚೀನಾದಿಂದ ಮತ್ತೆ ಗಡಿ ತಂಟೆ: ಲಡಾಖ್ ಉದ್ದಕ್ಕೂ ಸೇನಾ ಪಡೆ ನಿಯೋಜನೆ ಹೆಚ್ಚಿಸಿದ ಚೀನಾ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಸಂಪೂರ್ಣ ಬಗೆಹರಿಯುವ ಸಾಧ್ಯತೆ ಕಾಣಿಸುತ್ತಿಲ್ಲ. ಮಾತುಕತೆಯ ಮೂಲಕ ಒಂದಷ್ಟು ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವಾಗಲೇ, ಲಡಾಖ್ ಉದ್ದಕ್ಕೂ ಚೀನಾ ತನ್ನ ಸೇನೆಯನ್ನು ಹೆಚ್ಚಿಸಿದೆ.

ಚೀನಾದಿಂದ ಮತ್ತೆ ಗಡಿ ತಂಟೆ: ಲಡಾಖ್ ಉದ್ದಕ್ಕೂ ಸೇನಾ ಪಡೆ ನಿಯೋಜನೆ ಹೆಚ್ಚಿಸಿದ ಚೀನಾ
Linkup
ಲಡಾಖ್: ಗಡಿಯಲ್ಲಿ ಚೀನಾದೊಂದಿಗಿನ ಸಂಬಂಧ ಕೊಂಚ ಸುಧಾರಿಸುತ್ತಿದೆ ಎನ್ನುವಾಗಲೇ, ಪಡೆಗಳು ಭಾಗದಲ್ಲಿ ಮತ್ತೆ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಲಡಾಖ್ ಬಿಕ್ಕಟ್ಟಿನ ಕುರಿತು ಚೀನಾ ಮತ್ತು 13ನೇ ಸುತ್ತಿನ ಮಾತುಕತೆ ನಡೆಸುವ ನಿರೀಕ್ಷೆ ಇರುವಾಗಲೇ ಚೀನಾ ಪಡೆಗಳಲ್ಲಿ ಹೆಚ್ಚಳವಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಶುಕ್ರವಾರ ಹೇಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಗಡಿ ವಾಸ್ತವ ರೇಖೆ ಬಳಿ ಪರಿಸ್ಥಿತಿ ಬಹಳ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಈಗಿನ ಸನ್ನಿವೇಶ ಕಳವಳಕಾರಿಯಾಗಿದೆ ಎಂದು ತಿಳಿಸಿದ್ದಾರೆ. 'ಪೂರ್ವ ಲಡಾಖ್ ಮತ್ತು ನಮ್ಮ ಪೂರ್ವ ಕಮಾಂಡ್ ಎದುರಿನ ಉತ್ತರ ಮುಂಚೂಣಿ ನೆಲೆಗಳುದ್ದಕ್ಕೂ ಚೀನಾ ಸಾಕಷ್ಟು ತನ್ನ ಪಡೆಗಳನ್ನು ನಿಯೋಜಿಸಿದೆ. ಖಂಡಿತವಾಗಿಯೂ ಅದು ಮುಂಚೂಣಿ ಪ್ರದೇಶಗಳಲ್ಲಿ ತನ್ನ ನಿಯೋಜನೆಯನ್ನು ಹೆಚ್ಚಿಸಿರುವುದು, ನಮಗೆ ಕಳವಳದ ಸಂಗತಿಯಾಗಿದೆ' ಎಂದು ಅವರು ಹೇಳಿದ್ದಾರೆ. 'ಆದರೆ ನಾವು ಅವರ ಎಲ್ಲ ಬೆಳವಣಿಗೆಗಳನ್ನೂ ಪರಿಶೀಲಿಸುತ್ತಿದ್ದೇವೆ. ನಮಗೆ ಸಿಗುತ್ತಿರುವ ಎಲ್ಲ ಮಾಹಿತಿಗಳ ಆಧಾರದಲ್ಲಿ ಮೂಲಸೌಕರ್ಯ ವಿಚಾರದಲ್ಲಿ ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ನಾವು ಕೂಡ ನಡೆಸುತ್ತಿದ್ದೇವೆ. ಈಗಿನ ಸಂದರ್ಭದಲ್ಲಿ ಯಾವುದೇ ರೀತಿಯ ಸನ್ನಿವೇಶವನ್ನು ಎದುರಿಸಲು ಕೂಡ ನಾವು ಬಹಳ ಸನ್ನದ್ಧರಾಗಿದ್ದೇವೆ. ಯಾವುದೇ ಪ್ರದೇಶದಲ್ಲಿಯೂ ಯಾವುದೇ ರೀತಿಯ ಆಕ್ರಮಣಕಾರಿ ವರ್ತನೆ ಕಾಣಿಸುವುದು ಅನುಮಾನ' ಎಂದಿದ್ದಾರೆ. ನಿರಂತರ ಮಾತುಕತೆ ಮೂಲಕ ಸೇನಾ ಹಿಂಪಡೆಯುವ ಕಾರ್ಯ ಉದ್ದೇಶಿತ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಜನರಲ್ ನರವಣೆ, ಎಲ್ಲ ಘರ್ಷಣೆ ನೆಲೆಗಳಿಗೆ ಹಂತ ಹಂತವಾಗಿ ಪರಿಹಾರ ಸಿಗಲಿವೆ. ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು ಎಂಬ ದೃಢ ಅಭಿಪ್ರಾಯ ನಮಗಿದೆ. ಫಲಿತಾಂಶ ಸಾಧಿಸಲು ಸಾಧ್ಯ ಎಂಬ ವಿಶ್ವಾಸ ಹೊಂದಿದ್ದೇನೆ. ಅಕ್ಟೋಬರ್ ಎರಡನೇ ವಾರದಲ್ಲಿ 13ನೇ ಸುತ್ತಿನ ಮಾತುಕತೆ ನಡೆಸುವ ಭರವಸೆ ಇದೆ. ಸೇನಾ ಹಿಂಪಡೆಯುವಿಕೆಯನ್ನು ಹೇಗೆ ನಡೆಸಲಾಗುವುದು ಎಂಬ ಬಗ್ಗೆ ಒಮ್ಮತಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.