ಕೇಂದ್ರ ಸರಕಾರಕ್ಕೆ ಈ ವರ್ಷ ನಿರೀಕ್ಷೆಗೂ ಮೀರಿದ ತೆರಿಗೆ ವರಮಾನ! ತರುಣ್ ಬಜಾಜ್

ಅಕ್ಟೋಬರ್‌ ವರೆಗೆ ಸಂಗ್ರಹವಾಗಿರುವ ನೇರ ತೆರಿಗೆಗಳ ನಿವ್ವಳ ಮೊತ್ತ 6 ಲಕ್ಷ ಕೋಟಿ ರೂಪಾಯಿ ದಾಟಿದೆ. 2021-22ರಲ್ಲಿ ಕೇಂದ್ರ ಸರಕಾರದ ತೆರಿಗೆ ಸಂಗ್ರಹ ಪ್ರಮಾಣವು ಬಜೆಟ್‌ ಅಂದಾಜುಗಳನ್ನು ಮೀರಿಸಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಕೇಂದ್ರ ಸರಕಾರಕ್ಕೆ ಈ ವರ್ಷ ನಿರೀಕ್ಷೆಗೂ ಮೀರಿದ ತೆರಿಗೆ ವರಮಾನ! ತರುಣ್ ಬಜಾಜ್
Linkup
ಹೊಸದಿಲ್ಲಿ: ದೇಶದಲ್ಲಿ ಕಳೆದ ಅಕ್ಟೋಬರ್‌ ವರೆಗೆ ಸಂಗ್ರಹವಾಗಿರುವ ನೇರ ತೆರಿಗೆಗಳ ನಿವ್ವಳ ಮೊತ್ತ 6 ಲಕ್ಷ ಕೋಟಿ ರೂಪಾಯಿ ದಾಟಿದೆ. ಅಲ್ಲದೆ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸರಾಸರಿ ಮಾಸಿಕ 'ಸರಕು ಮತ್ತು ಸೇವೆಗಳ ತೆರಿಗೆ' (ಜಿಎಸ್‌ಟಿ) ಸುಮಾರು 1.15 ಲಕ್ಷ ಕೋಟಿ ರೂಪಾಯಿಯಷ್ಟಾಗುವ ಅಂದಾಜಿದೆ. ಹೀಗಾಗಿ 2021-22ರಲ್ಲಿ ಕೇಂದ್ರ ಸರಕಾರದ ಪ್ರಮಾಣವು ಬಜೆಟ್‌ ಅಂದಾಜುಗಳನ್ನು ಮೀರಿಸಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಹಾಗೂ ಅಡುಗೆ ಎಣ್ಣೆ ಮೇಲಿನ ಸೀಮಾ ಸುಂಕ ಕಡಿಮೆ ಮಾಡಿದ್ದರ ಪರಿಣಾಮವಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ ಈ ವರ್ಷ ಸುಮಾರು 80,000 ಕೋಟಿ ರೂಪಾಯಿಯಷ್ಟ ನಷ್ಟ ಸಂಭವಿಸಲಿದೆ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬಜೆಟ್‌ನಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದ ಮೂಲಕ ಒಟ್ಟು 22.2 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹ ಮಾಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿತ್ತು. ಅಲ್ಲದೆ ತೆರಿಗೆ ಸಂಗ್ರಹದಲ್ಲಿ ಶೇ.9.5ರಷ್ಟು ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯೂ ಇತ್ತು. ಕಳೆದ ಆರ್ಥಿಕ ವರ್ಷ (2020-21)ದಲ್ಲಿ ತೆರಿಗೆ ಮೂಲಕ 20.2 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ನೇರ ತೆರಿಗೆಗಳ ಮೂಲಕ ಈ ವರ್ಷದಲ್ಲಿ ಒಟ್ಟು 11 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ಕಾರ್ಪೋರೇಟ್‌ ತೆರಿಗೆಗಳ ಮೂಲಕ 5.47 ಲಕ್ಷ ಕೋಟಿ ರೂಪಾಯಿ, ಹಾಗೂ ಆದಾಯ ತೆರಿಗೆ ಮೂಲಕ 5.61 ಲಕ್ಷ ಕೋಟಿ ರೂಪಾಯಿ ಸಂಗ್ರಹವೂ ಸೇರಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹ ಆಗುವ ವರಮಾನವು ನವೆಂಬರ್‌ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಇರಲಿದೆ. ಆದರೆ, ಇದು ಡಿಸೆಂಬರ್‌ನಲ್ಲಿ ತುಸು ಕಡಿಮೆ ಆಗಬಹುದು. ಜನವರಿ - ಮರ್ಚ್‌ ತ್ರೈಮಾಸಿಕದಲ್ಲಿ ಜಿಎಸ್‌ಟಿ ವರಮಾನ ಸಂಗ್ರಹ ಮತ್ತೆ ಹೆಚ್ಚಳ ಆಗಲಿದೆ ಎಂದು ಕೇಂದ್ರವು ಅಂದಾಜು ಮಾಡಿದೆ ಎಂದು ತರುಣ್‌ ಬಜಾಜ್‌ ತಿಳಿಸಿದ್ದಾರೆ.