10ರೂ. ನಾಣ್ಯಕ್ಕೆ ಅಘೋಷಿತ ನಿಷೇಧವೇಕೆ? ಬ್ಯಾಂಕ್‌ ಅಧಿಕಾರಿಗಳು ಹೇಳುವುದೇನು?

ಕೇಂದ್ರ ಸರಕಾರ 10 ರೂಪಾಯಿ ನಾಣ್ಯಗಳನ್ನು ರದ್ದತಿ ಮಾಡಿಲ್ಲ. ಆದರೆ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ ನಾಣ್ಯಗಳನ್ನು ಮಾತ್ರ ಅಘೋಷಿತ ನಿಷೇಧಕ್ಕೆ ಜನರು ಗುರಿಪಡಿಸಿದ್ದಾರೆ. ಇದಿರಿಂದ ಈ ನಾಣ್ಯಗಳು ಬಳಕೆಯಾಗದೆ ಮನೆಯಲ್ಲೇ ಉಳಿದಿವೆ.

10ರೂ. ನಾಣ್ಯಕ್ಕೆ ಅಘೋಷಿತ ನಿಷೇಧವೇಕೆ? ಬ್ಯಾಂಕ್‌ ಅಧಿಕಾರಿಗಳು ಹೇಳುವುದೇನು?
Linkup
ಆದರ್ಶ ಕೋಡಿ, ದೊಡ್ಡಬಳ್ಳಾಪುರ ದೇಶದಾದ್ಯಂತ 2016ರ ನವೆಂಬರ್‌ನಲ್ಲಿ 500 ಮತ್ತು 1000 ರೂ. ಕರೆನ್ಸಿ ನೋಟುಗಳನ್ನು ರದ್ದು ಮಾಡಿದ ಮೇಲೆ ಕೇಂದ್ರ ಸರಕಾರ ಯಾವುದೇ ನೋಟುಗಳನ್ನು ಅಥವಾ ನಾಣ್ಯಗಳನ್ನು ರದ್ದತಿ ಮಾಡಿಲ್ಲ. ಆದರೆ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ ನಾಣ್ಯಗಳನ್ನು ಮಾತ್ರ ಅಘೋಷಿತ ನಿಷೇಧಕ್ಕೆ ಜನರು ಗುರಿಪಡಿಸಿದ್ದಾರೆ. ರಸ್ತೆ ಬದಿಯ ತರಕಾರಿ ಅಂಗಡಿಯವರು, ಪಾನಿಪುರಿ ಸ್ಟಾಲ್‌ನವರು , ಸಣ್ಣ ಪುಟ್ಟ ಅಂಗಡಿಗಳು ಹೀಗೆ ಎಲ್ಲೇ ಪ್ರಯತ್ನಿಸಿದರೂ ಅವುಗಳನ್ನು ಚಲಾವಣೆ ಮಾಡಲು ಆಗುತ್ತಿಲ್ಲ. ಯಾಕೆ ತೆಗೆದುಕೊಳ್ಳುವುದಿಲ್ಲಎಂದು ಕೇಳಿದರೆ, ಅವುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನುವ ಸಿದ್ಧ ಉತ್ತರ ದೊರಕುತ್ತದೆ. 10 ರೂ. ನಾಣ್ಯಗಳು ಯಾವುದೇ ರೀತಿ ನಿಷೇಧಕ್ಕೆ ಒಳಗಾಗಿಲ್ಲ. ಇದನ್ನು ಎಲ್ಲರೂ ಬಳಸಿ ಎಂಬುದು ಬ್ಯಾಂಕ್‌ನ ಅಧಿಕಾರಿಗಳ ಕಿವಿಮಾತಾಗಿದೆ. ಅಘೋಷಿತ ನಿಷೇಧ: ಯಾವುದೇ ಸಮಸ್ಯೆಯಿಲ್ಲದೆ ಬಳಕೆಯಾಗುತ್ತಿದ್ದ 10ರೂ. ನಾಣ್ಯಗಳ ಬಳಕೆ ಒಮ್ಮೆಲೆ ನಿಂತು ಹೋಯಿತು. ಹತ್ತು ರೂ. ನಾಣ್ಯಗಳ ಅಘೋಷಿತ ನಿಷೇಧದ ಹಿಂದೆ ಯಾವುದೇ ದೃಢವಾದ ಕಾರಣ ಕಾಣುತ್ತಿಲ್ಲ. ಇದು ಊಹಾಪೋಹ ಮತ್ತು ವದಂತಿಗಳು ಸೃಷ್ಟಿಸಿದ ಸಮಸ್ಯೆಯಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಅಪಪ್ರಚಾರ ಮಾಡಿ ಈ ರೀತಿಯ 10ರೂ. ನಾಣ್ಯಗಳ ಅನಧಿಕೃತ ನಿಷೇಧಕ್ಕೆ ಕಾರಣರಾಗಿದ್ದಾರೆ ಎಂದು ಬ್ಯಾಂಕ್‌ ಸಿಬ್ಬಂದಿಗಳ ಅಭಿಪ್ರಾಯವಾಗಿದೆ. 10ರೂ. ನಾಣ್ಯಕ್ಕೆ ಮಾತ್ರ ನಿಷೇಧ: 2005ರಲ್ಲಿ ಚಲಾವಣೆಗೆ ಬಂದ 10 ರೂಪಾಯಿ ನಾಣ್ಯಗಳ ಬಳಕೆ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ಕಳೆದೆರಡು ಮೂರು ವರ್ಷಗಳಿಂದ ಸಂಪೂರ್ಣ ಬಳಕೆಯಾಗುತ್ತಿಲ್ಲ. ಇನ್ನುಳಿದಂತೆ 1,2,5 ರೂ. ನಾಣ್ಯಗಳ ಬಳಕೆಗೆ ಯಾವುದೇ ಸಮಸ್ಯೆಯಾಗದಂತೆ ಮುಂದುವರಿದಿದೆ. ಆದರೆ 10ರೂ. ನಾಣ್ಯಕ್ಕೆ ಮಾತ್ರ ಯಾಕೆ ಈ ನಿಷೇಧ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಪ್ರಮುಖಾಂಶಗಳು
  • ಜನರಿಗೆ ಅಘೋಷಿತ ನಿಷೇಧಕ್ಕೆ ಒಳಗಾದ 10ರೂ ನಾಣ್ಯ
  • 1,2,5ರೂ.ಗಳ ನಾಣ್ಯಗಳಿಗಿಲ್ಲ ಸಮಸ್ಯೆ
  • ವ್ಯಾಪಾರಿಗಳಲ್ಲಿ ನಾಣ್ಯದ ಕುರಿತು ನಿರಾಸಕ್ತಿ
  • ಬ್ಯಾಂಕ್‌ಗಳಲ್ಲಿ ಕರಪತ್ರದ ಮೂಲಕ ನಾಣ್ಯ ಬಳಕೆಗೆ ಅರಿವು
  • 10ರೂ ನಾಣ್ಯ ಚಲಾವಣೆಯಲ್ಲಿದೆ ಬಳಸಿ ಎನ್ನುತ್ತಿರುವ ಅಧಿಕಾರಿಗಳು
  • ಮನೆಗಳಲ್ಲಿ ಉಳಿದ ನಾಣ್ಯ
ಕೆಲವರಿಗೆ ಹೊಸದಾಗಿ ಬಿಡುಗಡೆಯಾದ ನಾಣ್ಯಗಳ ಸಂಗ್ರಹಿಸುವ ಹವ್ಯಾಸವಿರುತ್ತದೆ. ಅದರಂತೆ 10ರೂಪಾಯಿ ಚಲಾವಣೆಗೆ ಬಂದಾಗ ಇದರ ಡಿಸೈನ್‌ಗೆ ಮರಳಾಗಿ ಹೆಚ್ಚಾಗಿ ಸಂಗ್ರಹಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅಘೋಷಿತ ನಿಷೇಧಕ್ಕೆ 10ರೂ. ನಾಣ್ಯಗಳು ಒಳಗಾಯಿತು. ಇದರಿಂದ ಮನೆಯಲ್ಲಿದ್ದ ನಾಣ್ಯಗಳನ್ನು ಬಳಸಲಾಗದೇ 100 ರಿಂದ ಸಾವಿರಾರು ರೂಪಾಯಿ ಮೌಲ್ಯ ನಾಣ್ಯಗಳು ಮನೆಗಳಲ್ಲಿ ಉಳಿದುಕೊಂಡಿದೆ. ಬ್ಯಾಂಕ್‌ನಲ್ಲಿ ಅರಿವು: 10ರೂಪಾಯಿ ನಾಣ್ಯಗಳ ಯಾವುದೇ ರೀತಿಯ ನಿಷೇಧಕ್ಕೆ ಒಳಗಾಗಿಲ್ಲವೆಂದು ಆರ್‌ ಬಿಐ ತಿಳಿಸಿತ್ತು. ಆದರೆ ಅದೇಕೋ ಜನರು ಇದನ್ನು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಇದರಿಂದ ಅದರ ಬಳಕೆ ಆರಂಭವಾಗಲಿಲ್ಲ. ಇದರಿಂದ ಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಇದರ ಬಗ್ಗೆ ತಿಳಿಸುವ ಮೂಲಕ ಕರಪತ್ರಗಳ ಮೂಲಕ ಮಾಹಿತಿ ಬಿತ್ತರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೆಲವೆಡೆ ಮಾಹಿತಿ ಕಾರ್ಯಕ್ರಮ: 10ರೂಪಾಯಿ ನಾಣ್ಯಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಬೆನ್ನಲ್ಲೇ ಕೆಲವೆಡೆ ಅಧಿಕಾರಿಗಳು ಜನಸಂದಣಿ ಪ್ರದೇಶಗಳಾದ ಎಪಿಎಂಸಿ, ಪೆಟ್ರೋಲ್‌ ಬಂಕ್‌, ವಾಣಿಜ್ಯ ಮಳಿಗೆ ಬಳಿ ತೆರಳಿ ಅಲ್ಲಿ 10ರೂ. ನಾಣ್ಯಗಳ ಚಲಾವಣೆ ಮಾಡಿ ನಾಣ್ಯಗಳ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ. "10 ರೂಪಾಯಿ ನಾಣ್ಯಗಳು ಬಳಕೆಯಲ್ಲಿ ಇದೆ. ಎಲ್ಲರೂ ಯಾವುದೇ ಆತಂಕವಿಲ್ಲದೆ ಈ ನಾಣ್ಯಗಳನ್ನು ಬಳಸಬಹುದಾಗಿದೆ." -ಮಧುಸೂದನ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಬೆಂ.ಗ್ರಾ. "10 ರೂಪಾಯಿ ನಾಣ್ಯಗಳನ್ನು ಯಾವ ಗ್ರಾಹಕರು ಪಡೆಯುತ್ತಿಲ್ಲ. ನಾವು ಅದನ್ನು ಪಡೆದು ಏನು ಮಾಡಬೇಕು ಎಂದು ನಾವು ಪಡೆಯೋದನ್ನು ನಿಲ್ಲಿಸಿದ್ದೇವೆ." - ಶಂಭು, ಹೋಟೆಲ್‌ ಮಾಲೀಕ "ಗ್ರಾಹಕರಿಂದ ಪಡೆದ 10 ರೂಪಾಯಿ ನಾಣ್ಯಗಳು ಮನೆಯಲ್ಲಿಯೆ ಉಳಿದುಕೊಂಡಿದೆ. ಮತ್ತೆ ಪಡೆದು ಬ್ಯಾಂಕಿಗೆ ಅಲೆಯುವುದು ಬೇಕಿಲ್ಲ." - ನರಸಮ್ಮ, ದಿನಸಿ ಅಂಗಡಿ ಮಾಲೀಕರು.