'ಅವಶ್ಯಕತೆಯೇ ಆವಿಷ್ಕಾರದ ತಾಯಿ' ಎಂಬ ಮಾತಿಗೆ ಪೂರಕವಾದ 'ಸಿನಿಮಾ ಬಂಡಿ'
'ಅವಶ್ಯಕತೆಯೇ ಆವಿಷ್ಕಾರದ ತಾಯಿ' ಎಂಬ ಮಾತಿಗೆ ಪೂರಕವಾದ 'ಸಿನಿಮಾ ಬಂಡಿ'
ಈಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದ ಚಿತ್ರ 'ಸಿನಿಮಾ ಬಂಡಿ'. ಮೂಲ ಇದು ತೆಲುಗಿನ ಸಿನಿವಾದರೂ, ಇದರ ಚಿತ್ರೀಕರಣವಾಗಿರುವುದು ಚಿಕ್ಕಬಳ್ಳಾಪುರದ ಗಲ್ಲಂಪಲ್ಲಿ ಎಂಬ ಹಳ್ಳಿಯಲ್ಲಿ. ಮೇಕಿಂಗ್‌ನಲ್ಲಿ ನಮ್ಮ ಕನ್ನಡದ ತಿಥಿಯನ್ನು ಹೋಲುವ ಸಿನಿಮಾ ಬಂಡಿ ಬಗ್ಗೆ ನಿರ್ದೇಶಕ ಬಿ.ಎಸ್. ಲಿಂಗದೇವರು ಬರೆದಿದ್ದಾರೆ.
ಬಿ.ಎಸ್. ಲಿಂಗದೇವರು, ನಿರ್ದೇಶಕರು
'' ಎಂಬ ಸರಳ ನಿರೂಪಣೆಯ ತೆಲುಗು ಚಲನಚಿತ್ರವು 'ಅವಶ್ಯಕತೆಯೇ ಆವಿಷ್ಕಾರದ ತಾಯಿ' ಎಂಬ ಗಾದೆ ಮಾತಿಗೆ ಪೂರಕವಾದ ಕತೆ ಹೊಂದಿದೆ ಎಂಬ ಭಾವನೆ ನನ್ನದು. ಸಿನಿಮಾ ಬಂಡಿಯ ಮುಖ್ಯ ಪಾತ್ರವಾದ ಗಣಪತಿಗೆ ಒಂದು ದಿನ ತಾನು ಓಡಿಸುವ ಆಟೋದಲ್ಲಿ ಬ್ಯಾಗ್ ಸಿಗುತ್ತದೆ, ಬಿಚ್ಚಿ ನೋಡಿದರೆ ದುಬಾರಿ ಬೆಲೆಯ ಕ್ಯಾಮೆರಾ! ಸಿನಿಮಾ ತಯಾರಿಕೆಯ ಮೊದಲ ಹಂತದ ಗಾಳಿ ಗಂಧ ಗೊತ್ತಿಲ್ಲದಿದ್ದರೂ ಸಿನಿಮಾ ಮಾಡುವ ಹಂಬಲ ಆರಂಭವಾಗುತ್ತದೆ ಅವನಿಗೆ.
ತಾನು ಏನನ್ನಾದರೂ ಸಾಧಿಸುವ ಆಸಕ್ತಿ ಇದ್ದರೆ ಅದು ಎಷ್ಟೇ ಕಷ್ಟವಾಗಿದ್ದರೂ ತನ್ನ ನಿಷ್ಟೆ, ಕಠಿಣ ಪರಿಶ್ರಮ ಮತ್ತು ಜೊತೆಗಿರುವವರ ಬೆಂಬಲ ತನ್ನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂದು ಸಾಬೀತು ಮಾಡುವ ಮೂಲಕ ಅನೇಕರಿಗೆ ಪ್ರೇರಣೆ ಈ "ಸಿನಿಮಾ ಬಂಡಿ". ಸಿನಿಮಾ ಎಂದಾಕ್ಷಣ ಕೃತಕವಾದದನ್ನೇ ಹೊಸದಾಗಿ ಮತ್ತು ಆಕರ್ಷಕವಾಗಿ ಹೇಳುವ ಮಾಧ್ಯಮ ಮತ್ತು ಅದೇ ಸೃಜನಶೀಲತೆ ಎಂದು ನಂಬಿರುವ ಪ್ರೇಕ್ಷಕನಿಗೆ ಇಲ್ಲಿ ಸಿಗೋದು ನೈಜವಾದ ಮತ್ತು ಸಹಜವಾದ ದೃಶ್ಯ ಸಂಯೋಜನೆ ಮಾತ್ರ. ಕಣ್ಣಿಗೆ ಮುದ ನೀಡುವ ವೈಭವದ ದೃಶ್ಯಗಳು ಇಲ್ಲದೆ, ಅಂದ ಚೆಂದದ ಸಿಕ್ಸ್ ಪ್ಯಾಕ್ ನಾಯಕ ಮತ್ತು ಜೀರೋ ಸೈಜ್ ನಾಯಕಿಯೂ ಇಲ್ಲದಿರುವ ಚಿತ್ರ ಸಿನಿಮಾ ಬಂಡಿ.
ಈ ಸಿನಿಮಾದ ಪಾತ್ರಗಳ ಜೊತೆ ಗುರುತಿಸಿಕೊಂಡು ತಾನು ಒಬ್ಬ ಪಾತ್ರಧಾರಿ ಎಂದು ಅನ್ನಿಸುತ್ತದೆ ಮತ್ತು ನನ್ನ ಧಾರಾವಾಹಿ ನಿರ್ಮಾಣದ ಆರಂಭದ ದಿನಗಳು ಮತ್ತೆ ನೆನಪಾದವು. ಆಗ ಧಾರಾವಾಹಿ ನಿರ್ಮಾಣ ಮಾಡುವಾಗ ಅನೇಕ ಸೌಕರ್ಯಗಳು ನಮಗೆ ಸಿಗುತ್ತಿರಲಿಲ್ಲ ಉದಾಹರಣೆಗೆ ಕ್ರೇನ್ ಬಳಸಲು ಸಾಧ್ಯವಿರಲಿಲ್ಲ ಆಗ ನಾವು ಬಳಸಿದ್ದು ಎತ್ತಿನ ಬಂಡಿ!
ಬೆಂಗಳೂರಿನಿಂದ ನಮ್ಮ ನಮ್ಮ ಊರಿಗೆ ಹೋಗುವಾಗ ತುಂಬಾ ನಿರೀಕ್ಷೆ ಇಟ್ಟುಕೊಳ್ಳದೆ ಹೋಗುತ್ತೇವೆ ಅಲ್ವಾ? ಅದೇ ಮನಸ್ಥಿತಿಯಲ್ಲಿ ಈ ಸಿನಿಮಾವನ್ನು ನೋಡಿದರೆ ಖಂಡಿತ ಮೋಸ ಆಗಲ್ಲ. ಒಮ್ಮೆ ನೋಡಿ. ಬೆಂಗಳೂರು ಮತ್ತು ಕೋಲಾರದ ಕನ್ನಡ ಈ ಸಿನಿಮಾದಲ್ಲಿ ಬಳಸಿರುವುದರಿಂದ ಬೆಂಗಳೂರಿನವರಿಗೆ ಇದು ಕನ್ನಡ ಸಿನಿಮಾನ ಅಥವಾ ತೆಲುಗುನ ಅಂತ ಅನ್ನಿಸಿದರೂ ಆಶ್ಚರ್ಯ ಪಡಬೇಡಿ !!