ಎಸ್‌ಬಿಐ ಬ್ಯಾಂಕ್‌ ದರೋಡೆ ಪ್ರಕರಣ ಭೇದಿಸಲು ನೆರವಾದ ಬಾಲಕಿ, ಶ್ವಾನ

ಮುಂಬಯಿಯ ದಹಿಸಾರ್ ಪ್ರದೇಶದಲ್ಲಿನ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಶ್ವಾನ ಹಾಗೂ ಬಾಲಕಿಯೊಬ್ಬಳ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಅಪ್ಪನ ಸಾಲ ತೀರಿಸಲು ಯುವಕ ಈ ದರೋಡೆ ನಡೆಸಿದ್ದ. ಇದಕ್ಕೆ ಆತನ ಸಂಬಂಧಿ ಸಹಕಾರ ನೀಡಿದ್ದ.

ಎಸ್‌ಬಿಐ ಬ್ಯಾಂಕ್‌ ದರೋಡೆ ಪ್ರಕರಣ ಭೇದಿಸಲು ನೆರವಾದ ಬಾಲಕಿ, ಶ್ವಾನ
Linkup
ಮುಂಬಯಿ: ದಹಿಸರ್‌ ಠಾಣೆ ಬಳಿಯ ಗುರುಕುಲ್‌ ಸೊಸೈಟಿಯ ಶಾಖೆಯಲ್ಲಿ ಕಳೆದ ಬುಧವಾರ ನಡೆದ 2.5 ಲಕ್ಷ ರೂ. ಮೌಲ್ಯದ ನಗದು ದರೋಡೆ ಪ್ರಕರಣವನ್ನು ಭೇದಿಸಲು ಪೊಲೀಸ್‌ ಹಾಗೂ 10 ವರ್ಷದ ಬಾಲಕಿ ನೆರವಾಗಿದ್ದಾರೆ. ದರೋಡೆ ನಡೆದ 12 ಗಂಟೆಗಳ ಒಳಗಾಗಿ ಪ್ರಕರಣವನ್ನು ಭೇದಿಸಿರುವುದು ವಿಶೇಷ. ಪೊಲೀಸರು ತರಬೇತಿ ನೀಡಿರುವ ಜೆಸ್ಸಿ ಎಂಬ ಶ್ವಾನವನ್ನು ದರೋಡೆ ನಡೆದ ಸ್ಥಳಕ್ಕೆ ಕರೆತರಲಾಯಿತು. ಇಬ್ಬರು ದರೋಡೆಕೋರರಲ್ಲಿ ಒಬ್ಬಾತ ಬ್ಯಾಂಕ್‌ನಲ್ಲಿಯೇ ಬಿಟ್ಟಿದ್ದ ಚಪ್ಪಲಿಯೊಂದರ ಜಾಡು ಹಿಡಿದ ಶ್ವಾನವು ಸೀದಾ ಸಮೀಪದ ವೈಟಿ ರಸ್ತೆಯ ಗಲ್ಲಿಯೊಂದಕ್ಕೆ ನುಗ್ಗಿತು. ಈ ಗಲ್ಲಿಯಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸಲು ಶುರು ಮಾಡಿದರು. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದ ಹಾಗೂ ಸಿಬ್ಬಂದಿಯ ಹತ್ಯೆಯ ಆರೋಪಿಗಳ ಜಾಡು ಹಿಡಿಯಲು ಎಲ್ಲ ಮನೆ, ಅಂಗಡಿಗಳಲ್ಲಿನ ಜನರನ್ನು ವಿಚಾರಿಸಿದರು. ಆ ವೇಳೆ 10 ವರ್ಷದ ಬಾಲಕಿಯೊಬ್ಬಳು, ಒಬ್ಬ ವ್ಯಕ್ತಿಯು ತರಾತುರಿಯಲ್ಲಿ ಓಡಿಬಂದು ಸಮೀಪದ ಮನೆಯೊಂದಕ್ಕೆ ನುಗ್ಗಿದ್ದನ್ನು ಕಂಡಿದ್ದಾಗಿ ವಿವರಿಸಿದ್ದಳು. ಸಬ್‌-ಇನ್ಸ್‌ಪೆಕ್ಟರ್‌ ದೀಪಕ್‌ ಹಿಂದೆ ನೇತೃತ್ವದ ಪೊಲೀಸರ ತಂಡವು ಬಾಲಕಿ ತೋರಿಸಿದ ಮನೆಗೆ ನುಗ್ಗಿದಾಗ ಧರ್ಮೇಂದ್ರ ಯಾದವ್ (21) ಸಿಕ್ಕಿಬಿದ್ದಿದ್ದಾನೆ. 