![](https://vijaykarnataka.com/photo/88458705/photo-88458705.jpg)
(): ಓಮಿಕ್ರಾನ್ ರೂಪಾಂತರಿ ವೈರಾಣು ಹಾವಳಿಯಿಂದ ಹಸೆ ಮಣೆ ಏರಲಾಗದೇ ಕಂಗಾಲಾಗಿದ್ದ ಕೇರಳದ ವಕೀಲ ಜೋಡಿಯೊಂದಕ್ಕೆ ಅಲ್ಲಿನ ಹೈಕೋರ್ಟ್, ಆನ್ಲೈನ್ ಮದುವೆಗೆ ಅಸ್ತು ಎಂದಿದೆ. ಇದರಿಂದ ಹೊಸ ಸಂಪ್ರದಾಯಕ್ಕೆ ಚಾಲನೆ ದೊರೆತಿದೆ.
ವಿದ್ಯಾಭ್ಯಾಸಕ್ಕೆ ಹೋಗಿ ಇಂಗ್ಲೆಂಡ್ನಲ್ಲಿ ಸಿಕ್ಕಿ ಬಿದ್ದಿರುವ ವರ ಅನಂತ ಕೃಷ್ಣ ಹರಿ ಕುಮಾರನ್ ನಾಯರ್ ಅವರು ಕೇರಳಕ್ಕೆ ವಾಪಸಾಗಲು ಓಮಿಕ್ರಾನ್ ಅಡ್ಡಿ ಕಾಡಿದೆ. ಕೊಚ್ಚಿಯಲ್ಲಿಯೇ ಇರುವ ವಧು ರಿಂತು ಥಾಮಸ್, ಪೂರ್ವ ನಿಗದಿಯ ಮುಹೂರ್ತ ಮೀರುತ್ತದೆ ಎಂದು ಚಡಪಡಿಸಿದ್ದರು.
ಏತನ್ಮಧ್ಯೆ, ಇಬ್ಬರಿಗೂ ಹೊಳೆದದ್ದು 'ಆನ್ಲೈನ್ ಹಸೆಮಣೆ' ಪರಿಕಲ್ಪನೆ. ಆದರೆ ಇದುವರೆಗೆ ಅಂತಹ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಇರದಿರುವುದು ಅವರಲ್ಲಿ ಅಳುಕು ಮೂಡಿಸಿತ್ತು. ಹೇಗೋ ಏನೋ ಇರಲಿ ಎಂದು ಅನುಮಾನದಿಂದಲೇ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಜೋಡಿ, ಅಚ್ಚರಿಯ ಗೆಲುವು ಸಾಧಿಸಿದೆ.
'ಸೋಂಕು ಇದೆ ಎಂದು ಬದುಕು ನಿಲ್ಲಿಸ ಬಾರದು. ಆನ್ಲೈನ್ ಮೂಲಕವೇ ಮದುವೆಯಾಗಿ. ಇದಕ್ಕೆ ಸೂಕ್ತ ತಾಂತ್ರಿಕ ವ್ಯವಸ್ಥೆಯೊಂದಿಗೆ ಸಹಕರಿಸಿ' ಎಂದ ಹೈಕೋರ್ಟ್, ಈ ಕುರಿತು ವ್ಯವಸ್ಥೆ ಮಾಡುವಂತೆ ಉಪ ನೋಂದಣಾಧಿಕಾರಿ ಕಚೇರಿಗೆ ಆದೇಶ ನೀಡಿದೆ.
ಅನಂತ ಕೃಷ್ಣನ್ ಮತ್ತು ರಿಂತು ಇಬ್ಬರೂ ವೃತ್ತಿಯಿಂದ ವಕೀಲರು. ಅನಂತ ಕೃಷ್ಣನ್ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿನಲ್ಲಿದ್ದಾರೆ. ಈ ಮೊದಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಹಲವು ತಿಂಗಳ ಮೊದಲೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದರು. ಅದಕ್ಕೆ ಡಿಸೆಂಬರ್ 23ಕ್ಕೆ ದಿನಾಂಕ ಕೂಡ ನಿಗದಿ ಪಡಿಸಿದ್ದರು. ಡಿಸೆಂಬರ್ 22ಕ್ಕೆ ಭಾರತಕ್ಕೆ ಬರಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದ ಅನಂತ ಕೃಷ್ಣನ್ ಅವರಿಗೆ ಹಠಾತ್ ಉಲ್ಬಣಿಸಿದ ಓಮಿಕ್ರಾನ್ ಅಡ್ಡಿಯಾಯಿತು. ಏನು ಮಾಡುವುದು ಎಂದು ತಲೆ ಕೆಡಿಸಿಕೊಂಡ ಲಾಯರ್ ಜೋಡಿ, ಕಾನೂನಿನಲ್ಲಿಇರುವ ಸಾಧ್ಯತೆಗಳ ಕುರಿತು ಯೋಚಿಸಿ, ಹೈಕೋರ್ಟ್ಗೆ ಮನವಿ ಸಲ್ಲಿಸಿದರು.
'ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ನಾವು ಒಂದು ತಿಂಗಳು ಮೊದಲೇ ಮದುವೆಗಾಗಿ ಮನವಿ ಸಲ್ಲಿಸಿದ್ದೇವೆ. ಕಾಯಿದೆಯ ನಿಯಮಗಳು ಪಾಲನೆಯಾಗಿದ್ದರೂ ನಮಗೀಗ ಕೋವಿಡ್ ಕಾಟ ಎದುರಾಗಿದೆ. ದಯವಿಟ್ಟು ಆನ್ಲೈನ್ ಮದುವೆಗೆ ಅನುವು ಮಾಡಿಕೊಡಿ' ಎಂದು ರಿಂತು ಥಾಮಸ್ ಕೋರಿದರು.
'ನಿಮ್ಮ ಮನವಿ ತಿರಸ್ಕರಿಸಲು ಕಾರಣಗಳೇ ಕಾಣುತ್ತಿಲ್ಲ. ಈಗ ಎಲ್ಲವೂ ಆನ್ಲೈನ್ ಮಯ ಆಗಿರುವಾಗ ಮದುವೆಗೆ ಇಲ್ಲ ಎನ್ನುವುದು ಸರಿಯಲ್ಲ, ತಥಾಸ್ತು' ಎಂದು ನ್ಯಾಯಪೀಠ ಹೇಳಿತು. ಶೀಘ್ರದಲ್ಲಿಯೇ ಇವರ ಆನ್ಲೈನ್ ನೆರವೇರಲಿದೆ.