500 ರೂ. ಗಡಿ ದಾಟಿದ ಹೊಸ ಅಡಕೆ ದರ, ಮಾರುಕಟ್ಟೆಯಲ್ಲಿ ಸಂಚಲನ

ಕರಾವಳಿಯ ಚಾಲಿ ಬಿಳಿ ಹೊಸ ಅಡಕೆ ಬೆಲೆ ಶುಕ್ರವಾರ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದು, ಕೆಜಿಗೆ 505 ರೂ. ವರೆಗೆ ಖರೀದಿಯಾಗಿದೆ. ಒಂದೇ ವಾರದಲ್ಲಿ 25 ರೂ. ಹೆಚ್ಚಳವಾಗಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.

500 ರೂ. ಗಡಿ ದಾಟಿದ ಹೊಸ ಅಡಕೆ ದರ, ಮಾರುಕಟ್ಟೆಯಲ್ಲಿ ಸಂಚಲನ
Linkup
ಮಂಗಳೂರು: ಕರಾವಳಿಯ ಚಾಲಿ ಬಿಳಿ ಹೊಸ ಬೆಲೆ ಶುಕ್ರವಾರ ಜಿಲ್ಲೆಯ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದು, ಕೆಜಿಗೆ 505 ರೂ. ವರೆಗೆ ಖರೀದಿಯಾಗಿದೆ. ಈ ಮೂಲಕ ಒಂದೇ ವಾರದಲ್ಲಿ 25 ರೂ. ಹೆಚ್ಚಳವಾಗಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಕಳೆದ ವಾರ ಹೊಸ ಅಡಕೆ ಬೆಲೆ 475 ರಿಂದ 480 ರೂ.ವರೆಗೆ ಇತ್ತು. ಪ್ರತಿದಿನ 5 ರೂ.ನಂತೆ ಹೆಚ್ಚಳ ದಾಖಲಿಸಿದ ಬೆಲೆ ಇದೀಗ ಬರೋಬ್ಬರಿ 505 ರೂ.ವರೆಗೆ ಬಂದು ತಲುಪಿದೆ. ಈ ಮೂಲಕ ಮೊದಲ ಬಾರಿಗೆ ಹೊಸ 500 ರೂ. ಗಡಿ ದಾಟಿದೆ. ಈ ಹಿಂದೆಯೇ ಹಳೆ ಅಡಕೆ ದರ 500 ರೂ. ಗಡಿ ದಾಟಿ ಐತಿಹಾಸಿಕ ಸಾಧನೆ ಮಾಡಿತ್ತು. ವಾರಾಂತ್ಯದಲ್ಲಿ ಹೊಸ ಅಡಕೆ ದರ ಮತ್ತಷ್ಟು ಏರಿಕೆಯಾಗಿ 510 ರೂ.ವರೆಗೆ ಖರೀದಿಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಾಲಿ ಮಾರುಕಟ್ಟೆಯಲ್ಲಿ ಹೊಸ ಅಡಕೆಯಾಗಿ ಖರೀದಿಯಾಗುತ್ತಿರುವ ಅಡಕೆ ಇನ್ನೊಂದು ತಿಂಗಳಿನಲ್ಲಿ ಹಳೆ ಅಡಕೆಯಾಗಲಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಅಡಕೆ ಆವಕ ತೀವ್ರ ಇಳಿಮುಖವಾಗಿದ್ದು, ಅಡಕೆ ಕೊರತೆಯಿಂದ ಖಾಸಗಿ ವಲಯ ದಿಢೀರನೆ ದರ ಪೈಪೋಟಿ ನಡೆಸಿ ಮಾರುಕಟ್ಟೆಗೆ ಅಡಕೆ ಬರುವಂತೆ ಮಾಡುತ್ತಿದ್ದಾರೆ. ಆದರೆ ಬೆಳೆಗಾರರು ಮಾತ್ರ ಜಾಣ ಮೌನ ವಹಿಸುತ್ತಿದ್ದು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹಳೆ ಅಡಕೆ ಬೆಲೆಯಲ್ಲಿ ಅಲ್ಪ ಏರಿಕೆ ಕಂಡು ಬಂದಿದ್ದು, ಕೆಜಿಗೆ 510 ರೂ.ವರೆಗೆ ಖರೀದಿಯಾಗುತ್ತಿದೆ. ಈ ಸಾಲಿನ ಕೊಯ್ಲಿನ ಹೊಸ ಅಡಕೆಯೂ ಮಾರುಕಟ್ಟೆಗೆ ಬರುತ್ತಿದ್ದು, 440 ರೂ.ವರೆಗೆ ಖರೀದಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಅತ್ತ ಕೆಂಪಡಕೆ ದರವೂ ಏರಿಕೆ ಕರಾವಳಿಯಲ್ಲಿ ಚಾಲಿ ಒಂದೇ ಸಮನೆ ಏರಿಕೆಯಾಗುತ್ತಿದ್ದರೆ ಇತ್ತ ಕೆಂಪಡಕೆ ಟೆಂಡರ್‌ ದರವೂ ಏರಿಕೆಯಾಗುತ್ತಿದೆ. ಶುಕ್ರವಾರ ಯಲ್ಲಾಪುರದಲ್ಲಿ ಕ್ವಿಂಟಾಲ್‌ ಕೆಂಪಡಕೆ (ರಾಶಿ) 55,399 ರೂ.ಗೆ ಬಿಕರಿಯಾಗಿದ್ದಾರೆ, ಶಿವಮೊಗ್ಗದಲ್ಲಿ 54,899 ರು.ಗೆ ಮಾರಾಟವಾಗಿದೆ. ಚಾಲಿ ಅಡಕೆ ದರ ಕಳೆದ 2 ವರ್ಷಗಳಿಂದ ಏರು ಮುಖದಲ್ಲಿದ್ದರೆ, ಕೆಂಪಡಕೆ ದರ ಕಳೆದ ಕೆಲವು ತಿಂಗಳಿನಿಂದ ಏರಿಕೆ ಕಾಣುತ್ತಿದೆ. ಒಟ್ಟಿನಲ್ಲಿ ಅಡಕೆ ಬೆಳೆಗಾರರು ಈ ಬಾರಿ ಬೆಲೆ ಏರಿಕೆಯ ಸಂಭ್ರಮದಲ್ಲಿದ್ದಾರೆ.