ಅಮೇರಿಕಾದಲ್ಲಿದ್ದರೂ ಕನ್ನಡಿಗರ ಸಂಕಷ್ಟಕ್ಕೆ ಮಿಡಿದ ದರ್ಶನ್ ನಾಯಕಿ ಮಾನ್ಯ

ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪೇಂದ್ರ ಅವರ ಈ ನಡೆಗೆ ಹಲವು ತಾರೆಯರೂ ಕೈ ಜೋಡಿಸಿದ್ದು, ಇದೀಗ ಅದೇ ಪಟ್ಟಿಗೆ ನಟಿ ಮಾನ್ಯ ಸೇರ್ಪಡೆಗೊಂಡಿದ್ದಾರೆ.

ಅಮೇರಿಕಾದಲ್ಲಿದ್ದರೂ ಕನ್ನಡಿಗರ ಸಂಕಷ್ಟಕ್ಕೆ ಮಿಡಿದ ದರ್ಶನ್ ನಾಯಕಿ ಮಾನ್ಯ
Linkup
ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಕಾರಣ ಕಳೆದ ವರ್ಷ ಲಾಕ್‌ಡೌನ್ ಹೇರಿದಾಗಲೇ ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಈ ವರ್ಷಾರಂಭದಲ್ಲಿ ಕೆಲವೊಂದು ಚಿತ್ರಗಳು ಬಿಡುಗಡೆಯಾದ್ಮೇಲೆ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುವ ಮಟ್ಟಕ್ಕೆ ಬಂದಿತ್ತು. ಇನ್ನೇನು ಎಲ್ಲವೂ ಸರಿ ಹೋಯ್ತು ಎನ್ನುವಷ್ಟರಲ್ಲಿ ಮತ್ತೆ ಕೊರೊನಾ ಎರಡನೇ ಅಲೆಯ ಕಾರ್ಮೋಡ ಆವರಿಸಿದೆ. ಮತ್ತೊಮ್ಮೆ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಚಿತ್ರರಂಗ ಹಾಗೂ ಕಿರುತೆರೆಯ ಎಲ್ಲಾ ಚಟುವಟಿಕೆಗಳು ಬಂದ್ ಆಗಿದೆ. ಇದರಿಂದ ಚಿತ್ರರಂಗವನ್ನೇ ನಂಬಿರುವ ಎಷ್ಟೋ ಕುಟುಂಬಗಳು ಪರದಾಡುವಂತಾಗಿದೆ. ಕನ್ನಡ ಚಿತ್ರರಂಗಕ್ಕಾಗಿಯೇ ದುಡಿಯುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ರಿಯಲ್ ಸ್ಟಾರ್ ಮುಂದೆ ಬಂದಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪೇಂದ್ರ ಅವರ ಈ ನಡೆಗೆ ಹಲವು ತಾರೆಯರೂ ಕೈ ಜೋಡಿಸಿದ್ದು, ಇದೀಗ ಅದೇ ಪಟ್ಟಿಗೆ ನಟಿ ಸೇರ್ಪಡೆಗೊಂಡಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ನಟಿ ಮಾನ್ಯ ಮನಸ್ಸು ಮಾಡಿದ್ದಾರೆ. ಸದ್ಯ ಅಮೇರಿಕಾದಲ್ಲಿ ನೆಲೆಸಿರುವ ನಟಿ ಮಾನ್ಯ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಒಂದು ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಆ ಹಣದಲ್ಲಿ ಕಷ್ಟದಲ್ಲಿ ಇರುವವರಿಗೆ ದಿನಸಿ ಕಿಟ್ ವಿತರಿಸಲು ಉಪೇಂದ್ರರವರಲ್ಲಿ ನಟಿ ಮಾನ್ಯ ಕೋರಿದ್ದಾರೆ. ನಟಿ ಮಾನ್ಯ ಕುರಿತು.. ವೈದ್ಯ ಪ್ರಹ್ಲಾದನ್ ಮತ್ತು ಪದ್ಮಿನಿ ದಂಪತಿಯ ಪುತ್ರಿ ಮಾನ್ಯ. ಹುಟ್ಟಿದ್ದು ಇಂಗ್ಲೆಂಡ್‌ನಲ್ಲಾದರೂ ಮಾನ್ಯ ಬೆಳೆದಿದ್ದು ದಕ್ಷಿಣ ಭಾರತದಲ್ಲಿ. 14ನೇ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಮಾನ್ಯರನ್ನ ಚಿತ್ರರಂಗ ಕೈಬೀಸಿ ಕರೆಯಿತು. ಅದಾಗಲೇ ಮಲಯಾಳಂ ಮತ್ತು ತಮಿಳಿನ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಮಾನ್ಯ ಬಳಿಕ ನಾಯಕಿಯಾಗಿ ತೆರೆಮೇಲೆ ಮಿಂಚಲು ಆರಂಭಿಸಿದರು. ತೆಲುಗಿನ 'ಸೀತಾರಾಮ ರಾಜು', 'ದೇವಾ', 'ಕಾಲೇಜ್', 'ಪ್ರೇಮಕು ಸ್ವಾಗತಂ', 'ಬ್ರಹ್ಮಾಚಾರಲು', 'ತಮಾಷಾ', ಮಲಯಾಳಂನ 'ಜೋಕರ್', 'ಒನ್ ಮ್ಯಾನ್ ಶೋ', 'ಅಪರಿಚಿತನ್', ತಮಿಳಿನ 'ಕುಸ್ತಿ', 'ನೈನಾ' ಮುಂತಾದ ಚಿತ್ರಗಳಲ್ಲಿ ಮಾನ್ಯ ನಟಿಸಿದ್ದಾರೆ. ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಶಾಸ್ತ್ರೀ', ಶ್ರೀಮುರಳಿ ಅಭಿನಯದ 'ಶಂಭು', ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ 'ವರ್ಷ', ಆದಿತ್ಯ ನಟನೆಯ 'ಅಂಬಿ' ಚಿತ್ರಗಳಲ್ಲಿ ನಟಿ ಮಾನ್ಯ ಮಿಂಚಿದ್ದರು. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್‌ನಲ್ಲಿ ಬಿಜಿಯಿದ್ದ ನಟಿ ಮಾನ್ಯ ಮದುವೆಯಾದ ಬಳಿಕ ಅಮೇರಿಕಾಕ್ಕೆ ತೆರಳಿದರು. ಸದ್ಯ ಅಮೇರಿಕಾದಲ್ಲೇ ಪತಿ ಹಾಗೂ ಮಗಳ ಜೊತೆಗೆ ಮಾನ್ಯ ನೆಲೆಸಿದ್ದಾರೆ. ಉಪೇಂದ್ರ ಜೊತೆ ಕೈ ಜೋಡಿಸಿದ ತಾರೆಯರು ಆರ್ಕೆಸ್ಟ್ರಾ ಕಲಾವಿದರುಗಳಿಗೆ ದಿನಸಿ ಕಿಟ್ ವಿತರಿಸಲು ನಟ ಸಾಧು ಕೋಕಿಲ ಎರಡುವರೆ ಲಕ್ಷ ರೂಪಾಯಿ ನೀಡಿದ್ದಾರೆ. ಬಿ.ಸರೋಜಾದೇವಿ ನಾಲ್ಕು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಇಪ್ಪತ್ತು ಸಾವಿರ ಹಾಗೂ ನಟ ಶೋಭರಾಜ್ ಹತ್ತು ಸಾವಿರ ನೀಡಿದ್ದಾರೆ.