Samantha: ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಸಮಂತಾ!

ಹಲವು ವರ್ಷಗಳ ಪ್ರೀತಿ ಮಾಡಿ, ಮದುವೆ ಆಗಿದ್ದ ನಟಿ ಸಮಂತಾ ಮತ್ತು ನಾಗ ಚೈತನ್ಯ ಅಕ್ಕಿನೇನಿ ಅಕ್ಟೋಬರ್‌ನಲ್ಲಿ ದೂರ ದೂರ ಆಗಿದ್ದಾರೆ. ಅಧಿಕೃತ ಹೇಳಿಕೆಯ ನಂತರ ಇದೀಗ ಸಮಂತಾ ಆ ಬಗ್ಗೆ ಮಾತನಾಡಿದ್ದಾರೆ.

Samantha: ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಸಮಂತಾ!
Linkup
ಕಳೆದ ಅಕ್ಟೋಬರ್ ಮೊದಲ ವಾರ ಟಾಲಿವುಡ್ ಸಿನಿಪ್ರಿಯರಿಗೆ ಬ್ರೇಕ್ಅಪ್‌ ಸುದ್ದಿಯೊಂದು ಎರಗಿತ್ತು. ನಟಿ ಸಮಂತಾ ಮತ್ತು ನಾಗ ಚೈತನ್ಯ ಅಕ್ಕಿನೇನಿ ಮದುವೆ ಮುರಿದುಕೊಂಡಿದ್ದರು. ಅದನ್ನು ಅಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಹಲವು ವರ್ಷಗಳಿಂದ ಪ್ರೀತಿ ಮಾಡಿ, ನಂತರ ಮದುವೆಯಾಗಿ ಕೆಲವೇ ವರ್ಷ ಸಂಸಾರ ಮಾಡಿ, ಹೀಗೆ ದಿಢೀರನೇ ವಿಚ್ಛೇದನ ಪಡೆದುಕೊಂಡಿದ್ದು ಅವರ ಫ್ಯಾನ್ಸ್‌ಗೆ ತುಂಬ ಬೇಸರ ಉಂಟುಮಾಡಿತ್ತು. ಇದೀಗ ತಮ್ಮ ನಿರ್ಧಾರದ ಬಗ್ಗೆ ಸಮಂತಾ ಮಾತನಾಡಿದ್ದಾರೆ. ನಾನು ತುಂಬ ವೀಕ್ ಎಂದುಕೊಂಡಿದ್ದೆ! 'ನಾನೀಗಲೂ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನು ಎದುರಿಸಿಕೊಂಡು ಹೋಗುತ್ತಿದ್ದೇನೆ. ನಾನೆಷ್ಟು ಸ್ಟ್ರಾಂಗ್ ಇದ್ದೇನೆ ಎಂದು ನನಗೆ ಅಚ್ಚರಿ ಆಯ್ತು. ಮಾನಸಿಕವಾಗಿ ನಾನು ತುಂಬ ವೀಕ್ ಇದ್ದೇನೆ ಎಂದುಕೊಂಡಿದ್ದೆ. ವಿಚ್ಛೇದನದ ನಂತರ ನಾನು ಕುಗ್ಗಿ ಹೋಗಬಹುದು ಅಥವಾ ಸತ್ತು ಹೋಗಬಹುದು ಅಂದುಕೊಂಡಿದ್ದೆ. ಇದನ್ನು ಇಷ್ಟೊಂದು ಸ್ಟ್ರಾಂಗ್‌ ಆಗಿ ನಾನು ಎದುರಿಸುತ್ತೇನೆ ಅಂತ ನಾನು ಎಂದಿಗೂ ಅಂದುಕೊಂಡಿರಲಿಲ್ಲ. ನಾನೆಷ್ಟು ಸ್ಟ್ರಾಂಗ್ ಆಗಿದ್ದೇನೆ ಎಂದು ನನಗೆ ಹೆಮ್ಮೆ ಆಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, 2010ರಲ್ಲಿ ತೆರೆಕಂಡ 'ಯೇ ಮಾಯಾ ಚೇಸಾವೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಗ ಚೈತನ್ಯ ಮತ್ತು ಸಮಂತಾ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಆಗಲೇ ಅವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಹಲವು ವರ್ಷಗಳ ನಂತರ ಎರಡೂ ಕುಟುಂಬದವರನ್ನು ಒಪ್ಪಿಸಿ, 2017ರ ಜನವರಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡು, ಅದೇ ವರ್ಷ ಅಕ್ಟೋಬರ್‌ನಲ್ಲಿ ಅದ್ದೂರಿಯಾಗಿ ಮದುವೆಯಾದರು. ಆದರೆ 2021ರ ಜುಲೈನಲ್ಲಿ ಮೊದಲ ಬಾರಿಗೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ಕೇಳಿಬಂತು. ಇಬ್ಬರು ದೂರ ದೂರ ಆಗಲಿದ್ದಾರೆ ಎನ್ನುವ ವದಂತಿ ಕೇಳಿಬಂತು. ಆದರೆ ಅಕ್ಟೋಬರ್ 2ರಂದು ಆ ವದಂತಿಯೇ ನಿಜವಾಗಿಬಿಟ್ಟಿತ್ತು! ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ! 'ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು' ಎಂದು ಅಕ್ಟೋಬರ್ 2ರಂದು ನಾಗ ಚೈತನ್ಯ ಹಾಗೂ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.