ತಿರುಪತಿ: ಗಂಡನಿಂದ ಟೆಕ್ಕಿಯ ಹತ್ಯೆ, ಸೂಟ್‌ಕೇಸ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ

ತಿರುಪತಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಸೂಟ್‌ಕೇಸ್ ಒಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ದೊರೆತ ಶವ ಪ್ರಕರಣ ಬಗೆಹರಿದಿದೆ. ಹೈದರಾಬಾದ್‌ನ ಟೆಕ್ಕಿ ಭುವನೇಶ್ವರಿ ಅವರನ್ನು ಆಕೆಯ ಪತಿಯೇ ಕೊಂದು ಸೂಟ್‌ಕೇಸ್‌ನಲ್ಲಿ ದೇಹ ತುಂಬಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿರುಪತಿ: ಗಂಡನಿಂದ ಟೆಕ್ಕಿಯ ಹತ್ಯೆ, ಸೂಟ್‌ಕೇಸ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
Linkup
ತಿರುಪತಿ: ಆಂಧ್ರಪ್ರದೇಶದ ತಿರುಪತಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ ಸೂಟ್‌ಕೇಸ್ ಒಂದರಲ್ಲಿ ಪತ್ತೆಯಾದ ಕೆಲವು ದಿನಗಳ ಬಳಿಕ ಅದು ಹೈದರಾಬಾದ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಉದ್ಯೋಗಿಯಾಗಿದ್ದ 27 ವರ್ಷದ ಮಹಿಳೆಯ ದೇಹ ಎಂದು ಪೊಲೀಸರು ಗುರುತಿಸಿದ್ದಾರೆ. ಜತೆಗೆ ಪ್ರಕರಣವನ್ನು ಭೇದಿಸಿದ್ದಾರೆ. ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದ ಭುವನೇಶ್ವರಿ ಅವರ ಮೃತದೇಹ ಇದು ಎಂದು ಪೊಲೀಸರು ಗುರುತಿಸಿದ್ದು, ಅವರ ಪತಿ ಮರಮ್‌ರೆಡ್ಡಿ ಶ್ರೀಕಾಂತ್ ರೆಡ್ಡಿಯೇ ಆಕೆಯನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ದಂಪತಿ ತಿರುಪತಿಯಲ್ಲಿ ತಮ್ಮ 18 ತಿಂಗಳ ಮಗಳೊಂದಿಗೆ ವಾಸಿಸುತ್ತಿದ್ದರು. ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಟೆಕ್ಕಿ ಭುವನೇಶ್ವರಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಎಂಜಿನಿಯರಿಂಗ್ ಓದಿರುವ ಶ್ರೀಕಾಂತ್ ರೆಡ್ಡಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆನ್‌ಲೈನ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಕೆಲವು ತಿಂಗಳಿನಿಂದ ಆತ ನಿರುದ್ಯೋಗಿಯಾಗಿದ್ದ. ಭುವನೇಶ್ವರಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿರುವುದಾಗಿ ನಗರ ಪೊಲೀಸ್ ಮುಖ್ಯಸ್ಥ ರಮೇಶ್ ರೆಡ್ಡಿ ತಿಳಿಸಿದ್ದಾರೆ. 