ಈ ಕೃಷ್ಣ ಹೋರಿ ಐತಿ ಭಾರೀ; ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ ಹಳ್ಳಿಕಾರ್‌ ತಳಿ!

ನಶಿಸಿ ಹೋಗುತ್ತಿರುವ ಹಳ್ಳಿಕಾರ್‌ ತಳಿ ಅಭಿವೃದ್ಧಿಗಾಗಿಯೇ ವಿಶೇಷವಾಗಿ ಸಾಕಲಾಗಿರುವ ಹೋರಿಯಿದು. ಸುಮಾರು ಮೂರೂವರೆ ವರ್ಷ ವಯಸ್ಸಿನ ಈ ಹೋರಿಯ ವೀರ್ಯಕ್ಕೆ ಭಾರೀ ಬೇಡಿಕೆಯಿದೆ. ಹೀಗಾಗಿ ವಾರಕ್ಕೊಮ್ಮೆ ಇದರಿಂದ ವೀರ್ಯಾಣು ತೆಗೆದು, ಸಂಗ್ರಹಿಸಿಟ್ಟು ಒಂದು ಡೋಸ್‌ ವೀರ್ಯಾಣುವನ್ನು ಒಂದು ಸಾವಿರ ರೂ.ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ದುಬಾರಿ ದರ.

ಈ ಕೃಷ್ಣ ಹೋರಿ ಐತಿ ಭಾರೀ; ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ ಹಳ್ಳಿಕಾರ್‌ ತಳಿ!
Linkup
ಬೆಂಗಳೂರು: ಆವರಣದಲ್ಲಿ ಗುರುವಾರ ಆರಂಭಗೊಂಡ ಕೃಷಿ ಮೇಳದಲ್ಲಿ ಒಂದು ಕೋಟಿ ಬೆಲೆ ಬಾಳುವ ಹಳ್ಳಿಕಾರ್‌ ತಳಿಯ ಪ್ರಮುಖ ಆಕರ್ಷಣೆಯಾಗಿದೆ. 1 ಲಕ್ಷದಿಂದ ಗರಿಷ್ಠ 2 ಲಕ್ಷ ರೂ. ವರೆಗೆ ಹೋರಿಗಳು ಮಾರಾಟ ಆಗುವುದನ್ನು ಕೇಳಿದ್ದೇವೆ. ಆದರೆ ಒಂದು ಕೋಟಿ ಬೆಲೆ ಅಂದರೆ ಅದೆಂಥ ಹೋರಿ ಇರಬೇಕು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಮಂಡ್ಯದ ಮಳವಳ್ಳಿಯಿಂದ ಬಂದಿರುವ ವಿಶೇಷ ತಳಿಯ ಹೋರಿ ನೋಡಲು ಜನ ಮುಗಿ ಬೀಳುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಹಳ್ಳಿಕಾರ್‌ ತಳಿ ಅಭಿವೃದ್ಧಿಗಾಗಿಯೇ ವಿಶೇಷವಾಗಿ ಸಾಕಲಾಗಿರುವ ಹೋರಿಯಿದು. ಸುಮಾರು ಮೂರೂವರೆ ವರ್ಷ ವಯಸ್ಸಿನ ಈ ಹೋರಿಯ ವೀರ್ಯಕ್ಕೆ ಭಾರೀ ಬೇಡಿಕೆಯಿದೆ. ಹೀಗಾಗಿ ವಾರಕ್ಕೊಮ್ಮೆ ಇದರಿಂದ ವೀರ್ಯಾಣು ತೆಗೆದು, ಸಂಗ್ರಹಿಸಿಟ್ಟು ಒಂದು ಡೋಸ್‌ ವೀರ್ಯಾಣುವನ್ನು ಒಂದು ಸಾವಿರ ರೂ.ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ದುಬಾರಿ ದರ. ರಾಮನಗರ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದರ ವೀರ್ಯ ಮಾರಾಟ ಘಟಕಗಳನ್ನು ತೆರೆಯಲಾಗಿದೆ ಎಂದು ಹೋರಿಯ ಮಾಲೀಕ ಮಳವಳ್ಳಿಯ ಬೋರೇಗೌಡ ಹಮ್ಮೆಯಿಂದ ಹೇಳಿಕೊಳ್ಳುತ್ತಾರೆ. ''ಈ ಹೋರಿ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಇದಕ್ಕೆ 'ಕೃಷ್ಣ' ಎಂದು ಹೆಸರಿಡಲಾಗಿದೆ. 6.2 ಅಡಿ ಎತ್ತರ, ಸುಮಾರು 8 ಅಡಿಗೂ ಹೆಚ್ಚು ಉದ್ದವಿರುವ ಈ ಹೋರಿ ಬರೋಬ್ಬರಿ 800 ಕೆ.