ಕೋವಿಡ್ ನಿರ್ಬಂಧ ಸಂವಿಧಾನ ವಿರೋಧಿ ಎಂದ ಅರ್ಜಿದಾರನಿಗೆ 1.50 ಲಕ್ಷ ರೂ ದಂಡ!

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಅಲ್ಲದೆ, ಆದಾಯಕ್ಕೆ ಹೊಡೆತ ಬಿದ್ದಿದೆ. ಇದರಿಂದ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಮದ್ರಾಸ್ ಹೈಕೋರ್ಟ್ ಒಂದೂವರೆ ಲಕ್ಷ ರೂ ದಂಡ ವಿಧಿಸಿದೆ.

ಕೋವಿಡ್ ನಿರ್ಬಂಧ ಸಂವಿಧಾನ ವಿರೋಧಿ ಎಂದ ಅರ್ಜಿದಾರನಿಗೆ 1.50 ಲಕ್ಷ ರೂ ದಂಡ!
Linkup
ಮದುರೆ: ಸಾಂಕ್ರಾಮಿಕದ ಸಂದರ್ಭದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ಒದಗಿಸಬೇಕು ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಮದ್ರಾಸ್ ಹೈಕೋರ್ಟ್‌ ಮದುರೈ ಪೀಠವು 1.50 ಲಕ್ಷ ರೂ ದಂಡ ವಿಧಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ತಮ್ಮ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕದ್ದಲ್ಲದೆ, ತಮ್ಮ ಆದಾಯಕ್ಕೂ ಹೊಡೆತ ನೀಡಿದೆ ಎಂದು ಎಂ ಥವಮಣಿ ಎಂಬುವವರು ಆರೋಪಿಸಿದ್ದರು. ಅವರ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ಡಾ. ಜಿ ಜಯಚಂದ್ರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅರ್ಜಿದಾರ ಅನಗತ್ಯವಾಗಿ ತಂಟೆ ಮಾಡುವ ವ್ಯಕ್ತಿಯಾಗಿದ್ದು, ಪ್ರಚಾರದ ಉದ್ದೇಶದಿಂದಲೇ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಸಮಯವನ್ನು ಅವರು ವ್ಯರ್ಥ ಮಾಡಬಾರದು ಎಂದು ಹೇಳಿತು. ಅರ್ಜಿದಾರರಂತಹ ವ್ಯಕ್ತಿಗಳ ಮನಸ್ಥಿತಿಯು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ತಮ್ಮ ಜೀವಗಳನ್ನು ಕಳೆದುಕೊಂಡ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಕೋವಿಡ್ ವಾರಿಯರ್‌ಗಳ ನಿಸ್ವಾರ್ಥ ಸೇವೆಯನ್ನು ಅವಮಾನಿಸುತ್ತದೆ. ಅರ್ಜಿದಾರರ ರೀತಿಯ ತಂಟೆಕೋರರ ಸಂವೇದನಾರಹಿತ ಚಟುವಟಿಕೆಗಳಿಗೆ, ಕ್ಷುಲ್ಲಕ ಅರ್ಜಿಗಳೊಂದಿಗೆ ನ್ಯಾಯಾಲಯಕ್ಕೆ ಬರುವುದಕ್ಕೆ ಸರಿಯಾದ ಶಿಕ್ಷೆ ನೀಡದೆ ಇದ್ದರೆ, ನಿಸ್ವಾರ್ಥ ಜನರ ತ್ಯಾಗಗಳು ವ್ಯರ್ಥವಾಗುತ್ತದೆ ಎಂಬ ಭಯ ನ್ಯಾಯಾಲಯಕ್ಕೆ ಇದೆ ಎಂದು ಕೋರ್ಟ್ ಹೇಳಿದೆ. ಕೋವಿಡ್ 19 ವೈರಸ್ ಮತ್ತು ಅದರ ತಳಿಗಳು ಮಾರಣಾಂತಿಕ ಕಾಯಿಲೆಯಲ್ಲ, ಆದರೆ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಇದ್ದರೆ ಮತ್ತು ಜನರಿಗೆ ಸೂಕ್ತ ಆರೋಗ್ಯ ಕಾಳಜಿ ನೀಡಿದರೆ ಅದನ್ನು ತೀರಾ ಸಾಧಾರಣ ಚಿಕಿತ್ಸೆಯಲ್ಲಿ ಗುಣಪಡಿಸಬಹುದು ಎಂದು ಅರ್ಜಿದಾರ ಪ್ರತಿಪಾದಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳು, ಮದುರೈನ ಸರ್ಕಾರಿ ರಾಜಾಜಿ ವೈದ್ಯಕೀಯ ಕಾಲೇಜಿನ ಕೋವಿಡ್ 19 ವಾರ್ಡ್‌ಗೆ ಸಲ್ಲಿಕೆಯಾಗುವಂತೆ 15 ದಿನಗಳ ಒಳಗೆ 1.50 ಲಕ್ಷ ರೂ ಮೊತ್ತವನ್ನು ಪಾವತಿ ಮಾಡುವಂತೆ ಆದೇಶಿಸಿತು. ನೀಡಿದ ಸಮಯದ ಒಳಗೆ ಹಣ ಪಾವತಿ ಮಾಡಲು ಅರ್ಜಿದಾರ ವಿಫಲವಾದರೆ ಮದುರೆ ಜಿಲ್ಲಾಧಿಕಾರಿಗಳು 1890ರ ಕಂದಾಯ ವಸೂಲಿ ಕಾಯ್ದೆಯಡಿ ದಂಡ ವಸೂಲಿ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.