ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು
ಬೆಂಗಳೂರು: ಬಿಬಿಎಂಪಿಯ 2018-19ನೇ ಸಾಲಿನ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, 828.36 ಕೋಟಿ ರೂ. ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ. ಇದರಲ್ಲಿ 684.11 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, 144.25 ಕೋಟಿಗಳನ್ನು ಅಧಿಕಾರಿಗಳು, ಗುತ್ತಿಗೆದಾರರಿಂದ ವಸೂಲು ಮಾಡಲು ಶಿಫಾರಸು ಮಾಡಲಾಗಿದೆ.
ಪಾಲಿಕೆಯ 2018-19ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 879 ಪುಟಗಳ ಲೆಕ್ಕ ಪರಿಶೋಧನಾ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯ ಆಡಳಿತ, ಶಿಕ್ಷಣ, ಕಂದಾಯ, ಆರೋಗ್ಯ ಮತ್ತು ಕಾಮಗಾರಿ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲು ಮಾಡಲಾಗಿದೆ. ಈ ಐದು ವಿಭಾಗಗಳಲ್ಲಿ ನಡೆದಿರುವ ಕಾನೂನುಬಾಹಿರ ಪಾವತಿ, ಅನುಮೋದಿತ ದರಕ್ಕಿಂತ ಹೆಚ್ಚು ಪಾವತಿ, ಅಧಿಕಾರಿಗಳ ಕರ್ತವ್ಯಲೋಪದಿಂದ ಉಂಟಾಗಿರುವ ನಷ್ಟ, ಪಾಲಿಕೆಗೆ ಸಂದಾಯವಾದ ಮೊತ್ತವನ್ನು ಬೊಕ್ಕಸಕ್ಕೆ ಪಾವತಿಸದಿರುವುದು ಹಾಗೂ ಇನ್ನಿತರೆ ನ್ಯೂನತೆಗಳ ಕುರಿತು ಅಂಕಿ-ಅಂಶಗಳ ಸಹಿತ ವಿವರಣಾತ್ಮಕ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಲಿಕೆಯು ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಪಾವತಿಸಲಾಗದೆ, ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದೆ. ಆಸ್ತಿ ತೆರಿಗೆ ಮತ್ತು ಇನ್ನಿತರೆ ಮೂಲಗಳಿಂದ ಸಂಗ್ರಹವಾಗುತ್ತಿರುವ ವರಮಾನವು ದೈನಂದಿನ ಆಡಳಿತ ನಿರ್ವಹಣೆಗಷ್ಟೇ ಸಾಕಾಗುತ್ತಿದೆ. ರಸ್ತೆ ಅಭಿವೃದ್ಧಿ, ನಿರ್ವಹಣೆ, ಮೇಲ್ಸೇತುವೆ, ಅಂಡರ್‌ಪಾಸ್, ವೈಟ್‌ಟಾಪಿಂಗ್, ಟೆಂಡರ್‌ಶ್ಯೂರ್ ಸೇರಿದಂತೆ ಇತರೆ ಬೃಹತ್ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನಕ್ಕಾಗಿ ಸರಕಾರದ ಮುಂದೆ ಕೈಯೊಡ್ಡುವಂತಾಗಿದೆ. ಪಾಲಿಕೆಯು ವಾರ್ಷಿಕ 10 ಸಾವಿರ ಕೋಟಿಗಿಂತ ಹೆಚ್ಚು ಮೊತ್ತದ ಆಯವ್ಯಯ ಮಂಡಿಸುತ್ತಿದೆ. ಲೆಕ್ಕ ಪರಿಶೋಧನಾ ವರದಿಯಂತೆ ಬಜೆಟ್‌ನ ಶೇ 7 ರಿಂದ ಶೇ 8ರಷ್ಟು ಮೊತ್ತವು ಭ್ರಷ್ಟರ ಪಾಲಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಆಯವ್ಯಯದಲ್ಲಿ ನಿರೀಕ್ಷಿಸುವ ವರಮಾನಕ್ಕೂ ಹಾಗೂ ವಾಸ್ತವಿಕ ಲೆಕ್ಕಗಳಿಗೂ ತುಲನೆ ಮಾಡಿದಾಗ ಆದಾಯದಲ್ಲಿ ಶೇ 28ರಷ್ಟು ಕೊರತೆ ಇರುವುದು ಕಂಡುಬರುತ್ತಿದೆ. ಅಂದಾಜು ಮಾಡಲಾದ ತೆರಿಗೆ ಮತ್ತು ತೆರಿಗೆಯೇತರ ಆದಾಯವನ್ನು ಕಟ್ಟುನಿಟ್ಟಾಗಿ ವಸೂಲು ಮಾಡುತ್ತಿಲ್ಲ. ಅಲ್ಲದೆ, ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳದೆ ಮುಂದುವರಿದ ಕಾಮಗಾರಿಗಳಿಗೆ ಹಾಗೂ ಬಾಕಿ ಬಿಲ್‌ಗಳ ಪಾವತಿಗೆ ಆದ್ಯತೆ ನೀಡದೆ ಹೊಸ ಕಾಮಗಾರಿಗಳು, ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ನಿರೀಕ್ಷಿತ ವೆಚ್ಚದಲ್ಲಿಯೂ ಶೇ 24ರಷ್ಟು ಕೊರತೆ ಆಗುತ್ತಿದೆ. ಹೀಗಾಗಿ, ಬಜೆಟ್‌ಗಳು ಅವಾಸ್ತವಿಕ ಎನಿಸುತ್ತಿವೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
144.25 ಕೋಟಿ ರೂ. ವಸೂಲಿಗೆ ಸೂಚನೆ
ಪಾಲಿಕೆಯ ಐದು ಪ್ರಮುಖ ವಿಭಾಗಗಳಲ್ಲಿ 2018-19ನೇ ಸಾಲಿನಲ್ಲಿ ಸಾಕಷ್ಟು ಲೋಪಗಳಾಗಿದ್ದು, ಸಾಕಷ್ಟು ಅಕ್ರಮ ನಡೆದಿದೆ. ಅನುಮೋದಿತ ದರಕ್ಕಿಂತಲೂ ಗುತ್ತಿಗೆದಾರರಿಗೆ ಹೆಚ್ಚು ಮೊತ್ತ ಪಾವತಿ, ಪಾವತಿ ಬಿಲ್‌ಗಳಲ್ಲಿ ಆದಾಯ ತೆರಿಗೆ ಕಡಿತಗೊಳಿಸದೆ ಗುತ್ತಿಗೆ ಸಂಸ್ಥೆಗಳಿಗೆ ಅನುಕೂಲ, ಕಟ್ಟಡ ನಕ್ಷೆ ಮಂಜೂರಾತಿ ಸಂದರ್ಭದಲ್ಲಿ ಕಡಿಮೆ ಮಾರ್ಗಸೂಚಿ ದರ ಲೆಕ್ಕ ಹಾಕಿ, ಕಡಿಮೆ ಶುಲ್ಕ ವಸೂಲಿ ಮಾಡಿರುವುದು, ಸ್ವಾಧೀನಾನುಭವ ಪತ್ರ ನೀಡುವ ಸಂದರ್ಭದಲ್ಲಿ ಹೆಚ್ಚುವರಿ ವಿಸ್ತೀರ್ಣ ಹೊಂದಿರುವ ಕಟ್ಟಡಕ್ಕೆ ಕಡಿಮೆ ದರ ನಿಗದಿ ಮಾಡಿ ಮತ್ತು ಕಡಿಮೆ ವಿಸ್ತೀರ್ಣಕ್ಕೆ ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
ಗುತ್ತಿಗೆದಾರರಿಗೆ ಕಾನೂನುಬಾಹಿರವಾಗಿ ಪಾವತಿ ಮಾಡಿ ಅಕ್ರಮವೆಸಗಿರುವ ಅಧಿಕಾರಿಗಳಿಂದ 144.25 ಕೋಟಿ ರೂ. ವಸೂಲಾತಿ ಮಾಡುವಂತೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕಾಮಗಾರಿಗಳ ಇಲಾಖೆಯಲ್ಲೇ ಅತಿ ಹೆಚ್ಚು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಒಟ್ಟು 566.51 ಕೋಟಿ ರೂ.ಗಳಿಗೆ ಆಕ್ಷೇಪಣೆ ಸಲ್ಲಿಸಿದ್ದು, 39.49 ಕೋಟಿ ರೂ. ವಸೂಲಿಗೆ ಸೂಚಿಸಲಾಗಿದೆ. ಹಾಗೆಯೇ ಕಂದಾಯ ವಿಭಾಗದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಪಟ್ಟಂತೆ 74.65 ಕೋಟಿ ರೂ. ವಸೂಲು ಮಾಡಲು ಹೇಳಲಾಗಿದೆ.
