
ಕೋಲ್ಕತ್ತಾ (): ಚುನಾವಣೆ ಹೊಸ್ತಿಲಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿದ್ದ ಹಲವು ನಾಯಕರು ಇದೀಗ ವಾಪಸ್ ಟಿಎಂಸಿಗೆ ಹಿಂದಿರುತ್ತಿದ್ದಾರೆ. ಈ ಪೈಕಿ ಚಿಹ್ನೆಯಡಿ ಗೆಲುವು ಸಾಧಿಸಿದ ಶಾಸಕನೊಬ್ಬ ಮರಳಿ ಟಿಎಂಸಿಗೆ ವಾಪಸ್ ಆಗ್ತಿರೋದು ಬಿಜೆಪಿಗೆ ಶಾಕ್ ಕೊಟ್ಟಂತಾಗಿದೆ.
ಪಶ್ಚಿಮ ಬಂಗಾಳದ ವಿಷ್ಣುಪುರದ ಬಿಜೆಪಿ ತನ್ಮಯ್ ಘೋಷ್ ಅವರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಮರು ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತನ್ಮಯ್, ಬಿಜೆಪಿ ವಿರುದ್ಧ ಹರಿಹಾಯ್ದರು.
ಭಾರತೀಯ ಜನತಾ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಪ್ರತೀಕಾರದ ರಾಜಕೀಯ ಮಾಡುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ. ಹೀಗಾಗಿ, ಸಾರ್ವಜನಿಕರ ಹಿತ ದೃಷ್ಟಿಯಿಂದ ಮಮತಾ ಬ್ಯಾನರ್ಜಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.
ಬಂಗಾಳ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೌಮನ್ ಮಿತ್ರಾ ಅವರ ಪತ್ನಿ ಶಿಖಾ ಮಿತ್ರಾ ಹಾಗೂ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಸೊಸೆ ಶುಭ್ರಾ ಘೋಷ್ ಕೂಡಾ ಭಾನುವಾರವಷ್ಟೇ ಬಿಜೆಪಿ ತ್ಯಜಿಸಿ ಟಿಎಂಸಿ ಸೇರ್ಪಡೆಗೊಂಡಿದ್ದಾರೆ. ಇದಾದ ಮರುದಿನವೇ ಬಿಜೆಪಿ ಶಾಸಕನೊಬ್ಬ ಕಮಲಕ್ಕೆ ಗುಡ್ ಬೈ ಹೇಳಿರೋದು, ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಚುನಾವಣೆಗೆ ಒಂದು ವರ್ಷ ಮುನ್ನವೇ ಆರಂಭವಾಗಿದ್ದ ಬಿಜೆಪಿ ಹಾಗೂ ಟಿಎಂಸಿ ನಡುವಣ ಗುದ್ದಾಟ, ಈಗಲೂ ಕೂಡಾ ಮುಂದುವರೆದಿದೆ. ಬಂಗಾಳದಲ್ಲಿ ಹಲವು ಘರ್ಷಣೆಗಳು, ಕಲ್ಲು ತೂರಾಟ ಪ್ರಕರಣಗಳು ಹಾಗೂ ರಾಜಕೀಯ ಹತ್ಯೆಗಳೇ ನಡೆದು ಹೋಗಿವೆ. ಇಷ್ಟಾದರೂ ಬಿಜೆಪಿ ಕೇವಲ 3 ಸ್ಥಾನದಿಂದ ಬರೋಬ್ಬರಿ 77 ಸ್ಥಾನ ಗಳಿಸಿ ಬಂಗಾಳದಲ್ಲಿ ಬೀಗಿತ್ತು. ಬಂಗಾಳ ಬಿಜೆಪಿ ನಾಯಕ ದಿಲೀಪ್ ಘೋಷ್ ಸಾರಥ್ಯದಲ್ಲಿ ಕೇಸರಿ ಪಡೆ ಉತ್ತಮ ಪ್ರದರ್ಶನವನ್ನೇ ನೀಡಿತ್ತಾದ್ರೂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಗೆದ್ದು ಬಂದರು.
ಇದೀಗ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಟಿಎಂಸಿ ಕಡೆಗೆ ಮುಖ ಮಾಡುತ್ತಿದ್ದಾರೆ. ಇದು ಪ್ರತಿ ಪಕ್ಷ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.