'ಮೃತದೇಹ ಶೇ 90ರಷ್ಟು ಸುಟ್ಟು ಕರಕಲಾಗಿತ್ತು. ಶ್ರೀಕಾಂತ್ ರಿಲಯನ್ಸ್ ಮಾರ್ಟ್‌ನಿಂದ ಸೂಟ್‌ಕೇಸ್ ಖರೀದಿಸಿ ತಂದಿದ್ದ. ದೇಹವನ್ನು ತುಂಬಿಸುವ ಸಲುವಾಗಿಯೇ ಆತ ಅದನ್ನು ಖರೀದಿ ಮಾಡಿರಬಹುದು. ಬಳಿಕ ಆತ ದೇಹವನ್ನು ಸುಡಲು ಪ್ರಯತ್ನಿಸಿದ್ದ' ಎಂದು ಅವರು ಹೇಳಿದ್ದಾರೆ. ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಶ್ರೀಕಾಂತ್ ಸೂಟ್‌ಕೇಸ್ ತರುತ್ತಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಕಾಣಿಸಿದೆ. ಒಂದು ಕೈಯಲ್ಲಿ ಮಗುವನ್ನು ಹಿಡಿದು, ಇನ್ನೊಂದು ಕೈಯಲ್ಲಿ ಕೆಂಪು ಸೂಟ್‌ಕೇಸ್‌ಅನ್ನು ಎಳೆಯಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಭುವನೇಶ್ವರಿ ಅವರ ದೇಹದ ಭಾಗಗಳನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕೆಲವು ಮೂಳೆಗಳು ಹಾಗೂ ತಲೆಬುರುಡೆ ಹೊರತಾಗಿ ಉಳಿದಲ್ಲ ಭಾಗಗಳೂ ಸುಟ್ಟು ಕರಕಲಾಗಿವೆ. ಕೋವಿಡ್‌ನಿಂದ ಸತ್ತಿದ್ದಾಳೆ ಎಂದಿದ್ದತನ್ನ ಪತ್ನಿ ಕೋವಿಡ್‌ನಿಂದ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಶ್ರೀಕಾಂತ್ ಹೇಳಿದ್ದ. ಆತನ ಸಂಬಂಧಿಕರು ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಆಕೆಗಾಗಿ ಹುಡುಕಾಡಿದ್ದರು. ರಾಮಸಮುದ್ರಂ ಮೂಲದ ಭುವನೇಶ್ವರಿ ಅವರು 2019ರಲ್ಲಿ ಶ್ರೀಕಾಂತ್‌ನನ್ನು ಮದುವೆಯಾಗಿದ್ದರು. ಇಬ್ಬರ ನಡುವೆ ಇತ್ತೀಚೆಗೆ ತುಂಬಾ ಜಗಳಗಳಾಗುತ್ತಿದ್ದವು. ಕೋಪದಿಂದ ಆತ ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ. ಪತ್ನಿಯನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿದ್ದ. ಈ ಸೂಟ್‌ಕೇಸ್ ತಿರುಪತಿಯ ರುಯಿಯಾ ಆಸ್ಪತ್ರೆ ಆವರಣದಲ್ಲಿ ಪತ್ತೆಯಾಗಿತ್ತು. ಪತ್ನಿಗೆ ಕೋವಿಡ್ ಡೆಲ್ಟಾ ಪ್ರಭೇದದ ವೈರಸ್ ತಗುಲಿದ್ದು, ಆಕೆಯನ್ನು ರುಯಿಯಾ ಆಸ್ಪತ್ರೆಗೆ ದಾಖಲಿಸಿದ್ದಾಗಿ ಸಂಬಂಧಿಕರಿಗೆ ತಿಳಿಸಿದ್ದ. ಆಕೆ ಗುಣವಾಗದೆ ಮೃತಪಟ್ಟ ಕಾರಣ ರುಯಿಯಾ ಆಸ್ಪತ್ರೆಯವರೇ ಆಕೆಯ ಶವ ಸಂಸ್ಕಾರ ಮಾಡಿದ್ದಾರೆ ಎಂದು ಸಂಬಂಧಿಕರು ನಂಬಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿಗೆ ಸುಟ್ಟ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದ್ದು, ಘಟನೆಗೆ ತಿರುವು ನೀಡಿತ್ತು. ದೇಹ ದೊರೆತ ಸುಮಾರು ಐದು ದಿನಗಳ ಬಳಿಕ ಅದು ಭುವನೇಶ್ವರಿ ಅವರ ಮೃತದೇಹ ಎನ್ನುವುದು ಖಚಿತವಾಗಿದೆ.