'ಮೇಕಿಂಗ್ ಇಂಡಿಯಾ': ಲಸಿಕೆ ಒದಗಿಸುವ ಜಟಿಲ ಪ್ರಕ್ರಿಯೆಯಲ್ಲಿ ಎಡವಿದ್ದೆಲ್ಲಿ?

ಕೋವಿಡ್ ಹೊಡೆತಕ್ಕೆ ಮುನ್ನ ಭಾರತ ಜಗತ್ತಿನಲ್ಲೇ ಲಸಿಕೆ ಉತ್ಪಾದನೆಯ ಅಗ್ರಮಾನ್ಯ ಕಾರ್ಖಾನೆಯಾಗಿತ್ತು. ದುರದೃಷ್ಟವಶಾತ್ 2ನೇ ಅಲೆಯಿಂದ ಕೋಟ್ಯಂತರ ಮಂದಿಗೆ ಲಸಿಕೆ ಕೊಡಬೇಕಾದ ಭಾರಿ ಸವಾಲನ್ನು ಸೃಷ್ಟಿಸಿತು. ಹಾಗಾದರೆ ಇದನ್ನು ಭಾರತದ ವೈಫಲ್ಯ ಎನ್ನಲಾದೀತೇ?

'ಮೇಕಿಂಗ್ ಇಂಡಿಯಾ': ಲಸಿಕೆ ಒದಗಿಸುವ ಜಟಿಲ ಪ್ರಕ್ರಿಯೆಯಲ್ಲಿ ಎಡವಿದ್ದೆಲ್ಲಿ?
Linkup
ರುಚಿಕಟ್ಟಾಗಿ ಅಡುಗೆ ಮಾಡುವವರೂ, ಕೆಲವೊಮ್ಮೆ ಸಾರಿಗೆ ಉಪ್ಪು ಹಾಕಲು ಮರೆಯುತ್ತಾರೆ. ಹಾಗಂತ ಅವರಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದರೆ ಒಪ್ಪಲು ಸಾಧ್ಯವೇ? ಕೋವಿಡ್ ಹೊಡೆತಕ್ಕೆ ಮುನ್ನ ಭಾರತ ಜಗತ್ತಿನಲ್ಲೇ ಲಸಿಕೆ ಉತ್ಪಾದನೆಯ ಅಗ್ರಮಾನ್ಯ ಕಾರ್ಖಾನೆಯಾಗಿತ್ತು. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್, ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕ ಕಂಪನಿಯಾಗಿತ್ತು. ದುರದೃಷ್ಟವಶಾತ್ ಎರಡನೇ ಅಲೆ ಇಡೀ ಸಾರ್ವಜನಿಕ, ಖಾಸಗಿ ಆರೋಗ್ಯ ವಲಯವನ್ನು, ಜನಜೀವನವನ್ನು ಕಂಗೆಡಿಸಿತು. ಕೋಟ್ಯಂತರ ಮಂದಿಗೆ ಲಸಿಕೆ ಕೊಡಬೇಕಾದ ಭಾರಿ ಸವಾಲನ್ನು ಸೃಷ್ಟಿಸಿತು. ಹಾಗಾದರೆ ಇದನ್ನು ಭಾರತದ ವೈಫಲ್ಯ ಎನ್ನಲಾದೀತೇ? ಅಮೆರಿಕ, ಯುರೋಪ್ ಕೂಡ ಲಕ್ಷಾಂತರ ಸಾವು ನೋವಿಗೆ ಸಾಕ್ಷಿಯಾಗಿಲ್ಲವೇ? ಯಾವ ಪ್ರಮುಖ ರಾಷ್ಟ ಹಾನಿಯಾಗದೆ ಉಳಿದಿದೆ? ಹೀಗಾಗಿ ಆರೋಗ್ಯ ಬಿಕ್ಕಟ್ಟಿಗೆ ವೈದ್ಯಕೀಯ ನೆಲೆಯ ಪರಿಹಾರ ಕಂಡುಕೊಳ್ಳುವುದೇ ಇಂದಿನ ಅನಿವಾರ್ಯವಾಗಿದೆ. ಲಸಿಕೆ ತಯಾರಿಕೆಯ ಜಟಿಲತೆ ಬಗ್ಗೆ ತಜ್ಞರು ಏನೆನ್ನುತ್ತಾರೆ ಕೇಳೋಣ. "ಲಸಿಕೆ ಉತ್ಪಾದನೆ ಸರಳವಲ್ಲ. ಮೊದಲೇ ಪ್ಲಾನ್ ಮಾಡಬೇಕಿತ್ತಲ್ಲವೇ ಎನ್ನುವುದು ಸುಲಭ. ಆದರೆ ಇದು ಖಂಡಿತವಾಗಿಯೂ ಔಷಧ ಉತ್ಪಾದನೆ ಮಾಡಿದಂತಲ್ಲ. ಈ ಪ್ರಕ್ರಿಯೆಯಲ್ಲಿನ ಜೆನೆಟಿಕ್ ಎಂಜಿನಿಯರಿಗ್ ಕೂಡ ಸಂಕೀರ್ಣ. ಒಂದು ಬ್ಯಾಚ್ ಲಸಿಕೆ ತಯಾರಾದ ನಂತರ ಅದನ್ನು ಮೂರು ತಿಂಗಳಿನೊಳಗೆ ಬಳಸುವುದೂ ಮಹತ್ವದ್ದು. ಇಲ್ಲದಿದ್ದರೆ ಅದೆಲ್ಲವೂ ವ್ಯರ್ಥವಾಗುತ್ತದೆ. ಸ್ವದೇಶಿ ತಂತ್ರಜ್ಞಾನದ ಲಸಿಕೆಗೆ ಅನುಕೂಲ ಹೆಚ್ಚು. ಅಮೆರಿಕಕ್ಕೆ ಹೋಲಿಸಿದರೆ ಲಸಿಕೆ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ ನಮ್ಮಲ್ಲಿನ ಜನಸಂಖ್ಯೆ ಹೆಚ್ಚಿರುವುದರಿಂದ ಸವಾಲುಗಳಿವೆ. ಹೀಗಿದ್ದರೂ ಪರಿಸ್ಥಿತಿಯನ್ನು ಭಾರತ ನಿರ್ವಹಿಸುತ್ತಿದೆ," ಎನ್ನುತ್ತಾರೆ ಚೆನ್ನೈನ ಎನ್ನುತ್ತಾರೆ ಮದ್ರಾಸ್ ಮೆಡಿಕಲ್ ಮಿಶನ್ ಆಸ್ಪತ್ರೆಯ ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅನುಷಾ ರೋಹಿತ್ ಅವರು. ಸಾಮಾನ್ಯವಾಗಿ ಲಸಿಕೆಯನ್ನು ನಾಲ್ಕು ಸುತ್ತಿನಲ್ಲಿ ಸಮಗ್ರ ಪರೀಕ್ಷೆಗೆ ಒಳಪಡಿಸಿ, ಉತ್ಪಾದಿಸಿ ವಿತರಿಸಲು ಹತ್ತು ವರ್ಷ ಕಾಯಬೇಕು. ಆದರೆ ಅನಿವಾರ್ಯವಾಗಿ ಕಳೆದ 12-15 ತಿಂಗಳುಗಳಲ್ಲೇ ಕೋವಿಡ್ ಲಸಿಕೆಯನ್ನು ಕಂಡುಹಿಡಿದು ವಿತರಣೆ ಆರಂಭಿಸಿದ್ದು, ಮನುಕುಲದ ಇತಿಹಾಸದಲ್ಲೇ ಹಿಂದೆಂದೂ ನಡೆದಿರದಿದ್ದ ಸಾಹಸ! ಆದರೆ ಬಿಕ್ಕಟ್ಟು ಎಂಥಾ ಅಸಾಧಾರಣ ಸನ್ನಿವೇಶ ಸೃಷ್ಟಿಸಿದೆ ಎಂದರೆ, ಅಡುಗೆಯನ್ನು ಚೆನ್ನಾಗಿ ಮಾಡಬೇಕು, ಜತೆಗೆ ಎಲ್ಲರಿಗೂ ಊಟಕ್ಕೆ ಬಾಳೆಲೆ ಹಾಕಬೇಕು. ಮನೆ ಮಂದಿಗೆ ಮಾತ್ರ ಸಾಕು ಎಂದರೆ ಸಂಪೂರ್ಣ ಸುರಕ್ಷಿತ ಎಂದು ಹೇಳಲಾಗದು! ಕಳೆದೊಂದು ವರ್ಷದಲ್ಲಿ ನಡೆದ ಕೋವಿಡ್ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯ ವೇಗವನ್ನು ಗಮನಿಸಿ. ಜರ್ಮನಿಯ ಜಿಐಎಸ್‌ಎಐಡಿ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಸಾಂಕ್ರಾಮಿಕ ರೋಗಗಳನ್ನು ಹರಡುವ ವೈರಸ್‌ಗಳ ನಿಯಂತ್ರಣಕ್ಕೆ ಅಗತ್ಯವಿರುವ ತಂತ್ರಜ್ಞಾನ ವಿನಿಮಯಕ್ಕೂ ಮುಕ್ತ ವೇದಿಕೆ ಒದಗಿಸುತ್ತದೆ. 