15 ದಿನದಲ್ಲಿ ಅಧಿವೇಶನ ಕರೆಯದಿದ್ದರೆ ಉಗ್ರ ಪ್ರತಿಭಟನೆ - ಸರಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ

ಕೊರೊನಾ ಬಿಕ್ಕಟ್ಟಿನಲ್ಲೂ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನಿತ್ಯ ವಸ್ತುಗಳ ಬೆಲೆ ಏರಿಕೆ ಕುರಿತಂತೆ ಮುಕ್ತವಾಗಿ ಚರ್ಚಿಸಲು 15 ದಿನಗಳಲ್ಲಿ ವಿಧಾನಮಂಡಲ ಅಧಿವೇಶನ ಕರೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

15 ದಿನದಲ್ಲಿ ಅಧಿವೇಶನ ಕರೆಯದಿದ್ದರೆ ಉಗ್ರ ಪ್ರತಿಭಟನೆ - ಸರಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ
Linkup
ಪೀಣ್ಯ (ಬೆಂಗಳೂರು): ಕೋವಿಡ್‌ ಪರಿಸ್ಥಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನಿತ್ಯ ವಸ್ತುಗಳ ಬೆಲೆ ಏರಿಕೆ ಕುರಿತಂತೆ ಅವಲೋಕನ ಮತ್ತು ಮುಕ್ತವಾಗಿ ಚರ್ಚಿಸಲು 15 ದಿನಗಳಲ್ಲಿ ವಿಧಾನಮಂಡಲ ಅಧಿವೇಶನ ಕರೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್‌ನ ರಾಮಯ್ಯ ಬಡಾವಣೆ ಮೈದಾನದಲ್ಲಿ ಶಾಸಕ ಆರ್‌ ಮಂಜುನಾಥ್‌ ನೇತೃತ್ವದಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಿಸಿದ ನಂತರ ಮಾತನಾಡಿದ ಅವರು, ''ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪೆಟ್ರೋಲ್‌ ಬೆಲೆ 100 ರೂ. ದಾಟಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಬಡವರ ಸೇವೆ ಮಾಡಲು ಅಧಿಕಾರಕ್ಕೆ ಬಂದಿಲ್ಲ, ಲೂಟಿ ಹೊಡೆಯುವುದೇ ಪರಮ ಗುರಿಯಾಗಿದೆ,'' ಎಂದು ಕಿಡಿಕಾರಿದರು. ''ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಜಾರಿಗೆ ತಂದ 'ಬಡವರ ಬಂಧು' ಯೋಜನೆಯನ್ನು ಮುಂದುವರಿಸಿದರೆ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಅದನ್ನು ಬಿಟ್ಟು ದಿನಬೆಳಗಾದರೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದು ಹಾದಿ ಬೀದಿಯಲ್ಲಿ ಬಿಜೆಪಿ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ,'' ಎಂದು ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ ಹೋರಾಟಕ್ಕೆ ಟೀಕೆ "ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ರಾಜ್ಯಾದಾದ್ಯಂತ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಆದರೆ ಅವರದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ಏಕೆ ಕಡಿಮೆ ಮಾಡಿಸುತ್ತಿಲ್ಲ," ಎಂದು ಕಾಂಗ್ರೆಸ್‌ ಪಕ್ಷವನ್ನು ಎಚ್‌ಡಿಕೆ ತರಾಟೆಗೆ ತೆಗೆದುಕೊಂಡರು. 'ಅಭಿವೃದ್ಧಿ ಕಾಮಗಾರಿಗೆ ಬಿಜೆಪಿಗರ ಅಡ್ಡಿ' "ದಾಸರಹಳ್ಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಮುಂದಾದರೆ ಕೆಲ ಬಿಜೆಪಿ ಮುಖಂಡರ ಕಡೆಯವರಿಂದ ಗುತ್ತಿಗೆದಾರರಿಗೆ ಧಮಕಿ ಹಾಕಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ,'' ಎಂದು ಶಾಸಕ ಆರ್‌.ಮಂಜುನಾಥ್‌ ದೂರಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರದ ಅಧ್ಯಕ್ಷ ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಜಗದೀಶ್‌, ಸ್ಥಳೀಯ ಮುಖಂಡರಾದ ಎಚ್‌.ಎನ್‌.ಗಂಗಾಧರ್‌, ಎಚ್‌.ಆರ್‌.ಪ್ರಕಾಶ್‌, ರುದ್ರೇಗೌಡ, ಕೆ.ಸಿ.ವೆಂಕಟೇಶ್‌ ಮತ್ತಿತರರು ಇದ್ದರು.