(): ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಕೊನೆಗೂ ಚಾಲನೆ ಸಿಕ್ಕಿದೆ. ವಿಸ್ತರಣೆ ಬಳಿಕ ಟ್ರಾಫಿಕ್ ಜಾಮ್‌ಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಹಲವೆಡೆಗೆ ಸಂಪರ್ಕ ಸುಲಭವಾಗಲಿದೆ.
ಬಿಬಿಎಂಪಿ ಬೃಹತ್ ರಸ್ತೆ ಕಾಮಗಾರಿ ವಿಭಾಗದ ವತಿಯಿಂದ 51 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೆಂಗೇರಿ ರಸ್ತೆಯ ಕೃಷ್ಣಪ್ರಿಯ ಕನ್ವೆನ್ಷನ್ ಹಾಲ್‌ನಿಂದ ಆದಿತ್ಯ ಬೇಕರಿವರೆಗಿನ 3.5 ಕಿ.ಲೋ ಮೀಟರ್ ಉದ್ದ ರಸ್ತೆ ವಿಸ್ತರಣೆಯಾಗಲಿದೆ.
4 ಪಥದ ರಸ್ತೆ ನಿರ್ಮಾಣ: ಪ್ರಸ್ತುತ ರಸ್ತೆ 7 ಮೀಟರ್‌ನಿಂದ 15 ಮೀಟರ್ ಅಗಲವಿದೆ. ಇದನ್ನು 24 ಮೀಟರ್ ಅಗಲಗೊಳಿಸಲು ಉದ್ದೇಶಿಸಲಾಗಿದೆ. 4 ಪಥದ ರಸ್ತೆ ನಿರ್ಮಿಸುತ್ತಿದ್ದು, ಎರಡೂ ಬದಿ 3 ಮೀಟರ್‌ನ ಫುಟ್‌ಪಾತ್ ನಿರ್ಮಾಣವಾಗಲಿದೆ. ರಸ್ತೆ ವಿಸ್ತರಣೆಗೆ ಒಟ್ಟು 23,412.55 ಚದರ ಮೀಟರ್ ಭೂಮಿ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕೆಲ ಆಸ್ತಿಗಳಿಗೆ ಪರಿಹಾರ ಕೊಡುವುದು ಬಾಕಿ ಇದೆ. ಒಂದು ವರ್ಷ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ವಾಹನ ದಟ್ಟಣೆ ಏಕೆ ?: ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಬಿಡದಿ, ಕುಂಬಳಗೋಡು, ರಾಮೋಹಳ್ಳಿ ಕಡೆಯಿಂದ ಬನಶಂಕರಿ, ಹೊಸಕೆರೆಹಳ್ಳಿ, ಹನುಮಂತನಗರ, ರಾಜರಾಜೇಶ್ವರಿ ನಗರಕ್ಕೆ ತೆರಳಲು ಈ ರಸ್ತೆ ಬಳಕೆಯಾಗುತ್ತದೆ. ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ದುಬಾಸಿ ಪಾಳ್ಯ ನಾಗರಿಕರು ಇದೇ ರಸ್ತೆಯನ್ನು ಬಳಸುತ್ತಾರೆ. ಜೆಎಸ್‌ಎಸ್ ತಾಂತ್ರಿಕ ಮಹಾವಿದ್ಯಾಲಯ, ಬಿಜಿಎಸ್ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಸ್ಥೆಗಳು, ಅಭಿಮಾನ್ ಸ್ಟುಡಿಯೋ, ಓಂಕಾರ್ ಧಾರ್ಮಿಕ ಕೇಂದ್ರ, ಗ್ಲೋಬಲ್ ಸಿಟಿ ಟೆಕ್ ಪಾರ್ಕ್ ಈ ರಸ್ತೆಗೆ ಹೊಂದಿಕೊಂಡೇ ಇವೆ. ಇದರಿಂದಾಗಿ ಸದಾ ದಟ್ಟಣೆ ಇರುತ್ತದೆ.
'ಕೆಂಗೇರಿ ಉತ್ತರಹಳ್ಳಿ ಮುಖ್ಯರಸ್ತೆಯ ಅಲ್ಲಲ್ಲಿ ಹೊಂಡ ಬಿದ್ದಿದೆ. ಜತೆಗೆ ಟ್ರಾಪಿಕ್ ಜಾಮ್ ಕಿರಿಕಿರಿ ಮಾಮೂಲಾಗಿದೆ. ರಸ್ತೆ ವಿಸ್ತರಣೆ ಜತೆಗೆ ಅಭಿವೃದ್ಧಿಯಾದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ' ಎನ್ನುತ್ತಾರೆ, ಆಟೋ ಚಾಲಕ ಆಂಜನಪ್ಪ.