4.5 ಲಕ್ಷ ರೂ. ಸಾಲ ಮಾಡಿದ್ದ ತಂದೆಗೆ ನೆರವಾಗಲು ಧರ್ಮೇಂದ್ರ ದರೋಡೆ ಮಾಡಿದ್ದು ಬೆಳಕಿಗೆ ಬಂದಿದೆ. ಆತನಿಗೆ ನೆರವಾದ ಆತನ ಸೋದರ ಸಂಬಂಧಿ ವಿಕಾಸ್ ಯಾದವ್‌ (19) ಎಂಬಾತನನ್ನು ಕೂಡ ಬಂಧಿಸಲಾಗಿದೆ. ಬ್ಯಾಂಕ್‌ನಲ್ಲಿ ಹಣ ದೋಚುವ ಮುನ್ನ ತಮ್ಮನ್ನು ತಡೆದಿದ್ದ ಸಿಬ್ಬಂದಿ ಸಂದೇಶ್ ಗೋಮನೆ ಮೇಲೆ ಗುಂಡು ಹಾರಿಸಿದ್ದ ಆರೋಪಿಗಳು ಎಂಬುವವರನ್ನು ಹತ್ಯೆಗೈದಿದ್ದರು. ಬ್ಯಾಂಕ್ ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಹೆದರಿಸುವ ಸಲುವಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಅದರಿಂದ ಯಾರಾದರೂ ಸಾಯುತ್ತಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಧರ್ಮೇಂದ್ರ ಹೇಳಿದ್ದಾನೆ. ಬಿಹಾರದಲ್ಲಿ 40,000 ರೂ ನೀಡಿ ಪಿಸ್ತೂಲು ಖರೀದಿಸಿದ್ದ ಧರ್ಮೇಂದ್ರ ಯಾದವ್, ಉತ್ತರ ಪ್ರದೇಶದಲ್ಲಿನ ತನ್ನ ಸಂಬಂಧಿ ವಿಕಾಸ್ ಯಾದವ್‌ನನ್ನು ಹತ್ತು ದಿನಗಳ ಹಿಂದೆ ಮುಂಬಯಿಗೆ ಕರೆಸಿಕೊಂಡಿದ್ದ. ಈ ಬ್ಯಾಂಕ್ ತನ್ನ ಮನೆಗೆ ಸಮೀಪ ಇದ್ದಿದ್ದರಿಂದ ಅದನ್ನು ದರೋಡೆಗೆ ಆಯ್ದುಕೊಂಡಿದ್ದ. ಅಲ್ಲದೆ, ಅದು ಸಾಮಾನ್ಯ ಬ್ರ್ಯಾಂಚ್ ಆಗಿದ್ದು, ಹೆಚ್ಚಿನ ಉದ್ಯೋಗಿಗಳು ಇರಲಿಲ್ಲ. ಕಳೆದ ಅನೇಕ ದಿನಗಳಿಂದ ಅಲ್ಲಿ ಯಾರೂ ಕಾವಲು ಕೂಡ ಇಲ್ಲ ಎಂಬುದನ್ನೂ ಆತ ತಿಳಿದುಕೊಂಡಿದ್ದ. ಬ್ಯಾಂಕ್ ನೌಕರರನ್ನು ಬೆದರಿಸಿ ದರೋಡೆ ಮಾಡುವುದು ಆತನ ಉದ್ದೇಶವಾಗಿತ್ತು. ಆದರೆ ಬ್ಯಾಂಕ್ ಹೊರಗೆ ಇದ್ದ ಹೊರಗುತ್ತಿಗೆ ನೌಕರ ಸಂದೇಶ್, ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದರು. ಇದರಿಂದ ಗಾಬರಿಗೊಂಡ ಧರ್ಮೇಂದ್ರ ಪಿಸ್ತೂಲು ಹೊರತೆಗೆದು ನೇರವಾಗಿ ಎದೆಗೆ ಗುಂಡು ಹಾರಿಸಿ ಸಾಯಿಸಿದ್ದ. ಕ್ಯಾಶ್ ಕೌಂಟರ್‌ ಬಳಿ ತೆರಳಿದ್ದ ಇಬ್ಬರೂ, ಕೈಗೆ ಸಿಕ್ಕಷ್ಟು ಹಣ ಬಾಚಿಕೊಂಡು ಓಡಿ ಹೋಗಿದ್ದರು.