ಅಭಿಮಾನಿಯ ಕಷ್ಟಕ್ಕೆ ಮಿಡಿದ 'ಕಿಚ್ಚ' ಸುದೀಪ್; 'ನನ್ನ ಆಯಸ್ಸೆಲ್ಲ ನಿಮಗಿರಲಿ' ಎಂದ ಫ್ಯಾನ್!

'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಈಚೆಗಷ್ಟೇ ಅವರು ನಟಿ ಸೋನು ಪಾಟೀಲ್ ತಾಯಿಯ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಈಗ ಮತ್ತೋರ್ವ ಫ್ಯಾನ್‌ಗೆ ಸಹಾಯ ಮಾಡಿದ್ದಾರೆ.

ಅಭಿಮಾನಿಯ ಕಷ್ಟಕ್ಕೆ ಮಿಡಿದ 'ಕಿಚ್ಚ' ಸುದೀಪ್; 'ನನ್ನ ಆಯಸ್ಸೆಲ್ಲ ನಿಮಗಿರಲಿ' ಎಂದ ಫ್ಯಾನ್!
Linkup
ನಟ ಕಿಚ್ಚ ಸುದೀಪ್‌ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಜೊತೆಗೆ ಸದ್ದಿಲ್ಲದೇ, ಕಷ್ಟ ಎಂದುಕೊಂಡು ಬಂದವರಿಗೆ ಸಹಾಯ ಮಾಡುತ್ತಾರೆ. ಈಗಾಗಲೇ ತಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್‌ ಮೂಲಕ ಅವರು ಮಾಡಿರುವ ಸಹಾಯಗಳು ಎಲ್ಲರ ಕಣ್ಣಮುಂದಿವೆ. ಗ್ರಾಮ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದೆ ಈ ಟ್ರಸ್ಟ್‌. ಇದೀಗ ತಮ್ಮ ಅಭಿಮಾನಿಯೊಬ್ಬರ ಪತಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಿ, ಮತ್ತೊಮ್ಮೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ ಕಿಚ್ಚ. ಅಂದಹಾಗೆ, ಆ ಅಭಿಮಾನಿಯ ಹೆಸರು ಸೌಮ್ಯಾ. ಸಹಾಯ ಮಾಡಿದ್ದರ ಕುರಿತು ಅವರೊಂದು ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಸುದೀಪ್‌ಗೆ ಧನ್ಯವಾದ ತಿಳಿಸಿದ್ದಾರೆ. 'ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ' ಎಂದು ಸೌಮ್ಯಾ ಆ ವಿಡಿಯೋದಲ್ಲಿ ಹೇಳಿದ್ದಾರೆ. ಸೌಮ್ಯಾ ಪತಿಗೆ ಕೊರೊನಾ ತಗುಲಿತ್ತು!ವಿಡಿಯೋದಲ್ಲಿ ಮಾತನಾಡಿರುವ ಸೌಮ್ಯಾ, 'ಕಳೆದ ತಿಂಗಳು ನನ್ನ ಪತಿಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದೆವು. ಆಗಲೇ ತುಂಬ ಖರ್ಚು ಆಗಿತ್ತು. ನಂತರ ಮನೆಗೆ ಬಂದಮೇಲೇ ಕೊರೊನಾ ತಗುಲಿತು. ನನಗೆ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಆಯಿತು. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಯ್ತು. ಆದರೆ ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದರು. ರೆಮಿಸಿಡಿವರ್‌ ಇಂಜೆಕ್ಷನ್‌ಗಾಗಿ ಹುಡುಕಿದರೂ ಸಿಗಲಿಲ್ಲ' ಎಂದಿದ್ದಾರೆ ಸೌಮ್ಯ. ಆಸ್ಪತ್ರೆ ದುಡ್ಡು ಕಟ್ಟಲು ದುಡ್ಡಿರಲಿಲ್ಲ 20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು 1.50 ಲಕ್ಷ ರೂ. ಖರ್ಚಾಗಿತ್ತು. 'ಇಂತಹ ಸಂದರ್ಭದಲ್ಲಿ 50 ಸಾವಿರ ರೂ. ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದರು. ಅದು ನಮಗೆ ಕಷ್ಟದ ಪರಿಸ್ಥಿತಿ ಆಗಿತ್ತು. ಆದರೂ, ಹೇಗೋ ಹೊಂದಿಸಿಕೊಂಡು ಕಟ್ಟಿದೆವು. ಚಿಕಿತ್ಸೆ ಮುಗಿದ ಮೇಲೆ ಒಟ್ಟಾರೆ ಬಿಲ್ 1.30 ಲಕ್ಷ ರೂ. ಬಿಲ್ ಆಗಿತ್ತು. ಆದರೆ, ಅಷ್ಟೊಂದು ದುಡ್ಡು ನಮ್ಮ ಬಳಿ ಇರಲಿಲ್ಲ. ಎಲ್ಲ ಪ್ರಯತ್ನ ಮಾಡಿದರೂ, ದುಡ್ಡು ಹೊಂದಿಸಲು ಆಗಲಿಲ್ಲ. ಆಗ ಸಹಾಯಕ್ಕೆ ಸುದೀಪ್ ಅವರು ಬಂದರು' ಎಂದು ಸೌಮ್ಯಾ ವಿಡಿಯೋದಲ್ಲಿ ತಿಳಿಸಿದ್ದಾರೆ. ಸುದೀಪ್ ಅವರ ವ್ಯಕ್ತಿತ್ವಕ್ಕೆ ಫ್ಯಾನ್ ನಾನು ಸುದೀಪ್ ಅವರ ಮೊದಲು ಮಾನವನಾಗು ಟ್ರಸ್ಟ್ ಬಗ್ಗೆ ಮಾಹಿತಿ ಪಡೆದುಕೊಂಡ ಸೌಮ್ಯಾ, ಆ ಟ್ರಸ್ಟ್‌ನ ಕಿಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ನಂತರ ವಿಷಯ ಸುದೀಪ್‌ ಅವರಿಗೆ ತಲುಪಿದೆ. ಅವರು ಕೂಡಲೇ ಸೌಮ್ಯಾಗೆ ಆರ್ಥಿಕ ಸಹಾಯ ಮಾಡಿದ್ದಾರೆ. 'ನಾನು ಸುದೀಪ್‌ ಅವರಿಗೆ 10 ವರ್ಷಗಳಿಂಧ ಅಭಿಮಾನಿ. ನಾನು ಗುಣ, ವ್ಯಕ್ತಿತ್ವ ನೋಡಿ, ಅಭಿಮಾನಿಯಾದವಳು. ಈಗ ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಜನ್ಮದಲ್ಲೂ ನಾನು ಅವರ ಅಭಿಮಾನಿಯಾಗಿಯೇ ಹುಟ್ಟುತ್ತೇನೆ. ನಾನು ಸಾಯುವವರೆಗೂ ಸುದೀಪ್ ಅವರ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ಆಯಸ್ಸು ಎಲ್ಲವೂ ಸುದೀಪ್ ಅವರಿಗೆ ಇರಲಿ' ಎಂದು ಸೌಮ್ಯಾ ಹೇಳಿದ್ದಾರೆ.