ಓಮಿಕ್ರಾನ್: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಮಾರ್ಷಲ್‌ಗಳು! ಮಾಸ್ಕ್ ಇಲ್ಲಾಂದ್ರೆ ದಂಡ ಪ್ರಯೋಗ
ಓಮಿಕ್ರಾನ್: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಮಾರ್ಷಲ್‌ಗಳು! ಮಾಸ್ಕ್ ಇಲ್ಲಾಂದ್ರೆ ದಂಡ ಪ್ರಯೋಗ
ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಮಾರ್ಷಲ್‌ಗಳು ಅಖಾಡಕ್ಕಿಳಿದಿದ್ದು, ಮಾಸ್ಕ್ ಇಲ್ಲಾಂದ್ರೆ ದಂಡ ಪ್ರಯೋಗ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸೋಂಕು ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಲ್ಲೂ ಕೋವಿಡ್ ಎರಡನೇ ಅಲೆಯ ಬಳಿಕ ಮಾಸ್ಕ್ ಮರೆತ ನಾಗರೀಕರಿಗೆ ಮತ್ತೆ ಬಿಸಿ ಮುಟ್ಟಿಸಲು ಮಾರ್ಷಲ್‌ಗಳು ಅಖಾಡಕ್ಕಿಳಿದಿದ್ದಾರೆ. ಮಾಸ್ಕ್ ಇಲ್ಲಾಂದ್ರೆ ದಂಡ ವಸೂಲಿ ಮಾಡುತ್ತಿದ್ದಾರೆ.
ಎರಡನೇ ಅಲೆಯ ಬಳಿಕ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತೇ ಬಿಟ್ಟಿದ್ದಾರೆ. ಹಳ್ಳಿಗಳಲ್ಲಂತೂ ಮಾಸ್ಕ್ ಧರಿಸುವ ಜನರು ಕಾಣಸಿಗುವುದೇ ಅಪರೂಪ. ಇದೀಗ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಅಧಿಕೃತವಾಗಿ ಎರಡು ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಬಿಬಿಎಂಪಿ ನಗರದಲ್ಲಿ ಕೆಲವೊಂದು ಕಠಿಣ ರೂಲ್ಸ್‌ಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಮಾಸ್ಕ್ ಇಲ್ಲಾಂದ್ರೆ ದಂಡ ಕಟ್ಟಿ
ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಓಡಾಟ ನಡೆಸಿದ್ದರೆ 1000ದ ವರೆಗೂ ದಂಡ ವಸೂಲಿ ಮಾಡುತ್ತಿದ್ದರು. ಆದರೆ ಬರಬರುತ್ತಾ ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಮಾರ್ಷಲ್‌ಗಳ ಸಂಖ್ಯೆಯೂ ಕಡಿಮೆಯಾಯಿತು. ಆದರೆ ಇದೀಗ ಮತ್ತೆ ಓಮಿಕ್ರಾನ್ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ಮತ್ತೆ ರೌಂಡ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಗರದ ಕೆಆರ್ ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್‌ಗಳು ಓಡಾಟ ನಡೆಸುತ್ತಿದ್ದಾರೆ. ಮಾಸ್ಕ್ ಹಾಕುವಂತೆ ಸೂಚನೆ ನೀಡುತ್ತಿದ್ದಾರೆ. ಮಾಸ್ಕ್ ಧರಿಸದೆ ಇದ್ದರೆ ದಂಡ ವಸೂಲಿ ಮಾಡುತ್ತಿದ್ದಾರೆ.
ಏರ್ ಪೋರ್ಟ್‌ಗಳಲ್ಲೂ ಬಿಗಿ ತಪಾಸಣೆ
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಏರ್ ಪೋರ್ಟ್‌ಗಳಲ್ಲೂ ಬಿಗಿ ತಪಾಸಣೆ ನಡೆಯುತ್ತಿದೆ. ಓಮಿಕ್ರಾನ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಯಾವುದೇ ನಿರ್ಬಂಧ ಇಲ್ಲದೆ ಇದ್ದರೂ ತಪಾಸಣೆ, ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡಲಾಗುತ್ತಿದೆ.