ಕೋಕ್‌ ಬದಲು ನೀರೆತ್ತಿಕೊಂಡ ರೊನಾಲ್ಡೊ, ಕೋಕಾ ಕೋಲಾಗೆ 4 ಬಿಲಿಯನ್‌ ಡಾಲರ್‌ ನಷ್ಟ!

ಖ್ಯಾತ ಫೂಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಮಾಡಿದ್ದು ಇಷ್ಟೇ. ಪತ್ರಿಕಾಗೋಷ್ಠಿಯಲ್ಲಿ ಕೋಕಾ ಕೋಲಾ ಬಾಟಲಿಯನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದು. ಅಷ್ಟಕ್ಕೇ ಕಂಪನಿಯ ಮಾರುಕಟ್ಟೆ ಮೌಲ್ಯ 4 ಬಿಲಿಯನ್‌ ಡಾಲರ್‌ ಕುಸಿದಿದೆ.

ಕೋಕ್‌ ಬದಲು ನೀರೆತ್ತಿಕೊಂಡ ರೊನಾಲ್ಡೊ, ಕೋಕಾ ಕೋಲಾಗೆ 4 ಬಿಲಿಯನ್‌ ಡಾಲರ್‌ ನಷ್ಟ!
Linkup
ಹೊಸದಿಲ್ಲಿ: ಮಂಗಳವಾರ ನಡೆದ ಯೂರೋ ಕಪ್‌ ಪಂದ್ಯಾವಳಿಯ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಫೂಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಸಣ್ಣ ನಡೆ ಜಾಗತಿಕ ದೈತ್ಯ ಕಂಪನಿ ಕೋಕಾ ಕೋಲಾಗೆ ಭಾರಿ ನಷ್ಟ ಉಂಟು ಮಾಡಿದೆ. ಹಂಗರಿ ವಿರುದ್ಧದ ಪಂದ್ಯಕ್ಕೂ ಮುನ್ನ ಬುದಾಪೆಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಆಗಮಿಸಿದ ಪೋರ್ಚುಗಲ್‌ ತಂಡದ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ, ಕುರ್ಚಿಯಲ್ಲಿ ಕೂರುವ ಮುನ್ನ ಟೇಬಲ್‌ ಮೇಲೆ ಇಟ್ಟಿದ್ದ ಬಾಟಲಿಗಳನ್ನು ಪಕ್ಕಕ್ಕೆ ಎತ್ತಿಟ್ಟರು. ಅಷ್ಟೇ ಅಲ್ಲದೆ ಅಲ್ಲೇ ಇದ್ದ ನೀರಿನ ಬಾಟಲಿ ಎತ್ತಿ ಅಕುವಾ (ನೀರು) ಎಂದು ಪೋರ್ಚುಗೀಸ್‌ ಭಾಷೆಯಲ್ಲಿ ಹೇಳಿದರು ಅಷ್ಟೇ. ಬೆನ್ನಿಗೆ ಯೂರೋ ಕಪ್‌ನ ಪ್ರಾಯೋಜಕ ಕಂಪನಿಯಾಗಿರುವ ಕೋಕಾ ಕೋಲಾದ ಷೇರುಗಳು ಭಾರಿ ಕುಸಿತಕ್ಕೆ ಒಳಗಾಗಿವೆ. ಪತ್ರಿಕಾಗೋಷ್ಠಿ ಬಳಿಕ ಕೋಕಾ ಕೋಲಾ ಷೇರು ಮೌಲ್ಯ 56.10 ಡಾಲರ್‌ನಿಂದ 55.22 ಡಾಲರ್‌ಗೆ ಇಳಿಕೆಯಾಗಿತ್ತು. ಜತೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ 4 ಬಿಲಿಯನ್‌ ಡಾಲರ್‌ (ಸುಮಾರು 30 ಸಾವಿರ ಕೋಟಿ ರೂ.) ಕುಸಿತ ಕಂಡಿದೆ. ರೋನಾಲ್ಡೊ ಕಾರ್ಬೊನೇಟೆಡ್‌ ವಾಟರ್‌ ಬಿಟ್ಟು ಶುದ್ಧ ನೀರು ಕುಡಿಯಿರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂದೇ ಈ ಘಟನೆಯನ್ನು ಅರ್ಥ ಮಾಡಿಕೊಳ್ಳಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪರಿಣಾಮ ನಷ್ಟ ಅನುಭವಿಸಿದ್ದು ಮಾತ್ರ ಕೋಕಾ ಕೋಲಾ! ರೊನಾಲ್ಡೊ ಜನಪ್ರಿಯ ಫೂಟ್‌ಬಾಲ್‌ ತಾರೆಯಾಗಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಮಂಗಳವಾರ ಹಂಗರಿ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸುವ ಮೂಲಕ ರೊನಾಲ್ಡೊ 3-0 ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದಾರೆ. ಈ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ನಡೆದಿತ್ತು.