2020ರ ಜನವರಿ 10ರಂದು ಕೋವಿಡ್-19 ಲಸಿಕೆ ಕುರಿತ ಜೆನೆಟಿಕ್ಸ್ (ತಳಿ ಶಾಸ್ತ್ರ) ವಿವರಗಳನ್ನು ಅದು ವಿತರಿಸಿತು. ನಂತರ ಜಾಗತಿಕ ಔಷಧ ಉದ್ದಿಮೆ ವಲಯವು ಕೋವಿಡ್ ಲಸಿಕೆ ಅಭಿವೃದ್ಧಿಗೆ ಬದ್ಧತೆಯನ್ನು ಘೋಷಿಸಿತು. ಹೂಡಿಕೆಯ ನೆರವೂ ಲಭಿಸಿತು. ತುರ್ತು ಸಂದರ್ಭವಾದ್ದರಿಂದ ಮೂರು ಹಂತದ ಪರೀಕ್ಷೆಗಳ ನಂತರ ಸಾಮೂಹಿಕ ಉತ್ಪಾದನೆ ಮತ್ತು ವಿತರಣೆಗೆ ಅನುಮತಿ ನೀಡಲಾಯಿತು. 2021ರ ಮಾರ್ಚ್ ವೇಳೆಗೆ 16 ಲಸಿಕೆಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿದ್ದವು! ಒಟ್ಟು 308 ಲಸಿಕೆಗಳು ಅಭಿವೃದ್ಧಿಯ ನಾನಾ ಹಂತಗಳಲ್ಲಿವೆ. ಇದು ಸಂಕೀರ್ಣವಾದ ವೈಜ್ಞಾನಿಕ ಪ್ರಯೋಗವಾದರೂ, ಪವಾಡ ಸದೃಶವಾಗಿತ್ತು. ಈ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದ, ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯದ ವಿಜ್ಞಾನಿ ಆ್ಯಡಮ್ ಜಾನ್ ರಿಟ್ಚೆ ಹೀಗೆನ್ನುತ್ತಾರೆ, "ಒಂದು ಲಸಿಕೆಯನ್ನು ತಯಾರಿಸಬೇಕಾದರೆ, ದೊಡ್ಡ ಪ್ರಮಾಣದಲ್ಲಿ ಜೀವಕೋಶಗಳನ್ನು (ಸೆಲ್) ಬೆಳೆಸಬೇಕು. ಅವುಗಳು ಲಸಿಕೆಯನ್ನು ಉತ್ಪಾದಿಸುತ್ತವೆ. ನಂತರ ಅವುಗಳನ್ನು ಶುದ್ಧೀಕರಿಸಬೇಕು. ಈ ಉತ್ಪಾದನೆಯ ಪ್ರಕ್ರಿಯೆ ಪ್ರತಿಯೊಂದು ಬ್ಯಾಚಿಗೂ ಹೊಸತಾಗಿರುತ್ತದೆ. ಅಂದರೆ ಇದಕ್ಕೆ ಬೇಕಾದ ಪದಾರ್ಥಗಳು ಹಿಂದೆ ಬಳಸಿದವುಗಳೇ ಆಗಿದ್ದರೂ, ಪ್ರತಿಯೊಂದು ಬ್ಯಾಚ್‌ನ ಉತ್ಪಾದನೆಗೂ ಅದರದ್ದೇ ಮಾನದಂಡ ಇರುತ್ತದೆ. ಅದು ನಿಖರವಾಗಿಯೂ ಇರಬೇಕು. ತಪ್ಪಿದರೆ ಅಂಥ ಲಸಿಕೆಗಳು ವ್ಯರ್ಥವಾಗುತ್ತವೆ. ಆದ್ದರಿಂದ ಸಾಮಾನ್ಯವಾಗಿ ಇದಕ್ಕೆ ತಿಂಗಳಾನುಗಟ್ಟಲೆ ಸಮಯ ತಗಲುತ್ತದೆ. ಆದರೆ ಕೋವಿಡ್ ಸಲುವಾಗಿ ತುರ್ತಾಗಿ ನಡೆಸಲಾಯಿತು.''

