18 ತಿಂಗಳ ಬಳಿಕ ಕಚೇರಿಗೆ ಮರಳಿದ ವಿಪ್ರೋ ಸಿಬ್ಬಂದಿ, ವರ್ಕ್‌ ಫ್ರಂ ಹೋಂ ಅಂತ್ಯ

ವಿಪ್ರೋ ತನ್ನ ಎಲ್ಲಾ ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂದು ಸೂಚಿಸಿದ್ದು, ಉದ್ಯೋಗಿಗಳು ಸೋಮವಾರ (ಸೆ. 13)ದಿಂದ ವಾರದ ಎರಡು ದಿನ ಕಚೇರಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದೆ.

18 ತಿಂಗಳ ಬಳಿಕ ಕಚೇರಿಗೆ ಮರಳಿದ ವಿಪ್ರೋ ಸಿಬ್ಬಂದಿ, ವರ್ಕ್‌ ಫ್ರಂ ಹೋಂ ಅಂತ್ಯ
Linkup
ಹೊಸದಿಲ್ಲಿ: ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ತನ್ನ ಎಲ್ಲಾ ಉದ್ಯೋಗಿಗಳು ಕಚೇರಿಗೆ ಮರಳಬೇಕು ಎಂದು ಸೂಚಿಸಿದೆ. ಉದ್ಯೋಗಿಗಳು ಸೋಮವಾರ (ಸೆಪ್ಟೆಂಬರ್‌ 13)ದಿಂದ ವಾರದ ಎರಡು ದಿನ ಕಚೇರಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಈ ಕುರಿತು ಭಾನುವಾರ ಟ್ವಿಟರ್‌ನಲ್ಲಿ ಘೋಷಣೆ ಮಾಡಿರುವ ಸಂಸ್ಥೆ ಅಧ್ಯಕ್ಷ ರಿಶದ್‌ ಪ್ರೇಮ್‌ಜಿ, "18 ತಿಂಗಳ ಸುದೀರ್ಘ ಅವಧಿಯ ಬಳಿಕ ನಮ್ಮ ಲೀಡರ್‌ಗಳು ನಾಳೆಯಿಂದ ಕಚೇರಿಗೆ ಬರುತ್ತಿದ್ದಾರೆ. ಎಲ್ಲರಿಗೂ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದ್ದು, ಕಚೇರಿಯಲ್ಲಿ ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಎಲ್ಲ ವ್ಯವಸ್ಥೆ ಮಾಡಲಾಗಿದೆ," ಎಂದು ತಿಳಿಸಿದ್ದಾರೆ. ಉದ್ಯೋಗಿಗಳ ತಾಪಮಾನ ತಪಾಸಣೆ, ಕ್ಯೂಆರ್‌ ಕೋಡ್‌ ಸ್ಕ್ಯಾ‌ನಿಂಗ್‌ ಸೇರಿದಂತೆ ವಿಪ್ರೋ ಕಚೇರಿಯಲ್ಲಿ ಕೈಗೊಂಡಿರುವ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತ ವಿಡಿಯೋವನ್ನೂ ಅವರು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. "ಲಸಿಕೆ ಪಡೆದ ಉದ್ಯೋಗಿಗಳ ಸಂಖ್ಯೆ ಮತ್ತು ಕೊರೊನಾ ಪರಿಸ್ಥಿತಿ ಗಮನಿಸಿಕೊಂಡು ನಮ್ಮ ಕೆಲಸದ ಪಡೆಯನ್ನು ಸೆಪ್ಟೆಂಬರ್‌ನಿಂದ ಹಂತ ಹಂತವಾಗಿ ಕಚೇರಿಗೆ ಕರೆಸಿಕೊಳ್ಳಲಾಗುವುದು," ಎಂದು ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್‌ ಗೋವಿಲ್‌ ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು. "ನಮ್ಮ ಶೇಕಡಾ 55ರಷ್ಟು ಉದ್ಯೋಗಿಗಳು ಕೊರೊನಾ ನಿರೋಧಕ ಲಸಿಕೆ ಪಡೆದಿದ್ದಾರೆ," ಎಂದು ಜುಲೈ 14ರಂದು ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಶದ್‌ ಪ್ರೇಮ್‌ಜಿ ಹೇಳಿದ್ದರು. ವಿಪ್ರೋದಲ್ಲಿ ಸದ್ಯ 2 ಲಕ್ಷ ಉದ್ಯೋಗಿಗಳಿದ್ದಾರೆ. ಕರ್ನಾಟಕ ಸರಕಾರ ಐಟಿ ಕಂಪನಿಗಳಿಗೆ ಡಿಸೆಂಬರ್‌ 2022ವರೆಗೆ ವರ್ಕ್‌ ಫ್ರಂ ಹೋಂ ಮುಂದುವರಿಸುವಂತೆ ಸಲಹೆ ನೀಡಿತ್ತು. ಅದರಲ್ಲೂ ಔಟರ್ ರಿಂಗ್‌ ರೋಡ್‌ ಸುತ್ತಮುತ್ತ ಇರುವ ಕಂಪನಿಗಳಿಗೆ ಈ ವಿಶೇಷ ಸೂಚನೆ ನೀಡಿತ್ತು. ಮೆಟ್ರೋ ಕಾಮಗಾರಿ ಆರಂಭವಾಗಲಿರುವುದರಿಂದ ಟ್ರಾಫಿಕ್‌ ನಿಯಂತ್ರಣ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳುವಂತೆ ಐಟಿ ಕಂಪನಿಗಳಿಗೆ ಸರಕಾರ ಮನವಿ ಮಾಡಿತ್ತು. ಆದರೆ ಇದರ ನಡುವೆ ವಿಪ್ರೋ ಅಂತ್ಯಗೊಳಿಸಿದ್ದು, ವಾರದಲ್ಲಿ ಎರಡು ದಿನಗಳ ಕಾಲ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ.