ಕೊರೊನಾ 2ನೇ ಅಲೆ ಮುಗಿದಿಲ್ಲ.. ಹಬ್ಬದ ಸಂಭ್ರಮದಲ್ಲಿ ಮೈಮರೆಯಬೇಡಿ: ಕೇಂದ್ರದ ಎಚ್ಚರಿಕೆ..!

'ಸಾಲು ಸಾಲು ಹಬ್ಬಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಬರಲಿವೆ. ದೇಶಾದ್ಯಂತ ಜನಸಾಮಾನ್ಯರು ಸಂಭ್ರಮದಲ್ಲಿ ಮುಳುಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ' - ಕೇಂದ್ರದ ಎಚ್ಚರಿಕೆ

ಕೊರೊನಾ 2ನೇ ಅಲೆ ಮುಗಿದಿಲ್ಲ.. ಹಬ್ಬದ ಸಂಭ್ರಮದಲ್ಲಿ ಮೈಮರೆಯಬೇಡಿ: ಕೇಂದ್ರದ ಎಚ್ಚರಿಕೆ..!
Linkup
: ಕೋವಿಡ್‌ -19 ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದಿರುವ ಕೇಂದ್ರ ಸರಕಾರವು, ಮುಂದಿನ ಎರಡು ತಿಂಗಳು ದೇಶಾದ್ಯಂತ ಹಬ್ಬಗಳ ವಾತಾವರಣ ಇರಲಿದ್ದು, ಮುನ್ನೆಚ್ಚರಿಕೆ ಪಾಲನೆಯನ್ನು ಜನರು ಮರೆಯಬಾರದು ಎಂದು ಮನವಿ ಮಾಡಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌, 'ಸಾಲು ಸಾಲು ಹಬ್ಬಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಬರಲಿವೆ. ದೇಶಾದ್ಯಂತ ಜನಸಾಮಾನ್ಯರು ಸಂಭ್ರಮದಲ್ಲಿ ಮುಳುಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಮೈಮರೆತರೆ ಸೋಂಕು ಹೆಚ್ಚಳವಾಗುತ್ತದೆ. ಕೊರೊನಾ ವೈರಾಣು ಪ್ರಸರಣ ಮಿತಿಮೀರುವ ಅಪಾಯವಿದೆ' ಎಂದು ಎಚ್ಚರಿಸಿದರು. ದೇಶದ 41 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ದರವು ಶೇ. 10ಕ್ಕಿಂತ ಹೆಚ್ಚಿದೆ. ಗುರುವಾರ ಬೆಳಗ್ಗೆವರೆಗೆ, ಹಿಂದಿನ 24 ಗಂಟೆಗಳಲ್ಲಿ 46,164 ಹೊಸ ಸೋಂಕಿತರು ವರದಿಯಾಗಿದ್ದಾರೆ. ಸೋಂಕಿನಿಂದ 607 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 3.25 ಕೋಟಿ ದಾಟಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇ. 1.03ರಷ್ಟಿದೆ. 'ಲಸಿಕೆಗಳಿಗೆ ಪೂರ್ಣ ರೂಪದಲ್ಲಿ ಸೋಂಕನ್ನು ತಡೆಯುವಷ್ಟು ಶಕ್ತಿ ಇರುವುದಿಲ್ಲ. ಅವುಗಳು ಸೋಂಕಿನ ಲಕ್ಷಣಗಳನ್ನು ಮಾರ್ಪಡಿಸಿ, ದೇಹಕ್ಕೆ ಹೆಚ್ಚು ಹಾನಿ ಆಗದಂತೆ ತಡೆಯುತ್ತವೆ ಅಷ್ಟೇ. ಹಾಗಾಗಿ ಕೊರೊನಾ ನಿರೋಧಕ ಲಸಿಕೆ ಪಡೆದವರೂ ಕೂಡ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯ' ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಬಲರಾಮ್‌ ಭಾರ್ಗವ ಎಚ್ಚರಿಕೆ ನೀಡಿದ್ದಾರೆ.