ಕೆಂಪುಕೋಟೆ ವಶ, ದೇಶಕ್ಕೆ ಮುಜುಗರ ಉಂಟುಮಾಡುವುದು ಗಣರಾಜ್ಯೋತ್ಸವ ಹಿಂಸಾಚಾರದ ಉದ್ದೇಶ: ದಿಲ್ಲಿ ಪೊಲೀಸರ ಆರೋಪಪಟ್ಟಿ

ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 16 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಇದು ಪೂರ್ವ ನಿಯೋಜಿತ ಸಂಚು ಎಂದು ಅವರು ಆರೋಪಿಸಿದ್ದಾರೆ.

ಕೆಂಪುಕೋಟೆ ವಶ, ದೇಶಕ್ಕೆ ಮುಜುಗರ ಉಂಟುಮಾಡುವುದು ಗಣರಾಜ್ಯೋತ್ಸವ ಹಿಂಸಾಚಾರದ ಉದ್ದೇಶ: ದಿಲ್ಲಿ ಪೊಲೀಸರ ಆರೋಪಪಟ್ಟಿ
Linkup
ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಪೂರ್ವ ನಿಯೋಜಿತ ಹಾಗೂ ಸಂಯೋಜಿತ ಸಂಚು ಇದಾಗಿತ್ತು ಎಂದು ವಿವರಿಸಿದ್ದಾರೆ. ಈ ದೇಶದ ಜನರನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಹಾಗೂ ಅವಮಾನ ಉಂಟುಮಾಡುವ ಉದ್ದೇಶದಿಂದ ಮಹತ್ವದ ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಗೆ ಮುತ್ತಿಗೆ ಹಾಕಿ ಅಲ್ಲಿ ನಿಶಾನ್ ಸಾಹಿಬ್ ಮತ್ತು ಕಿಸಾನ್ ಬಾವುಟಗಳನ್ನು ಹಾರಿಸುವುದು ಇದರ ಹಿಂದಿನ ಸಂಚಾಗಿತ್ತು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. ಗಣರಾಜ್ಯ ದಿನದಂದು ಟ್ರ್ಯಾಕ್ಟರ್ ಮೆರವಣಿಗೆಗೆ ಮೂರು ಮಾರ್ಗಗಳಲ್ಲಿ ಅವಕಾಶ ನೀಡುವ ಸಂಬಂಧ ಪೊಲೀಸರು ಮತ್ತು ರೈತ ಮುಖಂಡರ ನಡುವೆ ನಡೆದಿದ್ದ ಒಪ್ಪಂದವನ್ನು ಉಲ್ಲಂಘಿಸಲು ಪ್ರತಿಭಟನಾಕಾರರು ಪೂರ್ವ ಸಭೆ ನಡೆಸಿದ್ದರು ಮತ್ತು ಉತ್ತಮ ಸಮನ್ವಯ ಸಾಧಿಸಿದ್ದರು. ಕೆಂಪುಕೋಟೆಯನ್ನು ಆಕ್ರಮಿಸುವುದು ಮತ್ತು ವಶಕ್ಕೆ ಪಡೆದುಕೊಳ್ಳುವುದು ಹಾಗೂ ಅದನ್ನು ರೈತರ ಪ್ರತಿಭಟನೆಯ ಹೊಸ ಸ್ಥಳವನ್ನಾಗಿಸುವುದನ್ನು ಅವರು ಬಯಸಿದ್ದರು ಎಂದು ತಿಳಿಸಿದ್ದಾರೆ. ಪಂಜಾಬ್ ನಟ ಹಾಗೂ ಕಾರ್ಯಕರ್ತರಾದ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ ಸೇರಿದಂತೆ 16 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಅಂದಾಜು 1,000 ಜನರು 30-40 ಟ್ರ್ಯಾಕ್ಟರ್‌ಗಳಲ್ಲಿ ಹಾಗೂ 150 ಮೋಟಾರ್ ಸೈಕಲ್ ಮತ್ತು ಕಾರ್‌ಗಳಲ್ಲಿ ಬಲವಂತವಾಗಿ ಆವರಣವನ್ನು ಪ್ರವೇಶಿಸಿದ್ದರು. ಅಲ್ಲಿ ಪೊಲೀಸರನ್ನು ಬೆನ್ನಟ್ಟಿ ಹಲ್ಲೆ ನಡೆಸಿದರು. ದಂಗೆ ನಿಗ್ರಹ ಉಪಕರಣಗಳನ್ನು ಲೂಟಿ ಮಾಡಿದರು. ಸಾರ್ವಜನಿಕ ಶೌಚಾಲಯವೊಂದರಲ್ಲಿ ಕೆಲವರನ್ನು ಒತ್ತೆಯಾಳಾಗಿ ಇರಿಸಿಕೊಂಡು, ಟಿಕೆಟ್ ಕೌಂಟರ್ ಅನ್ನು ಧ್ವಂಸಮಾಡಿದರು ಎಂದು ಹೇಳಲಾಗಿದೆ.