"ನೀವು ಲಸಿಕೆ ಉತ್ಪಾದನೆಯ ಆರ್ಡರ್‌ಗಳನ್ನು ಮಾಡಿದಾಗ, ಉತ್ಪಾದನೆಯ ಬ್ಯಾಚ್ ಅನ್ನು ಖರೀದಿಸಿರುತ್ತೀರಿ. 2 ವಾರಗಳ ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಪ್ರತಿ ಬ್ಯಾಚ್‌ನಲ್ಲೂ ಪ್ರಕ್ರಿಯೆ ಹೊಸತಾಗಿರುತ್ತದೆ. ಗುಣಮಟ್ಟದ ಫಲಿತಾಂಶಕ್ಕೆ ಎಲ್ಲರೂ ಶ್ರಮಿಸುತ್ತಾರೆ. ಪ್ರತಿಯೊಂದು ಬ್ಯಾಚಿಗೂ ಒಂದೇ ಸಂಖ್ಯೆಯ ಸಿಬ್ಬಂದಿ, ಕಚ್ಚಾ ವಸ್ತು, ಸಾಧನ ಸಲಕರಣೆಗಳು ಸಾಕು. ಆದರೂ ಗರಿಷ್ಠ ಫಲಿತಾಂಶ ಸಿಗಲು ನುರಿತ ಅನುಭವ ಬೇಕಾಗುತ್ತದೆ. ಇದು ಹೇಗೆ ಎಂದರೆ, ಬಾಣಸಿಗರಿಗೆ ಹೊಚ್ಚ ಹೊಸತಾದ, ಹೊಸ ಶೈಲಿಯ ಅಡುಗೆಯನ್ನು, ಅವರೆಂದೂ ನೋಡದಿರುವ ಹೊಸ ಅಡುಗೆ ಕೋಣೆಯಲ್ಲಿ, ಹೊಸ ಪದಾರ್ಥಗಳು, ಸಲಕರಣೆಗಳೊಂದಿಗೆ ಮಾಡಲು ಸೂಚಿಸಿದಂತೆಯೇ ಸರಿ. ಮೊದಲ ಬಾರಿಗೆ ಪ್ರತಿಯೊಂದೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಲವಾರು ಸಲ ತಯಾರಿಸಿದಾಗ, ಯಾವಾಗ ಬಿಸಿ ಹೆಚ್ಚಿಸಬೇಕು, ಬೆಣ್ಣೆ ಹಾಕಬೇಕು, ರೆಫ್ರಿಜರೇಟರ್‌ನಲ್ಲಿ ಇಡಬೇಕು ಎಂಬುದು ಗೊತ್ತಾಗುತ್ತದೆ. ಹೊಸ ವಿಧಾನದಲ್ಲಿ ಯಾರೊಬ್ಬರೂ ಖಾತರಿ ಕೊಡಲು ಬರುವುದಿಲ್ಲ. ಅಂದಾಜಿಸಬಹುದಷ್ಟೇ. ಆದ್ದರಿಂದ ಇಂಥ ಸಂಗತಿಗಳನ್ನು ರಾಜಕೀಯಗೊಳಿಸಬಾರದು.'' ಎಂದು ವಿವರಿಸುತ್ತಾರೆ ಆ್ಯಡಮ್. "ಬ್ರಿಟನ್ ಸರಕಾರ ಆಕ್ಸ್‌ಫರ್ಡ್ ಲಸಿಕೆಯ ಅಭಿವೃದ್ಧಿಗೆ ಆರಂಭದಲ್ಲಿಯೇ ಹೂಡಿಕೆ ಮಾಡಿತ್ತು. ಅದನ್ನು ಬಳಸಿಕೊಂಡು ಲಸಿಕೆ ಉತ್ಪಾದನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆವು. ಪಾಲುದಾರರನ್ನು