ಮುಂಬಯಿಯಲ್ಲೂ ನಿರ್ಭಯಾ ಪ್ರಕರಣ! ರಸ್ತೆ ಬದಿ ನಿಂತಿದ್ದ ಟೆಂಪೊದಲ್ಲಿ ಮಹಿಳೆಯ ಅತ್ಯಾಚಾರ!

ಒಂಬತ್ತು ವರ್ಷಗಳ ದೇಶವನ್ನೇ ಬೆಚ್ಚಿ ಬೀಳಿಸಿದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಂತಹ ಭೀಕರ ಘಟನೆ ಶುಕ್ರವಾರ ತಡರಾತ್ರಿ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ನಡೆದಿದೆ.

ಮುಂಬಯಿಯಲ್ಲೂ ನಿರ್ಭಯಾ ಪ್ರಕರಣ! ರಸ್ತೆ ಬದಿ ನಿಂತಿದ್ದ ಟೆಂಪೊದಲ್ಲಿ ಮಹಿಳೆಯ ಅತ್ಯಾಚಾರ!
Linkup
ಮುಂಬಯಿ: ಒಂಬತ್ತು ವರ್ಷಗಳ ದೇಶವನ್ನೇ ಬೆಚ್ಚಿ ಬೀಳಿಸಿದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಂತಹ ಭೀಕರ ಘಟನೆ ಶುಕ್ರವಾರ ತಡರಾತ್ರಿ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ನಡೆದಿದೆ. ನಗರದ ಸಾಕಿನಾಕಾ ಪ್ರದೇಶದ ಖೈರಾನಿಯಲ್ಲಿ 34 ವರ್ಷದ ಮಹಿಳೆಯನ್ನು ಅಪಹರಿಸಿ ರಸ್ತೆ ಬದಿ ನಿಂತಿದ್ದ ಟೆಂಪೊದಲ್ಲಿ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳು ತುರುಕಿಸಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದಲ್ಲದೇ ಚಾಕುವಿನಿಂದ ಹಲವು ಸಲ ಇರಿದು ಕೊಲೆ ಮಾಡಲಾಗಿದೆ. ಮಹಿಳೆಯ ಮೇಲೆ ಹಿಂಸಾಚಾರದ ಕುರಿತು ಶುಕ್ರವಾರ ನಸುಕಿನ 3.30ಕ್ಕೆ ಸ್ಥಳೀಯರೊಬ್ಬರು ಕಂಟ್ರೋಲ್‌ ರೂಮ್‌ಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ರಾಜಾವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ವರೂಪದ ಗಾಯಗಳಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಶನಿವಾರ ಮೃತಪಟ್ಟಿದ್ದಾರೆ. ಈ ಅಮಾನವೀಯ ಘಟನೆಯಿಂದ ವಾಣಿಜ್ಯ ನಗರವು ತೀವ್ರ ಆಘಾತಕ್ಕೆ ಒಳಗಾಗಿದೆ. ನಗರದ ಹಲವೆಡೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವು: ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ನಗರ ಪೊಲೀಸರು 45 ವರ್ಷದ ಮೋಹನ್‌ ಚೌಹಾಣ್‌ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ತನ್ನ ಹೆಸರು ಸುನೀಲ್‌ ಎಂದು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಈತ, ನಂತರ ನಿಜ ಹೆಸರು ಒಪ್ಪಿಕೊಂಡ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮೂಲತಃ ಉತ್ತರ ಪ್ರದೇಶದ ಜೌನ್‌ಪುರದ ಈತ 25 ವರ್ಷ ಹಿಂದೆ ಮುಂಬಯಿಗೆ ಬ.ದಿದ್ದ. ವೃತ್ತಿಯಲ್ಲಿ ಚಾಲಕನಾಗಿದ್ದ ಈತನ ವಿರುದ್ಧ ವಾಹನಗಳ ಬ್ಯಾಟರಿ ಮತ್ತು ಪೆಟ್ರೋಲ್‌ ಕಳವು ಪ್ರಕರಣಗಳಿವೆ. ಆರೋಪಿಯನ್ನು ನ್ಯಾಯಾಲಯವು ಸೆ. 21ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಟೆಂಪೋದಲ್ಲಿ ಸಿಕ್ಕ ಕೂದಲು, ರಕ್ತದ ಮಾದರಿಗಳನ್ನು ಸಂಗ್ರಹಿಸಿರುವ ಫಾರೆನ್ಸಿಕ್‌ ತಜ್ಞರ ವರದಿ ಆಧರಿಸಿ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ತೀವ್ರಗೊಳಿಸಿದ್ದಾರೆ. ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ನಲ್ಲಿ ವಿಚಾರಣೆ: ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ ಸಂಬಂಧ ಶೀಘ್ರ ತನಿಖೆ ಮುಗಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಮುಂಬಯಿ ಪೊಲೀಸ್‌ ಆಯುಕ್ತ ಹೇಮಂತ್‌ ನಗ್ರಾಲೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೂಚನೆ ನೀಡಿದ್ದಾರೆ. ರಾಜ್ಯ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಸಹ ಸಂತ್ರಸ್ತೆಯ ಕುಟುಂಬಕ್ಕೆ ಶೀಘ್ರವೇ ನ್ಯಾಯ ದೊರಕಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಮಾನವೀಯ ಕೃತ್ಯದ ಬಗ್ಗೆ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಆಯೋಗದ ಸದಸ್ಯರೊಬ್ಬರು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ , ಮಾಹಿತಿ ಪಡೆದಿದ್ದಾರೆ. ಸೂಕ್ತ ನೆರವು, ರಕ್ಷಣೆ ಕೂಡ ಒದಗಿಸುವಂತೆ ಮಹಾರಾಷ್ಟ್ರ ಡಿಜಿಪಿ ಸಂಜಯ್‌ ಪಾಂಡೆ ಅವರಿಗೆ ಪತ್ರ ಬರೆಯಲಾಗಿದೆ. - ರೇಖಾ ಶರ್ಮಾ, ಅಧ್ಯಕ್ಷೆ, ರಾಷ್ಟ್ರೀಯ ಮಹಿಳಾ ಆಯೋಗ