2657.10 ಕೋಟಿ ರೂ. ವಸೂಲಾತಿ ಬಾಕಿ
ಬಿಬಿಎಂಪಿಯ ಪ್ರತಿ ವರ್ಷದ ಹಣಕಾಸು ವಹಿವಾಟಿನ ಲೆಕ್ಕ ಪರಿಶೋಧನೆ ನಡೆಸಿ, ಪಾಲಿಕೆಗೆ ಉಂಟಾಗಿರುವ ನಷ್ಟದ ಕುರಿತು ವರದಿ ನೀಡಲಾಗುತ್ತಿದೆ. ಅದರಂತೆ 1964-65 ರಿಂದ 2017-18ರವರೆಗೆ ಬಿಡುಗಡೆ ಮಾಡಿರುವ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿಒಟ್ಟು 6441.76 ಕೋಟಿಗೆ ಆಕ್ಷೇಪಣೆ ಮತ್ತು 2657.10 ಕೋಟಿ ರೂ. ವಸೂಲಾತಿಗೆ ಸೂಚಿಸಲಾಗಿದೆ. ಆದರೆ, ಈವರೆಗೆ ಬಾಕಿ ವಸೂಲಾತಿಗೆ ಕ್ರಮ ಕೈಗೊಂಡಿಲ್ಲ.
ಲೆಕ್ಕ ಪರಿಶೋಧನಾ ವರದಿಗಳಲ್ಲಿ ಪ್ರಸ್ತಾಪಿಸಿರುವ ಬಾಕಿ ಕಂಡಿಕೆಗಳಲ್ಲಿನ ನ್ಯೂನತೆ, ವಸೂಲಾತಿಗಳ ಬಗ್ಗೆ ಸಕಾಲದಲ್ಲಿ ಕ್ರಮ ಜರುಗಿಸದ ಕಾರಣ, ಕರ್ತವ್ಯಲೋಪವೆಸಗಿದ ಅಧಿಕಾರಿ, ಸಿಬ್ಬಂದಿಯು ನಿವೃತ್ತಿ ಅಥವಾ ಮರಣ ಹೊಂದಿದರೆ ಬಾಕಿ ವಸೂಲಿ ಸಾಧ್ಯವಾಗುವುದಿಲ್ಲ. ಇದರಿಂದ ಪಾಲಿಕೆಗೆ ನಷ್ಟವಾಗಲಿದೆ. ಆದ ಕಾರಣ, ಸಂಬಂಧಪಟ್ಟ ಅಧಿಕಾರಿಗಳು ವಸೂಲಾತಿಗೆ ಕ್ರಮ ವಹಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
2018-19ರಲ್ಲಿ ಆಗಿರುವ ನಷ್ಟ, ಅಕ್ರಮದ ವಿವರ
- ನಗರ ಯೋಜನೆ ವಿಭಾಗದ ಉತ್ತರ ಮತ್ತು ದಕ್ಷಿಣ ವಿಭಾಗದ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ನೀಡುವ ಸಂದರ್ಭದಲ್ಲಿ ಮಾರ್ಗಸೂಚಿ ದರ ಮತ್ತು ಸ್ವತ್ತುಗಳ ವಿಸ್ತೀರ್ಣವನ್ನು ಕಡಿಮೆ ಪರಿಗಣಿಸಿ ತಪ್ಪು ಲೆಕ್ಕಾಚಾರ ಮಾಡಿ ಶುಲ್ಕವನ್ನು ಕಡಿಮೆ ಪಾವತಿಸಿಕೊಂಡಿರುವುದರಿಂದ 8 ಕೋಟಿ ರೂ. ನಷ್ಟ
- ಸ್ವಾಧೀನಾನುಭವ ಪತ್ರ ವಿತರಣೆ ವೇಳೆ ಹೆಚ್ಚುವರಿ ವಿಸ್ತೀರ್ಣದ ಕಟ್ಟಡಕ್ಕೆ ಕಡಿಮೆ ದರ ನಿಗದಿಪಪಡಿಸಿ ಮತ್ತು ದಂಡ ವಿಧಿಸಿ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟು 3.26 ಕೋಟಿ ರೂ. ಅಕ್ರಮ
- ನಕ್ಷೆ ಮಂಜೂರಾತಿ ಅವಧಿ ಮುಕ್ತಾಯದ ನಂತರ ಶೇ 50ರಷ್ಟು ನೆಲಬಾಡಿಗೆ ಶುಲ್ಕ ಪಡೆಯದೆ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿರುವುದರಿಂದ ಪಾಲಿಕೆಗೆ 1.59 ಕೋಟಿ ರೂ. ಲುಕ್ಸಾನು
