ಉಚಿತ ಕೊರೊನಾ ಚಿಕಿತ್ಸೆ, ಬಿಪಿಎಲ್‌ ಕಾರ್ಡ್‌ದಾರರಿಗೆ 2,000 ರೂ. ನೆರವು- ಸ್ಟಾಲಿನ್‌ ಘೋಷಣೆ

ಕೊರೊನಾ ಪರಿಹಾರವಾಗಿ 2.07 ಕೋಟಿ ರೈಸ್‌ ಕಾರ್ಡ್‌ದಾರರಿಗೆ ತಲಾ 2,000 ರೂ. ಕೊರೊನಾ ಪರಿಹಾರ, ಖಾಸಗಿ ಆಸ್ಪತ್ರೆಗಳಲ್ಲೂ ಜನರ ಕೊರೊನಾ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುವ ಮಹತ್ವದ ಘೋಷಣೆಗಳನ್ನು ಎಂಕೆ ಸ್ಟಾಲಿನ್‌ ಮಾಡಿದ್ದಾರೆ.

ಉಚಿತ ಕೊರೊನಾ ಚಿಕಿತ್ಸೆ, ಬಿಪಿಎಲ್‌ ಕಾರ್ಡ್‌ದಾರರಿಗೆ 2,000 ರೂ. ನೆರವು- ಸ್ಟಾಲಿನ್‌ ಘೋಷಣೆ
Linkup
ಚೆನ್ನೈ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ನೂತನ ಸಿಎಂ ಎಂ.ಕೆ. ಸ್ಟಾಲಿನ್‌ ಐದು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದಾರೆ. ಕೊರೊನಾ ಪರಿಹಾರವಾಗಿ 2.07 ಕೋಟಿ ರೈಸ್‌ ಕಾರ್ಡ್‌ (ಇಲ್ಲಿನ ಬಿಪಿಎಲ್‌ ಕಾರ್ಡ್‌ಗೆ ಸಮ)ದಾರರಿಗೆ ತಲಾ 2,000 ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಜನರ ಕೊರೊನಾ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಜನರು ಕೋವಿಡ್‌-19ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ರಾಜ್ಯದ ಆರೋಗ್ಯ ವಿಮೆಯಿಂದ ಇವುಗಳ ವೆಚ್ಚವನ್ನು ಭರಿಸುವುದಾಗಿ ಸಿಎಂ ಕಚೇರಿ ತಿಳಿಸಿದೆ. ಪ್ರಣಾಳಿಕೆಯಲ್ಲಿ ಕೊರೊನಾ ಪರಿಹಾರವಾಗಿ ರೈಸ್‌ ಕಾರ್ಡ್‌ದಾರರಿಗೆ ತಲಾ 4,000 ರೂ. ನೀಡುವುದಾಗಿ ಹೇಳಿತ್ತು. ಅದರಂತೆ ಮೊದಲ ಕಂತಿನ ಹಣ 2,000 ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಬೊಕ್ಕಸಕ್ಕೆ 4,153.39 ಕೋಟಿ ರೂ. ಹೊರೆಯಾಗಲಿದೆ. ಇದರ ಜತೆಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಆವಿನ್‌ ಹಾಲಿನ ದರವನ್ನು ಲೀಟರ್‌ಗೆ 3 ರೂ.ನಷ್ಟು ಇಳಿಕೆ ಮಾಡಲಾಗಿದೆ. ಮೇ 16ರಿಂದಲೇ ಇದು ಜಾರಿಗೆ ಬರಲಿದೆ. ಇನ್ನು ನಗರದ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಗಳಿಗೆ ಸರಕಾರ 1,200 ಕೋಟಿ ರೂ. ಸಬ್ಸಿಡಿ ನೀಡಲಿದೆ. 'ಚೀಫ್‌ ಮಿನಿಸ್ಟರ್‌ ಇನ್‌ ಯುವರ್‌ ಕಾನ್ಸ್ಟಿಟುಯೆನ್ಸಿ (ನಿಮ್ಮ ಕೇತ್ರದಲ್ಲಿ ಮುಖ್ಯಮಂತ್ರಿ)' ಯೋಜನೆಯ ಅನುಷ್ಠಾನಕ್ಕೆ ಪ್ರತ್ಯೇಕ ಇಲಾಖೆ ತೆರೆಯಲೂ ಸ್ಟಾಲಿನ್‌ ಆದೇಶ ಹೊರಡಿಸಿದ್ದಾರೆ. ಈ ಭರವಸೆಯನ್ನೂ ಪ್ರಣಾಳಿಕೆಯಲ್ಲಿ ನೀಡಲಾಗಿತ್ತು.