ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜಿತಿನ್‌ ಪ್ರಸಾದ

ಉತ್ತರ ಪ್ರದೇಶದ ಕಾಂಗ್ರೆಸ್‌ನ ಪ್ರಮುಖ ಬ್ರಾಹ್ಮಣ ನಾಯಕರಾಗಿದ್ದ ಜಿತಿನ್‌ ಪ್ರಸಾದ ಅವರು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇದೆ ಎನ್ನುವಾಗ 'ಕೈ' ತೊರೆದು 'ಕಮಲ' ಹಿಡಿದಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಎಂದೇ ಭಾವಿಸಲಾಗಿದೆ.

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜಿತಿನ್‌ ಪ್ರಸಾದ
Linkup
'ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ, ಒಂದು ಕಾಲದ ರಾಹುಲ್‌ ಗಾಂಧಿ ಆಪ್ತ ಅವರು ಬುಧವಾರ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಭಾರಿ ಆಘಾತ ಎದುರಿಸಿದೆ. 47 ವರ್ಷದ ಜಿತಿನ್‌ ಪ್ರಸಾದ್ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಮುಖ ಬ್ರಾಹ್ಮಣ ನಾಯಕರಾಗಿದ್ದರು. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯೆ ಶೇ. 13ರಷ್ಟಿದ್ದು, ಪ್ರಮುಖ ಸಮುದಾಯದ ನಾಯಕರೇ ಈಗ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಎಂದು ಭಾವಿಸಲಾಗಿದೆ. "ನಾನು ರಾಜಕೀಯದಿಂದ ಸುತ್ತುವರಿದ ಪಕ್ಷದಲ್ಲಿದ್ದೇನೆ ಎಂಬ ಭಾವನೆ ನನಗೆ ಬರಲು ಆರಂಭವಾಯಿತು. ಜನ ಸೇವೆ ಮಾಡಲು ಮತ್ತು ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನನಗೆ ಅನಿಸಲು ಶುರುವಾಯಿತು. ಜನರ ಹಿತಕ್ಕಾಗಿ ಕೆಲಸ ಮಾಡಲು ನನಗೆ ಸಾಧ್ಯವಾಗಲಿಲ್ಲ," ಎಂದು ಜಿತಿನ್‌ ಪ್ರಸಾದ ಕಾಂಗ್ರೆಸ್‌ ತೊರೆದಿದ್ದಕ್ಕೆ ಕಾರಣ ವಿವರಿಸಿದ್ದಾರೆ. "ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷ. ಇದು ಏಕೈಕ ರಾಷ್ಟ್ರೀಯ ಪಕ್ಷ. ಉಳಿದವು ಪ್ರಾದೇಶಿಕ ಪಕ್ಷಗಳು. ಬಿಜೆಪಿ ಮತ್ತು (ಪ್ರಧಾನಿ ನರೇಂದ್ರ) ಮೋದಿ ಮಾತ್ರ ದೇಶ ಈಗ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಬಲ್ಲರು," ಎಂದು ಜಿತಿನ್‌ ಪ್ರಸಾದ ಅಭಿಪ್ರಾಯಪಟ್ಟಿದ್ದಾರೆ. ಜಿತಿನ್‌ ಪ್ರಸಾದ, ಜ್ಯೋತಿರಾದಿತ್ಯ ಸಿಂಧಿಯಾ ಬಳಿಕ ಕಾಂಗ್ರೆಸ್‌ ತೊರೆಯುತ್ತಿರುವ ಎರಡನೇ ಹೈ ಪ್ರೊಫೈಲ್‌ ನಾಯಕರಾಗಿದ್ದಾರೆ. ಇದೀಗ ರಾಜಸ್ಥಾನದ ಇನ್ನೋರ್ವ ಪ್ರಮುಖ ನಾಯಕ ಸಚಿನ್‌ ಪೈಲಟ್‌ ಕೂಡ ಬಿಜೆಪಿಗೆ ಸೇರ್ಪಡೆಯಾಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಾಗೆ ನೋಡಿದರೆ 2019ರಲ್ಲೇ ಜಿತಿನ್‌ ಪ್ರಸಾದ ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಇದನ್ನು ಸ್ವತಃ ಪ್ರಸಾದ ತಳ್ಳಿ ಹಾಕಿದ್ದರು. ಮೂಲಗಳ ಪ್ರಕಾರ ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮನವೊಲಿಸಿದ್ದರು ಎನ್ನಲಾಗಿದೆ. ಆದರೆ ಇದೀಗ ಅವರು ಕೊನೆಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ್ದಾರೆ. "ನೀವು ಪ್ರತಿನಿಧಿಸುವ ಜನರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಪಕ್ಷವಾಗಿ ಇರುವುದರ ಅರ್ಥವೇನು" ಎಂದು ಕಾಂಗ್ರೆಸ್‌ ವಿರುದ್ಧ ಜಿತಿನ್‌ ಪ್ರಸಾದ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕತ್ವದಲ್ಲಿ ಅಮೂಲಾಗ್ರ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದ 23 ನಾಯಕರಲ್ಲಿ ಜಿತಿನ್‌ ಪ್ರಸಾದ ಕೂಡ ಸೇರಿದ್ದರು. ನಂತರ ಅವರಿಗೆ ಬಂಗಾಳ ಚುನಾವಣೆಯ ಹೊಣೆ ನೀಡಲಾಗಿತ್ತು. ಆದರೆ ಅಲ್ಲಿ ಪಕ್ಷ ಮಕಾಡೆ ಮಲಗಿತ್ತು. ಇದೀಗ ಅವರು ಪಕ್ಷವನ್ನೇ ತೊರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ದೊಡ್ಡ ಮೀನನ್ನೇ ಬಿಜೆಪಿಗೆ ಬಲೆಗೆ ಬೀಳಿಸಿಕೊಂಡಿದೆ. ಕೊರೊನಾ ನಿರ್ವಹಣೆ ಸಂಬಂಧ ಉತ್ತರ ಪ್ರದೇಶ ಸರಕಾರ ಭಾರಿ ಟೀಕೆ ಎದುರಿಸುತ್ತಿರುವಾಗಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ. ಜಿತಿನ್‌ ಪ್ರಸಾದ ಅವರ ತಂದೆ ಜಿತೇಂದ್ರ ಪ್ರಸಾದ್ ಕೂಡ ಈ ಹಿಂದೆ ಸೋನಿಯಾ ಗಾಂಧಿ ನಾಯಕತ್ವದ ವಿರುದ್ಧ ಅಪಸ್ವರ ಎತ್ತಿದ್ದರು. ಮತ್ತು 1999ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೋನಿಯಾ ವಿರುದ್ಧವೇ ಸ್ಪರ್ಧಿಸಿದ್ದರು. ಆದರೆ ಅದರಲ್ಲಿ ಅವರಿಗೆ ಸೋಲಾಯಿತು ಎಂಬುದು ಬೇರೆ ಮಾತು. 2002ರಲ್ಲಿ ಅವರು ನಿಧನ ಹೊಂದಿದರು. ನಂತರ ಮನಮೋಹನ್‌ ಸಿಂಗ್‌ ಸರಕಾರದಲ್ಲಿ ಎರಡು ಬಾರಿ ಜಿತಿನ್‌ ಪ್ರಸಾದ ಸಚಿವರಾಗಿದ್ದರು. ಈ ವೇಳೆ ಅವರನ್ನು ರಾಹುಲ್‌ ಗಾಂಧಿ ಆಪ್ತರೆಂದೇ ಗುರುತಿಸಲಾಗಿತ್ತು. ಇದೀಗ ಅವರೇ ರಾಹುಲ್‌ ಸಂಗ ತೊರೆದು ಹೋಗಿದ್ದಾರೆ.