'ಉಮಾಪತಿ ನಮ್ಮ ನಿರ್ಮಾಪಕರು, ಅವರನ್ನು ನಾನು ಬಿಟ್ಟುಕೊಡುವುದಿಲ್ಲ'- ನಟ ದರ್ಶನ್

ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಬಂದಿದೆ ಎಂಬ ಕಾರಣ ಕೊಟ್ಟು ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ಎಂಬ ಮಹಿಳೆಯನ್ನು, ದರ್ಶನ್‌ ಅವರಿಗೆ ಭೇಟಿ ಮಾಡಿಸಿದ್ದ ಪ್ರಕರಣ ಈಗ ಸಾಕಷ್ಟು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಈ ಪ್ರಕರಣದ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

'ಉಮಾಪತಿ ನಮ್ಮ ನಿರ್ಮಾಪಕರು, ಅವರನ್ನು ನಾನು ಬಿಟ್ಟುಕೊಡುವುದಿಲ್ಲ'- ನಟ ದರ್ಶನ್
Linkup
ನಟ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿದ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್‌ ಪಡೆಯುತ್ತಿದೆ. ಅರುಣಾ ಕುಮಾರಿ ಎಂಬ ನಕಲಿ ಬ್ಯಾಂಕ್ ಮ್ಯಾನೇಜರ್ ಈ ಪ್ರಕರಣದ ಹಿಂದೆ ಇದ್ದರು. ಇದೀಗ ಅವರನ್ನು ವಿಚಾರಣೆ ಮಾಡಲಾಗಿದೆ. ಇನ್ನು, ಈ ಮಹಿಳೆಯ ಹಿಂದೆ ಯಾರಿದ್ದಾರೆ? ಇಷ್ಟೆಲ್ಲ ರಾದ್ದಾಂತಕ್ಕೆ ಯಾರು ಕಾರಣ ಅನ್ನೋದು ಈಗ ಚರ್ಚೆಯ ವಿಷಯವಾಗಿದೆ. ಮೈಸೂರಿನಲ್ಲಿ ಈ ವಿಚಾರವಾಗಿ ನಟ ದರ್ಶನ್ ಕೂಡ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಇತ್ತ ಉಮಾಪತಿ ಅವರು ಕೂಡ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಸದ್ಯ ಮೈಸೂರಿನಿಂದ ಬೆಂಗಳೂರಿಗೆ ಬಂದಿರುವ ನಟ ದರ್ಶನ್ ಅವರು ಕೂಡ ಇಂದು (ಜುಲೈ 13) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಮಾಪತಿ ಅವರನ್ನು ನಾನು ಬಿಟ್ಟುಕೊಡುವುದಿಲ್ಲ! 'ನಾನು ಈಗಲೂ ಉಮಾಪತಿಯವರ ಬಗ್ಗೆ ಏನೂ ಹೇಳಲ್ಲ. ಅವರು ನಮ್ಮ ನಿರ್ಮಾಪಕರು, ಯಾವಾಗಲೂ ನಿರ್ಮಾಪಕರೇ. ಈ ಬಗ್ಗೆ ನಾನು ಅವರು ಮಾತಾಡಿಕೊಳ್ಳುತ್ತೇವೆ. ಇದೇನಾದ್ರೂ ನಿಲ್ಲುವಂತಹ ಪ್ರಕರಣವೇ? ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ನಾನು ಬಿಟ್ಟುಕೊಡುವುದಿಲ್ಲ. ಇವಾಗಲೂ ಅವರ ಜೊತೆ ಮಾತಾಡಿದ್ದೇನೆ. ಚೆಂಡು ಅವರ ಅಂಗಳದಲ್ಲಿ ಇತ್ತು. ಇಂದು ಅವರೂ ಆ ಬಗ್ಗೆ ಮಾತನಾಡಿದ್ದಾರೆ. ಎಲ್ಲವನ್ನೂ ಇಲ್ಲಿಗೇ ಮುಗಿಸೋಣ' ಎಂದಿದ್ದಾರೆ ದರ್ಶನ್. ಉಮಾಪತಿಯನ್ನು ನಾಳೆ ಭೇಟಿಯಾಗಲಿದ್ದೇನೆ 'ನಾನು ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ. ಹಾಗಾಗಿ, ನಾಳೆ ಸಿಗೋಣ ಎಂದು ಉಮಾಪತಿಗೆ ಹೇಳಿದ್ದೇನೆ. ಉಮಾಪತಿ ಮತ್ತು ನಾನು ಭೇಟಿಯಾಗುತ್ತಲೇ ಇರುತ್ತೇವೆ. ಈಗಲೂ ಹೇಳುತ್ತಿದ್ದೇನೆ, ಉಮಾಪತಿ ನಮ್ಮ ನಿರ್ಮಾಪಕರು. ಆ ಮಹಿಳೆಗೆ ಇಷ್ಟೆಲ್ಲಾ ಮಾಡಲು ಹೇಗೆ ಧೈರ್ಯ ಬರುತ್ತೆ? ಇದರ ಹಿಂದೆ ಯಾರೋ ಆಟ ಆಡುತ್ತಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಆಕೆ ಇಷ್ಟೆಲ್ಲಾ ಮಾಡಿದ್ದಾರೆ ಎನಿಸುತ್ತದೆ. ಇದೊಂದು ಸಿಲ್ಲಿ ಮ್ಯಾಟರ್, ಇದರಿಂದ ಏನೂ ಆಗುವುದಿಲ್ಲ. ಇದೆಲ್ಲ ಬರುತ್ತೆ ಹೋಗುತ್ತೆ' ಎಂದು ದರ್ಶನ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದೆ 'ನಾನು ಬ್ಯಾಂಕ್ ಮ್ಯಾನೇಜರ್.. ನಿಮ್ಮ ಹೆಸರು ಬಳಸಿಕೊಂಡು ನಿಮ್ಮ ಸ್ನೇಹಿತರು ಲೋನ್‌ಗೆ ಅರ್ಜಿ ಹಾಕಿದ್ದಾರೆ. ಆ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ' ಎಂದು ನಟ ದರ್ಶನ್ ಅವರ ಬಳಿ ಈ ಮಹಿಳೆ ಹೋಗಿದ್ದರು. ಆನಂತರ ಅವರು ನಕಲಿ ಬ್ಯಾಂಕ್ ಮ್ಯಾನೇಜರ್ ಎಂದು ಗೊತ್ತಾಗುತ್ತಿದ್ದಂತೆಯೇ, ದೂರು ದಾಖಲು ಮಾಡಲಾಗಿತ್ತು. ಸದ್ಯ ಈ ವಿಚಾರ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಅರುಣಾ ಕುಮಾರಿ ಅವರನ್ನು ಮುಂದೆ ಬಿಟ್ಟು, ಅವರ ಹಿಂದೆ ಯಾರೋ ಇದ್ದುಕೊಂಡು ಇದನ್ನೆಲ್ಲ ಮಾಡುತ್ತಿದ್ದಾರಾ ಎಂಬ ಅನುಮಾನಗಳು ಕೂಡ ಕಾಡುತ್ತಿವೆ. ಸದ್ಯಕ್ಕಂತೂ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವಂತೂ ಸಿಕ್ಕಿಲ್ಲ. ಪೊಲೀಸ್‌ ತನಿಖೆಯಿಂದ ಇಡೀ ಪ್ರಕರಣದ ಬಗ್ಗೆ ಒಂದು ಸ್ಪಷ್ಟ ಚಿತ್ರಣದ ಸಿಗಲಿದೆಯೇ? ಕಾದು ನೋಡಬೇಕು.