'ಈ ರಸ್ತೆಯಲ್ಲಿ ಹಲವು ಶಾಲಾ-ಕಾಲೇಜುಗಳಿವೆ. ಬೆಳಗ್ಗೆ ಪೀಕ್ ಅವರ್‌ನಲ್ಲಂತೂ ಕಾಲೇಜು ತಲುಪುವುದೇ ಕಷ್ಟ ಎಂಬಂತಾಗುತ್ತದೆ. ಕಿರಿದಾದ ರಸ್ತೆಯಿಂದಾಗಿ ಟ್ರಾಫಿಕ್ ಜಾಮ್ ಮಾಮೂಲಿಯಂತಾಗಿದೆ' ಎನ್ನುತ್ತಾರೆ, ಜೆಎಸ್‌ಎಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಗೌತಮ್.
ಪರಿಹಾರ ನಿರೀಕ್ಷೆ: ಕೆಂಗೇರಿ - ಉತ್ತರಹಳ್ಳಿ ರಸ್ತೆ ವಿಸ್ತರಣೆಗೆ 2007ರಲ್ಲಿಯೇ ಯೋಜನೆ ಸಿದ್ದಪಡಿಸಲಾಗಿತ್ತು. ರಸ್ತೆಗೆ ಹೊಂದಿಕೊಂಡಿರುವ ನಿವೇಶನ ಮಾಲೀಕರಿಗೆ 18 ಅಡಿಗಳಷ್ಟು ಜಾಗವನ್ನು ರಸ್ತೆ ವಿಸ್ತರಣೆಗೆ ಬಿಟ್ಟು ಕಟ್ಟಡ ನಿರ್ಮಿಸಿಕೊಳ್ಳುವಂತೆ ಬಿಬಿಎಂಪಿ ನೋಟೀಸ್ ನೀಡಿತ್ತು.
ಕಾನೂನು ಸಮಸ್ಯೆ ಮತ್ತು ಕೆಲವು ತಾಂತ್ರಿಕ ಅಡಚಣೆಯಿಂದ ಕಾಮಗಾರಿಗೆ ಗ್ರಹಣ ಹಿಡಿದಿತ್ತು. ರಸ್ತೆ ವಿಸ್ತರಣೆ ಸಂಬಂಧ ನೋಟಿಸ್ ಪಡೆದಿದ್ದ ಮಾಲೀಕರು, ಇತ್ತ ಕಟ್ಟಡ ನಿರ್ಮಿಸಲೂ ಆಗದೆ, ಮಾರಾಟ ಮಾಡಲೂ ಆಗದೆ ಗೊಂದಲಕ್ಕೆ ಸಿಲುಕಿದ್ದರು. ಪರಿಹಾರ ವಿತರಣೆ ಕಾರ್ಯವೂ ವಿಳಂಬವಾಗಿತ್ತು. ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿರುವುದರಿಂದ ಗೊಂದಲಕ್ಕೆ ತೆರೆ ಬಿದ್ದಿದೆ. ಆ ಮೂಲಕ ಜಾಗದ ಮಾಲೀಕರು ನಿರಾಳರಾಗುವಂತಾಗಿದೆ.
'ರಸ್ತೆಗೆ ಹೊಂದಿಕೊಂಡಂತೆ ನಮ್ಮ ನಿವೇಶನವಿದೆ. ಕಟ್ಟಡ ನಿರ್ಮಿಸಲೂ ಆಗದೆ, ಮಾರಾಟ ಮಾಡಲೂ ಆಗದೆ ಗೊಂದಲಕ್ಕೆ ಸಿಲುಕಿದ್ದೆವು. ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿರುವುದರಿಂದ ಶೀಘ್ರ ಪರಿಹಾರ ಸಿಗುವ ನಿರೀಕ್ಷೆ ಇದೆ' ಎಂದು ನಿವೇಶನದ ಮಾಲೀಕ ಮುರುಗೇಶ್ ಹೇಳಿದರು.
ಕಾಮಗಾರಿಗೆ ಶಂಕುಸ್ಥಾಪನೆ: ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ, ಡಾಂಬರೀಕರಣ ಮತ್ತು ಅಗತ್ಯ ಅಭಿವೃದ್ಧಿ ಕಾಮಗಾರಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಸಹಕಾರ ಸಚಿವ ಎಸ್ .ಟಿ.ಸೋಮಶೇಖರ್ ಮಾತನಾಡಿ, 'ಕೇತ್ರ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವುದರಿಂದ ಅಭಿವೃದ್ಧಿ ಕಾಮಗಾರಿ ವೇಗ ಸಿಗಲಿದೆ. ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ' ಎಂದರು.
ಬಿಬಿಎಂಪಿ ಹೆಮ್ಮಿಗೆಪುರ ವಾರ್ಡ್ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಮಾತನಾಡಿ, 'ರಸ್ತೆ ವಿಸ್ತರಣೆಯಿಂದ ಸಂಚಾರ ದಟ್ಟಣೆ ಪರಿಹಾರ ಸಿಗಲಿದೆ' ಎಂದರು.