- ರಾಜಾಜಿನಗರದ ಪಿಐಡಿ 14-1-1 ನಿವೇಶನದ ಮಧ್ಯದಲ್ಲಿ ಕಾಲುವೆ ಹಾದು ಹೋಗಿದ್ದರೂ, 7,29,090 ಚ.ಅಡಿ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪಲ್ಲಾಡಿಯಂ ಕನ್ಸ್‌ಸ್ಟ್ರಕ್ಷನ್ ಪ್ರೈ.ಲಿ ಮತ್ತು ಪ್ಲಾಟಿನಂ ಹಾಸ್ಟಿಟಾಲಿಟಿ ಸರ್ವೀಸಸ್ಪ್ರೈ.ಲಿ ಗೆ ನಕ್ಷೆ ಮಂಜೂರಾತಿ ನೀಡಲಾಗಿದೆ. ಅಲ್ಲದೆ, 61.03 ಚ.ಮೀ ವಿಸ್ತೀರ್ಣದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಟೆರೇಸ್ ಭಾಗಕ್ಕೆ ನಿಯಮಾವಳಿ ಉಲ್ಲಂಘಿಸಿ ಒಸಿ ವಿತರಣೆ. ಪ್ರಸಕ್ತ ಪ್ರದೇಶದಲ್ಲಿನ ಮಾರ್ಗಸೂಚಿ ದರದ ಬದಲಿಗೆ ಬೇರೊಂದು ಪ್ರದೇಶದ ಮಾರ್ಗಸೂಚಿ ದರ ಲೆಕ್ಕ ಹಾಕಿ ಶುಲ್ಕ ಸಂಗ್ರಹಿಸುವ ಮೂಲಕ 6.76 ಕೋಟಿ ರೂ. ಅವ್ಯವಹಾರ
- ಬನ್ನೇರುಘಟ್ಟ ಮುಖ್ಯರಸ್ತೆಯ ಜೇಡಿ ಮರ ಜಂಕ್ಷನ್‌ನಿಂದ ಕೋಳಿಫಾರಂ ಜಂಕ್ಷನ್‌ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಮಣ್ಣು ಅಗೆತಕ್ಕೆ ಕೆಲಸಕ್ಕೆ ವಿಶಿಷ್ಟ ವಿವರಣೆ ದರಕ್ಕಿಂತ ಹೆಚ್ಚು ಮೊತ್ತವನ್ನು ಗುತ್ತಿಗೆ ಸಂಸ್ಥೆಗೆ ಪಾವತಿಸಿರುವುದರಿಂದ ಬಿಬಿಎಂಪಿಗೆ 40.36 ಲಕ್ಷ ನಷ್ಟ
- ರಾಜಕಾಲುವೆ ನಿರ್ಮಾಣ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿರುವುದರಿಂದ ಪಾಲಿಕೆಗೆ 1.40 ಕೋಟಿ ರೂ. ಹೊರೆ
- ಪಾಲಿಕೆ ವ್ಯಾಪ್ತಿಯ ನಾನಾ ಪ್ರದೇಶಗಳಲ್ಲಿ ಕಸ ಸಂಗ್ರಹಕ್ಕೆ ಅಳವಡಿಸಿರುವ ಮತ್ತು ನಿರ್ವಹಣೆಗೆ ಟಿಪ್ಪರ್ ಕ್ರೇನ್ ಖರೀದಿ ಕಾಮಗಾರಿಗೆ ಎಫ್‌ಎಸ್‌ಡಿ ಕಡಿಮೆ ಪಡೆದಿರುವುದರಿಂದ 2.86 ಕೋಟಿ ರೂ. ನಷ್ಟವಾಗಿದೆ
- ಸುಧಾರಣಾ ವೆಚ್ಚ ಪಡೆಯದೆ ಮತ್ತು ಕಡಿಮೆ ಮೊತ್ತ ಪಡೆದು ಖಾತಾ ನೋಂದಾಯಿಸಿ 9.14 ಕೋಟಿ ರೂ. ಅಕ್ರಮ
2018-19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಕ್ಷೇಪಣೆ, ವಸೂಲಾತಿ ಮೊತ್ತದ ವಿವರ
ವಿಭಾಗಗಳು ಆಕ್ಷೇಪಣೆ (ರೂ.ಗಳಲ್ಲಿ) -ವಸೂಲಾತಿ (ರೂ.ಗಳಲ್ಲಿ) -ಒಟ್ಟು
ಸಾಮಾನ್ಯ ಆಡಳಿತ 65,87,24,539 -24,05,52,942 -89,92,77,481
ಶಿಕ್ಷಣ 30,32,27,737- 4,33,660- 30,36,61,397
ಕಾಮಗಾರಿ 566,51,13,896 -39,49,49,899- 606,00,63,795
ಕಂದಾಯ 10,17,03,113 -74,65,49,252- 84,82,52,365
ಆರೋಗ್ಯ 11,23,79,171 -6,00,42,522 -17,24,21,693
ಒಟ್ಟು 684,11,48,45- 144,25,28,275- 828,36,76,731