ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್ ಉದ್ಯಮ: ಸಬ್‌ ರಿಜಿಸ್ಟ್ರಾರ್‌ ಕಚೇರಿಗಳತ್ತ ಸುಳಿಯದ ಜನರು

ಕರಾರು ಪತ್ರ, ಅಡಮಾನ ಪತ್ರ, ಆಧಾರ ಖುಲಾಸೆ ಪತ್ರ, ಭೋಗ್ಯದ ಕರಾರು, ದಾನಪತ್ರ, ಪಾಲುದಾರಿಕೆ, ಜಿಪಿಎ ಸೇರಿದಂತೆ ಕೆಲವೊಂದು ದಸ್ತಾವೇಜುಗಳು ಮಾತ್ರ ನೋಂದಣಿ ಆಗುತ್ತಿವೆ. ಅಸ್ತಿ ಕ್ರಯಪತ್ರ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ.

ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್ ಉದ್ಯಮ: ಸಬ್‌ ರಿಜಿಸ್ಟ್ರಾರ್‌ ಕಚೇರಿಗಳತ್ತ ಸುಳಿಯದ ಜನರು
Linkup
: ಕೊರೊನಾ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕೆ ಎರಡು ತಿಂಗಳಿನಿಂದ ಹೇರಿದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ಭಾಗಶಃ ತೆರವುಗೊಳಿಸಿದರೂ ಸ್ಥಿರಾಸ್ತಿ ನೋಂದಣಿ, ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಚೇತರಿಸಿಕೊಂಡಿಲ್ಲ. ಪರಿಣಾಮ, ನಗರದಲ್ಲಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಸಾರ್ವಜನಿಕರಿಲ್ಲದೆ ಭಣಗುಡುತ್ತಿವೆ. ರಾಜ್ಯ ಸರಕಾರವು ಆದಾಯ ಕ್ರೋಢೀಕರಣದ ಉದ್ದೇಶದಿಂದ ಲಾಕ್‌ಡೌನ್‌ ನಡುವೆಯೇ ಜೂನ್ 7ರಿಂದ ಉಪ ನೋಂದಣಾಧಿಕಾರಿಗಳ ಕಚೇರಿಗಳ ಕಾರ್ಯಾರಂಭಕ್ಕೆ ಅನುಮತಿ ನೀಡಿತ್ತು. ಆದರೆ, ಆಗಿನಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ದಸ್ತಾವೇಜುಗಳ ನೋಂದಣಿ ಆಗುತ್ತಿಲ್ಲ. ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದರೂ ಮಾರಾಟ, ಖರೀದಿ ವಹಿವಾಟು ಸಹಜ ಸ್ಥಿತಿಗೆ ಮರಳಿಲ್ಲ. ನಗರದ ಬಸವನಗುಡಿ, ಜಯನಗರ, ರಾಜಾಜಿನಗರ, ಗಾಂಧಿನಗರ ಮತ್ತು ಶಿವಾಜಿನಗರ ಜಿಲ್ಲಾ ನೋಂದಣಾಧಿಕಾರಿಗಳ ವ್ಯಾಪ್ತಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಬೆರಳೆಣಿಕೆಯಷ್ಟು ದಸ್ತಾವೇಜುಗಳಷ್ಟೇ ನೋಂದಣಿಯಾದವು. ಕರಾರು ಪತ್ರ, ಅಡಮಾನ ಪತ್ರ, ಆಧಾರ ಖುಲಾಸೆ ಪತ್ರ, ಭೋಗ್ಯದ ಕರಾರು, ದಾನಪತ್ರ, ಪಾಲುದಾರಿಕೆ, ಜಿಪಿಎ ಸೇರಿದಂತೆ ಕೆಲವೊಂದು ದಸ್ತಾವೇಜುಗಳು ಮಾತ್ರ ನೋಂದಣಿ ಆಗುತ್ತಿವೆ. ಅಸ್ತಿ ಕ್ರಯಪತ್ರ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಈ ಕ್ರಯಪತ್ರಗಳ ನೋಂದಣಿ ಕಾರ್ಯವು ನಡೆಯುತ್ತಲೇ ಇಲ್ಲ. ಸ್ಥಿರಾಸ್ತಿಗಳ ಕ್ರಯಪತ್ರ, ಕರಾರು ಪತ್ರಗಳ ನೋಂದಣಿಯಿಂದ ಮಾತ್ರ ಅಧಿಕ ಮುದ್ರಾಂಕ, ನೋಂದಣಿ ಶುಲ್ಕ ಸಂಗ್ರಹವಾಗುತ್ತದೆ. ಆದರೆ, ಕೊರೊನಾದಿಂದ ಎಲ್ಲರೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಿವೇಶನ, ಕಟ್ಟಡಗಳ ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ. 'ಆಸ್ತಿಗಳ ಕ್ರಯಪತ್ರ, ಕರಾರು ಪತ್ರಗಳ ನೋಂದಣಿಗೆ ಸಾರ್ವಜನಿಕರು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳತ್ತ ಸುಳಿಯುತ್ತಲೇ ಇಲ್ಲ. ಕೇವಲ ಆಧಾರ ಪತ್ರ, ಸಾಲ ತೀರುವಳಿ ಪತ್ರ, ದಾನಪತ್ರ, ಪಾಲುದಾರಿಕೆ, ಭೋಗ್ಯದ ಕರಾರು ಸೇರಿದಂತೆ ಕೆಲವೊಂದು ದಸ್ತಾವೇಜುಗಳ ನೋಂದಣಿಗೆ ಮಾತ್ರ ಬರುತ್ತಿದ್ದಾರೆ. ಮೊದಲ ಕೋವಿಡ್‌ ಅಲೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ದಸ್ತಾವೇಜುಗಳ ನೋಂದಣಿ ಮಾಡಲಾಗುತ್ತಿತ್ತು. ಎರಡನೇ ಅಲೆ ಶುರುವಾಗುತ್ತಿದ್ದಂತೆಯೇ ಆಸ್ತಿಗಳ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಸ್ತಿಗಳ ನೋಂದಣಿಗೆ ಬರುತ್ತಿದ್ದಾರೆ' ಎಂದು ಉಪ ನೋಂದಣಾಧಿಕಾರಿಯೊಬ್ಬರು ತಿಳಿಸಿದರು. ಮುದ್ರಾಂಕ, ನೋಂದಣಿ ಶುಲ್ಕವನ್ನು ನಗದು ಹಾಗೂ ಡಿಡಿ ರೂಪದಲ್ಲಿ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. 'ಖಜಾನೆ-2' ತಂತ್ರಾಂಶದಿಂದ ಚಲನ್‌ ಪಡೆದುಕೊಂಡು ನಿಗದಿತ ಶುಲ್ಕವನ್ನು ಲೆಕ್ಕಾಚಾರ ಮಾಡಿ ಸಾರ್ವಜನಿಕರೇ ಬ್ಯಾಂಕ್‌ಗಳಿಗೆ ತೆರಳಿ ಕಟ್ಟಬೇಕು. ಆ ಬಳಿಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಬಂದು ದಸ್ತಾವೇಜುಗಳನ್ನು ನೋಂದಣಿ ಮಾಡಿಸಬೇಕಿದೆ. ಈ ಪ್ರಕ್ರಿಯೆಯಿಂದ ಜನರು ಹೈರಾಣಾಗುವಂತಾಗಿದೆ. 'ಬಹುತೇಕರಿಗೆ ಆನ್‌ಲೈನ್‌ ಬಳಕೆ ಗೊತ್ತಿಲ್ಲ. ಸೈಬರ್‌ ಕೇಂದ್ರಗಳು ಕೂಡ ತೆರೆದಿಲ್ಲ. ಹೀಗಾಗಿ, ಆನ್‌ಲೈನ್‌ ಬಳಕೆ ಗೊತ್ತಿಲ್ಲದವರು ದಸ್ತಾವೇಜುಗಳ ನೋಂದಣಿ, ಮುದ್ರಾಂಕ ಶುಲ್ಕ ಮತ್ತು ಉಪಕರ ಪಾವತಿಸಲು ಖಜಾನೆ-2 ತಂತ್ರಾಂಶದಲ್ಲಿ ಚಲನ್‌ ಪಡೆದುಕೊಂಡು ಬ್ಯಾಂಕ್‌ಗಳಲ್ಲಿ ಕಟ್ಟಲಾಗದೆ ಪರದಾಡುವಂತಾಗಿದೆ' ಎಂದು ಉಪ ನೋಂದಣಾಧಿಕಾರಿಯೊಬ್ಬರು ಮಾಹಿತಿ ನೀಡಿದರು.