ಜಿ. ತೂಕವಿದೆ. ಈ ತಳಿಯ ಹಸುವಿನ ಹಾಲಿನಲ್ಲಿ ಎ2 ಪ್ರೊಟೀನ್‌ ಅಂಶವನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದುದು. ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹೋರಿಗೆ ಬೇಡಿಕೆಯಿದ್ದು, ಬೆಲೆಯೂ ದುಬಾರಿಯಾಗಿದೆ. ಅಚ್ಚುಕಟ್ಟಾಗಿ ನೋಡಿಕೊಂಡರೆ ಸುಮಾರು 20 ವರ್ಷ ಬದುಕುತ್ತದೆ,'' ಎಂದು ಬೋರೇಗೌಡ ತಮ್ಮ ಹೋರಿಯ ಕುರಿತು ಮಾಹಿತಿಯನ್ನು ಬಿಚ್ಚಿಟ್ಟರು. ಈ ಹೋತಕ್ಕೆ 7 ಲಕ್ಷ ರೂ.! ಏಳು ಲಕ್ಷ ಮೌಲ್ಯದ ದಕ್ಷಿಣ ಆಫ್ರಿಕಾ ಮೂಲದ ಬೋಯರ್‌ ಹೋತಗಳೂ ಮೇಳದಲ್ಲಿ ನೋಡುಗರನ್ನು ಸೆಳೆಯುತ್ತಿವೆ. ಚಿಕ್ಕನಾಯಕನಹಳ್ಳಿಯಿಂದ ಜತಿನ್‌ ಆಗ್ರೊ ಫಾರಂನ ವೆಂಕಟೇಶ್‌ ತಮ್ಮ ಫಾಮ್‌ರ್‍ನಿಂದ ತಳಿ ಅಭಿವೃದ್ಧಿಗಾಗಿ ಸಾಕಿರುವ ಎರಡು ಹೋತಗಳನ್ನು ಮೇಳಕ್ಕೆ ತಂದಿದ್ದಾರೆ. ಕೇವಲ ಆರು ತಿಂಗಳಲ್ಲೇ ಇದು ಸುಮಾರು 70 ಕೆ.ಜಿ.ಯಷ್ಟು ತೂಕವನ್ನು ಹೊಂದುವ ವಿಶೇಷತೆ ಇದರಲ್ಲಿದೆ. ಈ ಹೋತಗಳು ಒಂದೂವರೆ ವರ್ಷ ವಯಸ್ಸಿನದ್ದಾಗಿದ್ದು, 135-140 ಕೆ.ಜಿ.ಯವರೆಗೆ ತೂಕ ಬರುತ್ತದೆ. ಇದರ ಮಾಂಸ ಕೂಡ ಹೆಚ್ಚು ರುಚಿಯಾಗಿರುತ್ತದೆ ಎಂದು ರೈತರು ಮಾಹಿತಿ ನೀಡಿದರು. ಮಳಿಗೆಗೆ ಮಳೆಯಲ್ಲೇ ಕುಳಿತು ಆಕ್ರೋಶ ಚಿಕ್ಕನಾಯಕನಹಳ್ಳಿಯ ವೆಂಕಟೇಶ್‌ 8 ಸಾವಿರ ರೂ. ಹಣ ಕಟ್ಟಿ ಪ್ರದರ್ಶನಕ್ಕಾಗಿ ಮಾರಾಟ ಮಳಿಗೆಯನ್ನು ಕಾಯ್ದಿರಿಸಿದ್ದರು. ಅದರಂತೆ ನ.11ರ ಮೇಳಕ್ಕೆ ತಡರಾತ್ರಿ ಹೊರಟು, 11ರಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಜಿಕೆವಿಕೆ ಆವರಣಕ್ಕೆ ಕುರಿ ಮತ್ತು ದಕ್ಷಿಣ ಆಫ್ರಿಕಾದ ದುಬಾರಿ ಬೆಲೆ ಹೋತಗಳೊಂದಿಗೆ ಆಗಮಿಸಿದ್ದಾರೆ. ಆದರೆ ಇವರ ಪಾಲಿಗೆ ಯಾವ ಮಳಿಗೆಯನ್ನೂ ನಿಗದಿಪಡಿಸಿರಲಿಲ್ಲ. ಅಧಿಕಾರಿಗಳಗಳನ್ನು ಕೇಳಿದರೆ, ಸ್ವಲ್ಪ ಇರಿ ಕಾರ್ಯಕ್ರಮ ಉದ್ಘಾಟನೆಯಾಗಲಿ ಕೊಡೋಣ ಎಂದು ಹೇಳಿದರು. ಆದರೆ, ಕಾದು ಕಾದು ಸುಸ್ತಾದೆವು. ಮಧ್ಯಾಹ್ನವಾದರೂ ಕೊಡಲಿಲ್ಲ. ಬೆಳಗ್ಗೆಯಿಂದಲೇ ಸಿಕ್ಕಾಪಟ್ಟೆ ಮಳೆ ಬೀಳುತ್ತಿದೆ. ಕುರಿ, ಹೋತಗಳಿಗೆ ಮೇವು ಹಾಕಲು ಕೂಡ ಆಗುತ್ತಿಲ್ಲ. ಹಣ ಕಟ್ಟಿಸಿಕೊಂಡು ಮಳಿಗೆ ಕೊಡಬೇಕಾದ್ದು ಆಯೋಜಕರ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿ, ಮಳೆಯ ನಡುವೆ ಕೆಸರಿನಲ್ಲೇ ಕುಳಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಸಂಗತಿ ಮೇಳದಲ್ಲಿ ಕಂಡು ಬಂತು.