ಹೊಂದಿಸಲಾಯಿತು. ಒಂದು ವೇಳೆ ಬ್ರಿಟನ್ ಹೂಡಿಕೆ ಮಾಡದಿರುತ್ತಿದ್ದರೆ ಇವತ್ತು ಡೋಸ್‌ಗಳ ತೀವ್ರ ಅಭಾವ ಇರುತ್ತಿತ್ತು'' ಎನ್ನುವ ಆ್ಯಡಮ್, ಮತ್ತೊಂದು ಸವಾಲನ್ನೂ ವಿವರಿಸುತ್ತಾರೆ. ಅದರ ಹೆಸರೇ "ಲಸಿಕೆ ರಾಷ್ಟ್ರೀಯತೆ" (ವ್ಯಾಕ್ಸಿನ್ ನ್ಯಾಶನಲೈಸೇಶನ್)''! ಏನಿದು? ಬಲಾಢ್ಯ ದೇಶಗಳು ಮೊದಲು ತಮ್ಮವರಿಗೆ ಲಸಿಕೆ ಹಾಕಿಸಿ ಬಚಾವಾಗಬೇಕು ಎಂದುಕೊಂಡು ಭಾರಿ ಹೂಡಿಕೆ ಮಾಡಿ ಕೋಟ್ಯಂತರ ಲಸಿಕೆಗಳನ್ನು ಉತ್ಪಾದಿಸಿ ತಮ್ಮಲ್ಲೇ ದಾಸ್ತಾನು ಇಟ್ಟುಕೊಳ್ಳುವ ಪ್ರವೃತ್ತಿಗೆ ಲಸಿಕೆ ರಾಷ್ಟ್ರೀಯತೆ ಎನ್ನಲಾಗುತ್ತಿದೆ. ಇದು ಆಯಾ ರಾಷ್ಟ್ರಗಳ ರಾಜಕಾರಣ ಮತ್ತು ಹಿತಾಸಕ್ತಿ ದೃಷ್ಟಿಯಿಂದ ಸ್ವಾಭಾವಿಕ ಎನ್ನಿಸಬಹುದು. ಜನತೆ ಕೂಡ, ನಾವೇ ಒದ್ದಾಡುತ್ತಿರುವಾಗ ಬೇರೆಯವರಿಗೆ ಏಕೆ ರಫ್ತು ಮಾಡುವಿರಾ ಅಂತ ಗಲಾಟೆ ಮಾಡಬಹುದು. ಭಾರತ ಎರಡನೇ ಕೋವಿಡ್ ಬರುವುದಕ್ಕೆ ಮುನ್ನ 6 ಕೋಟಿ ಡೋಸ್‌ಗಳನ್ನು ಅಗತ್ಯವಿದ್ದ ಕೆಲ ರಾಷ್ಟ್ರಗಳಿಗೆ ರಫ್ತು ಮಾಡಿದ್ದಕ್ಕೆ ಈಗಲೂ ಜನ ಅರಿವಿಲ್ಲದೆ ಹಳಿಯುತ್ತಾರೆ. ಆದರೆ ಭಾರತ 'ವಿಶ್ವ ಗುರು' ಆಗಿ ಪಾರಮ್ಯ ಮೆರೆಯಬೇಕು ಎಂಬ ಉದ್ದೇಶಕ್ಕೆ ಅವುಗಳನ್ನು ಕೊಟ್ಟಿರಲಿಲ್ಲ. ಬಿಕ್ಕಟ್ಟಿನ ಸಂದರ್ಭ ಪರಸ್ಪರ ನೆರವು ನೀಡಲು, ಲಸಿಕೆ ಉತ್ಪಾದನೆ ಕುರಿತ ನಿಬಂಧನೆಗಳನ್ನು ಪೂರೈಸಲು ಹಾಗೂ ಪ್ರತಿಯಾಗಿ ತಯಾರಿಕೆಗೆ ಅವಶ್ಯವಿರುವ ಕಚ್ಚಾ ಸಾಮಾಗ್ರಿಗಳನ್ನು ಪಡೆಯಲು ಎಂಬುದನ್ನು ಸ್ವತಃ ವಿದೇಶಾಂಗ ಸಚಿವ ಜೈ ಶಂಕರ್ ಇತ್ತೀಚೆಗೆ ವಿವರಿಸಿದ್ದಾರೆ. ಲಸಿಕೆಗೆ ಬೇಕಾಗುವ ಎಲ್ಲ ವಸ್ತುಗಳೂ ಒಂದೇ ಕಡೆ ಸಿಗುವುದಿಲ್ಲ. ಹೀಗಾಗಿ ಹಲವು ರಾಷ್ಟ್ರಗಳ ಅವಲಂಬನೆ ಅನಿವಾರ್ಯ. ಆಗ ನಾವೂ ಉತ್ಪಾದಿತ ವಸ್ತುವಿನ ರಫ್ತು ಮಾಡುವ ಅಗತ್ಯವೂ ಬರುತ್ತದೆ ಎಂದು ಸಮರ್ಥಿಸಿದ್ದರು. ಮಾತ್ರವಲ್ಲದೆ ಮೊದಲ ಅಲೆ ಅಂತ್ಯವಾದ ಬಳಿಕ ಜನತೆ ಕೂಡ ಲಸಿಕೆ ಹಾಕಿಸಿಕೊಳ್ಳಲು ಅಂಥ ಆಸಕ್ತಿ ವಹಿಸಿರಲಿಲ್ಲ. ಏನಾಗುತ್ತದೆಯೋ ಎಂಬ ಹಿಂಜರಿಕೆಯಿಂದ ಅನೇಕ ಮಂದಿ ದೂರ ಉಳಿದರು. ಇದರಿಂದ ಲಕ್ಷಾಂತರ ಲಸಿಕೆಗಳು ವ್ಯರ್ಥವಾಗತೊಡಗಿತ್ತು. ಯಾವಾಗ 2ನೇ ಅಲೆ ತೀವ್ರವಾಗತೊಡಗಿತೋ, ಆವಾಗ ಲಸಿಕೆಯ ಮಹತ್ವವನ್ನು ಮನಗಂಡು ಆಸ್ಪತ್ರೆಗೆ ಜನ ಧಾವಿಸತೊಡಗಿದ್ದರು. ಇಂಥ ಸಂದರ್ಭದಲ್ಲಿ " ಲಸಿಕೆ ರಾಷ್ಟ್ರೀಯತೆ ಸಾಮಾನ್ಯವಾದರೂ, ಅದು ಸಂಪೂರ್ಣ ಅವೈಜ್ಞಾನಿಕ. ಇದರ ಪರಿಣಾಮ ದುರ್ಬಲ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಲಸಿಕೆಯ ಕೊರತೆ ಮತ್ತು ಪೂರೈಕೆಯಲ್ಲಿ ವಿಳಂಬವಾಗುತ್ತದೆ. ಡಜನುಗಟ್ಟಲೆ ಬಡ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಆರೈಕೆ ಮಾಡುವ ಸಿಬ್ಬಂದಿಗೆ ಕೂಡ ಒಂದು ಡೋಸ್ ಮಾತ್ರ ವಿತರಣೆಯಾಗಿರುವ ನಿದರ್ಶನವಿದೆ. ಹೀಗಾಗಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ವಿತರಣೆಗೆ ಜಾಗತಿಕ ಮಟ್ಟದ ಯೋಜನೆಯ ಅಗತ್ಯ ಇದೆ ಎಂಬ ತಜ್ಞರ ಎಚ್ಚರಿಕೆಗೆ ದಿಗ್ಗಜ ರಾಷ್ಟ್ರಗಳು ಕಿವಿಗೊಡುವುದೂ ನಿರ್ಣಾಯಕ. "ಲಸಿಕೆ ವಿರುದ್ಧ ನಾನಾ ಅಪಪ್ರಚಾರಗಳೂ ನಡೆದಿವೆ. ಆದರೆ ಮೂರು ಹಂತದ ಪ್ರಯೋಗ ನಡೆದು ಸುರಕ್ಷಿತ ಎಂದು ದೃಢಪಟ್ಟ ನಂತರವೇ ವಿತರಿಸಲಾಗಿದೆ. ಲಸಿಕೆ ತಯಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ಇದು ಹೊಸ ಸಾಂಕ್ರಾಮಿಕ ರೋಗವಾದ್ದರಿಂದ ಇದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಅದೃಷ್ಟವಶಾತ್ ಸುರಕ್ಷಿತವಾಗಿ ಬಳಸಬಹುದಾಗಿರುವ ಲಸಿಕೆಯನ್ನು ಕ್ಷಿಪ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಶ್ರೀಮಂತ ರಾಷ್ಟ್ರಗಳೂ ಕೋವಿಡ್‌ನ 3-4 ಅಲೆಗಳಿಂದ ತತ್ತರಿಸಿವೆ. ಹೀಗಿರುವಾಗ ನಮ್ಮ ದೇಶವನ್ನು ನಾವೇ ಹಳಿದುಕೊಳ್ಳುವುದು ಸಮಂಜಸವಲ್ಲ. ಕೋವಿಡ್ ಸಂದರ್ಭ ಸಾರ್ವಜನಿಕ ಆಸ್ಪತ್ರೆಗಳು ಉತ್ತಮ ಸೇವೆ ಸಲ್ಲಿಸಿರುವುದನ್ನು ನಾವು ಪ್ರಶಂಸಿಸಲೇಬೇಕು. ಖಾಸಗಿ ಆಸ್ಪತ್ರೆಗಳಿಂದಲೂ ಅದು ಸಾಧ್ಯವಿರಲಿಲ್ಲ. ಈಗ ಭಾರತಕ್ಕೆ ಲಸಿಕೆ ಉತ್ಪಾದನೆಯ ಪರಿಣತಿ ಇದೆ. ಆದರೆ ತನ್ನದೇ ಲಸಿಕೆಗಳ ಸಂಖ್ಯೆ ಮತ್ತು ಉತ್ಪಾದನೆ ಹೆಚ್ಚಬೇಕು. ವಿಜ್ಞಾನ ತಂತ್ರಜ್ಞಾನಕ್ಕೆ ಬಜೆಟ್ ಆದ್ಯತೆ ನೀಡಬೇಕು. ಅನುದಾನ ವೃದ್ಧಿಸಬೇಕು. ಜಾಗತಿಕ ತಾಪಮಾನದ ಪರಿಣಾಮ ವೈರಸ್ ಹಾವಳಿ ಪದೇಪದೆ ಸಂಭವಿಸುತ್ತಿದೆ. 1918ರಲ್ಲಿ ಸ್ಪಾನಿಷ್ ಫ್ಲೂ ಸಾಂಕ್ರಾಮಿಕ ಬಂದಿತ್ತು. ಅಲ್ಲೂ ಎರಡನೇ ಅಲೆ ತೀವ್ರವಾಗಿತ್ತು. ಚರಿತ್ರೆಯಿಂದ ಕಲಿಯುವುದು ಬಹಳಷ್ಟಿದೆ'' ಎನ್ನುತ್ತಾರೆ ಡಾ. ಅನುಷಾ ರೋಹಿತ್ ಅವರು. ತಜ್ಞರ ಸಲಹೆಗಳನ್ನು ಆಲಿಸಿದರೆ ಒಂದಂತೂ ಸ್ಪಷ್ಟ. ಭಾರತೀಯರಿಗೆಲ್ಲರಿಗೂ ಲಸಿಕೆ ಲಭಿಸಲಿದೆ. ಆದರೆ ಎರಡು ಡೋಸ್ ಹಾಕಿಸಿಕೊಂಡ ತಕ್ಷಣ ಮೈಮರೆಯುವಂತಿಲ್ಲ. ಕನಿಷ್ಠ ಒಂದೆರಡು ವರ್ಷ ಮುನ್ನೆಚ್ಚರ ಅಗತ್ಯ.