ಕೋವಿಡ್ 2ನೇ ಅಲೆಯ‌ ಆತಂಕ, ರೇಟಿಂಗ್‌ ಏಜೆನ್ಸಿಗಳಿಂದ ಜಿಡಿಪಿ ಮುನ್ನೋಟ ಇಳಿಕೆ

ನೊಮುರಾ, ಗೋಲ್ಡ್‌ಮ್ಯಾನ್ಸ್ ಸ್ಯಾಕ್ಸ್‌ ಮೊದಲಾದ ಸಂಸ್ಥೆಗಳು ಭಾರತದ ಜಿಡಿಪಿ ಮುನ್ನೋಟವನ್ನು ಕಡಿತಗೊಳಿಸಿದ್ದು, ಒಂದು ಸಲ ನಿರ್ಬಂಧಗಳು ಸಡಿಲವಾದ ಬಳಿಕ ಬೆಳವಣಿಗೆ ಮತ್ತೆ ಸುಧಾರಿಸಬಹುದು ಎಂದಿವೆ.

ಕೋವಿಡ್ 2ನೇ ಅಲೆಯ‌ ಆತಂಕ, ರೇಟಿಂಗ್‌ ಏಜೆನ್ಸಿಗಳಿಂದ ಜಿಡಿಪಿ ಮುನ್ನೋಟ ಇಳಿಕೆ
Linkup
ಹೊಸದಿಲ್ಲಿ: ನಾನಾ ರಾಜ್ಯಗಳಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆರ್ಥಿಕತೆಯ ಚೇತರಿಕೆಗೆ ಹೊಡೆತ ಕೊಡುವ ಆತಂಕ ಸೃಷ್ಟಿಸಿದೆ. ಹಣಕಾಸು ವಲಯದ ನಾನಾ ಸಂಸ್ಥೆಗಳು ಬೆಳವಣಿಗೆಯ ಮುನ್ನೋಟವನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ ಒಟ್ಟಾರೆಯಾಗಿ ಈ ವರ್ಷದ ಬೆಳವಣಿಗೆಯ ಅಂದಾಜನ್ನು ಶೇ.10.9ರಿಂದ ಶೇ.10.5ಕ್ಕೆ ತಗ್ಗಿಸಿದೆ. ಆದರೆ ಈ ಹಿಂದಿನ ಶೇ.9.4ರ ಮಟ್ಟಕ್ಕಿಂತ ಮೇಲ್ಮಟ್ಟದಲ್ಲಿದೆ. ''ಈ ಸಲ ಲಾಕ್‌ಡೌನ್‌ ನಿರ್ದಿಷ್ಟ ಸೇವೆಗಳಿಗೆ ಪರಿಣಾಮ ಬೀರಬಹುದು. ಹೋಟೆಲ್‌, ರೆಸ್ಟೊರೆಂಟ್‌, ಸಾರಿಗೆ, ಮನರಂಜನೆ, ವಿಹಾರ ಇತ್ಯಾದಿ ಕ್ಷೇತ್ರಗಳಿಗೆ ಸೀಮಿತವಾಗಬಹುದು. ನಿರ್ಮಾಣ, ಉತ್ಪಾದನೆ ವಲಯಕ್ಕೆ ತೊಂದರೆಯಾಗುವ ಸಾಧ್ಯತೆ ಕಡಿಮೆಯಾಗಿದೆ'' ಎಂದು ಗೋಲ್ಡ್‌ಮ್ಯಾನ್‌ ವರದಿ ತಿಳಿಸಿದೆ. ಒಂದು ಸಲ ನಿರ್ಬಂಧಗಳು ಸಡಿಲವಾದ ಬಳಿಕ ಬೆಳವಣಿಗೆ ಮತ್ತೆ ಸುಧಾರಿಸಬಹುದು ಎಂದಿದೆ. ಜಪಾನಿನ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ನೊಮುರಾ, 2021ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ.12.4ರಿಂದ ಶೇ.11.5ಕ್ಕೆ ತಗ್ಗಿಸಿದೆ. ಮೂಡೀಸ್‌ ಇನ್ವೆಸ್ಟರ್ಸ್ ಸರ್ವೀಸ್‌ ಕೂಡ ಕೋವಿಡ್‌-19 ವ್ಯಾಪಕವಾಗಿ ಹರಡುತ್ತಿರುವುದರ ಬಗ್ಗೆ ಎಚ್ಚರಿಸಿದೆ. ಜಾಗತಿಕ ಹಣಕಾಸು ದಿಗ್ಗಜ ಬಾರ್‌ಕ್ಲೇಸ್‌ ಪ್ರಕಾರ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ರಾಜಸ್ಥಾನದಲ್ಲಿನ ಈಗಿನ ನಿರ್ಬಂಧಗಳಿಂದ ಜಿಡಿಪಿಗೆ ಪ್ರತಿ ವಾರ 9,490 ಕೋಟಿ ರೂ. ನಷ್ಟವಾಗಲಿದೆ (1.3 ಶತಕೋಟಿ ಡಾಲರ್‌). ಒಂದು ವೇಳೆ ಮೇ ಅಂತ್ಯದ ತನಕ ಈಗಿನ ನಿರ್ಬಂಧಗಳು ಮುಂದುವರಿದರೆ ಆರ್ಥಿಕತೆಗೆ 10.5 ಶತಕೋಟಿ ಡಾಲರ್‌ (76,650 ಕೋಟಿ ರೂ.) ನಷ್ಟವಾಗಲಿದೆ. ಜಿಎಸ್‌ಟಿ ಸಂಗ್ರಹ 20% ಇಳಿಕೆ ಸಂಭವ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಹಾಗೂ ಇತರ ಕೆಲ ರಾಜ್ಯಗಳಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧಿತ ನಾನಾ ನಿರ್ಬಂಧಗಳ ಪರಿಣಾಮ ಮೇನಲ್ಲಿ ಜಿಎಸ್‌ಟಿ ಸಂಗ್ರಹ ಶೇ.20 ಇಳಿಕೆಯಾಗುವ ನಿರೀಕ್ಷೆ ಇದೆ. ಜಿಎಸ್‌ಟಿಗೆ ಮಹಾರಾಷ್ಟ್ರ ದೊಡ್ಡ ಕೊಡುಗೆ ನೀಡುತ್ತಿದೆ. ಮಧ್ಯಪ್ರದೇಶ ಹಾಗೂ ಕೆಲ ರಾಜ್ಯಗಳಲ್ಲಿ ನಿರ್ಬಂಧಗಳಿವೆ. ಹೀಗಾಗಿ ಮೇ ತಿಂಗಳಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 20ರಷ್ಟು ಇಳಿಕೆಯಾಗಬಹುದು ಎಂದು ಕೆಪಿಎಂಜಿ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ. ಸಾರ್ವಜನಿಕ ಚಲನವಲನಗಳಿಗೆ ನಿರ್ಬಂಧಗಳ ಪರಿಣಾಮ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗುವುದರಿಂದ ಜಿಎಸ್‌ಟಿ ಸಂಗ್ರಹ ಇಳಿಕೆಯಾಗುವ ಸಾಧ್ಯತೆ ಇದೆ.