ಉದ್ಧವ್‌ ಠಾಕ್ರೆ ಭೇಟಿಯಾದ ಶರದ್‌ ಪವಾರ್‌, ಮೈತ್ರಿ ಬಿಕ್ಕಟ್ಟಿನ ನಡುವೆ ಮಹತ್ವದ ಸಭೆ

ಶಿವಸೇನೆಯು ತನ್ನ ಹಳೆಯ ಮಿತ್ರ ಬಿಜೆಪಿ ಜತೆಗೆ ಪುನರ್‌ಮೈತ್ರಿಗೆ ಒಲವು ತೋರುವ ಸುಳಿವು ನೀಡಿದ ಬೆನ್ನಿಗೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭೇಟಿ ಮಾಡಿದ್ದಾರೆ.

ಉದ್ಧವ್‌ ಠಾಕ್ರೆ ಭೇಟಿಯಾದ ಶರದ್‌ ಪವಾರ್‌, ಮೈತ್ರಿ ಬಿಕ್ಕಟ್ಟಿನ ನಡುವೆ ಮಹತ್ವದ ಸಭೆ
Linkup
ಮುಂಬಯಿ: ಮಹಾವಿಕಾಸ್‌ ಅಘಾಡಿ ಮೂಲಕ ಕಾಂಗ್ರೆಸ್‌, ಎನ್‌ಸಿಪಿ ಜತೆಗೆ ಕೈಜೋಡಿಸಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಿರುವ ಶಿವಸೇನೆಯು, ತನ್ನ ಹಳೆಯ ಮಿತ್ರ ಬಿಜೆಪಿ ಜತೆಗಿನ ಪುನರ್‌ಮೈತ್ರಿಗೆ ಒಲವು ತೋರುವ ಸುಳಿವು ನೀಡಿದ ಬೆನ್ನಿಗೇ ಸಿಎಂ ಮತ್ತು ಎನ್‌ಸಿಪಿ ವರಿಷ್ಠ ಭೇಟಿ ಮಾಡಿದ್ದಾರೆ. ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ, ಗೃಹ ಸಚಿವ ದಿಲೀಪ್‌ ವಲ್ಸೆ ಕೂಡ ಮಂಗಳವಾರದ ಭೇಟಿಯ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮಾಜಿ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಇ.ಡಿ ತನಿಖೆ, ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಅವರ ಶಿವಸೇನೆಯೊಂದಿಗಿನ ಮೈತ್ರಿಯು ಮುಗಿದ ಅಧ್ಯಾಯ ಎಂಬ ವಿವಾದಿತ ಹೇಳಿಕೆಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ಧ ಉದ್ಧವ್‌ ಠಾಕ್ರೆ ಅವರು ಸದ್ಯ ತೃತೀಯ ರಂಗ ರಚನೆಯ ಸಿದ್ಧತೆಯಲ್ಲಿರುವ ಶರದ್‌ ಪವಾರ್‌ ಅವರೊಂದಿಗೂ ಹತ್ತಿರದ ಸಂಪರ್ಕ ಸಾಧಿಸಿರುವುದು ಶಿವಸೇನೆಯ ರಾಜಕೀಯ ಸಮತೋಲನದ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ-ಉದ್ಧವ್‌ ಸಂಬಂಧ ಗಟ್ಟಿ: ರಾಜಕೀಯವಾಗಿ ಭಿನ್ನ ಮಾರ್ಗಗಳಲ್ಲಿದ್ದರೂ ಕೂಡ ವೈಯಕ್ತಿಕವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ದೃಢ ಬಾಂಧವ್ಯವಿದೆ ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ಹೇಳಿದ್ದಾರೆ. ಮರಾಠ ಮೀಸಲಾತಿ, ಜಿಎಸ್‌ಟಿ ಪರಿಹಾರ, ಮೆಟ್ರೋ ಕಾರ್‌ ಶೆಡ್‌ ಬಗ್ಗೆ ಚರ್ಚಿಸಲು ಮಾತ್ರ ಮೋದಿ ಜತೆಗಿನ ಠಾಕ್ರೆ ಭೇಟಿ ಸೀಮಿತವಾಗಿತ್ತು. ಇದಕ್ಕೆ ರಾಜಕೀಯ ಬಣ್ಣ ಬೇಡ ಎಂದು ರಾವತ್‌ ಸಮಜಾಯಿಷಿ ನೀಡಿದ್ದಾರೆ.