100ಕ್ಕೂ ಅಧಿಕ ಸಿನಿ ಕಾರ್ಮಿಕರಿಗೆ ತಲಾ 5000 ರೂ. ನೀಡಲು ನಿರ್ಧರಿಸಿದ 'ಕ್ರೇಜಿ ಸ್ಟಾರ್' ಪುತ್ರ

ನಟ ಉಪೇಂದ್ರ, ಹಿರಿಯ ನಟಿ ಲೀಲಾವತಿ ಸೇರಿದಂತೆ ಅನೇಕರು ಈಗಾಗಲೇ ಸಿನಿಮಾರಂಗದಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಕಷ್ಟಪಡುತ್ತಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ನಟ ಮನುರಂಜನ್ ರವಿಚಂದ್ರನ್ ಕೂಡ ಇದೇ ಹಾದಿಯಲ್ಲಿ ಸಾಗಿದ್ದಾರೆ. ತಮ್ಮ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಆರ್ಥಿಕವಾಗಿ ಸಹಾಯಕ್ಕೆ ನಿಂತಿದ್ದಾರೆ.

100ಕ್ಕೂ ಅಧಿಕ ಸಿನಿ ಕಾರ್ಮಿಕರಿಗೆ ತಲಾ 5000 ರೂ. ನೀಡಲು ನಿರ್ಧರಿಸಿದ 'ಕ್ರೇಜಿ ಸ್ಟಾರ್' ಪುತ್ರ
Linkup
ಕೊರೊನಾ ಮಹಾಮಾರಿ ಅಟ್ಟಹಾಸದಿಂದಾಗಿ ಲಾಕ್‌ಡೌನ್‌ ಜಾರಿಯಾಗಿದೆ. ಈಗಾಗಲೇ ಸಿನಿಮಾರಂಗ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಅದರಲ್ಲೂ ಮುಖ್ಯವಾಗಿ ಸಿನಿಮಾ ಯುನಿಟ್‌ಗಳಲ್ಲಿ ಕೆಲಸ ಮಾಡುವವರಿಗಂತೂ ಸಾಕಷ್ಟು ಸಮಸ್ಯೆ ಆಗಿದೆ. ದಿನಗೂಲಿ ಕಾರ್ಮಿಕರಿಗೆ ತೀವ್ರ ತೊಂದರೆ ಆಗಿದೆ. ಅಂಥ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಅನೇಕರು ಕೂಡ ಮುಂದೆಬಂದಿದ್ದಾರೆ. ಇದೀಗ 'ಕ್ರೇಜಿ ಸ್ಟಾರ್' ಅವರ ಪುತ್ರ ಮನುರಂಜನ್‌ ಅವರು ಕೂಡ ತಾವು ನಟಿಸುತ್ತಿರುವ 'ಮುಗಿಲ್‌ಪೇಟೆ' ಚಿತ್ರತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ! ಹೌದು, ಚಿತ್ರತಂಡದ ಸುಮಾರು 100ಕ್ಕೂ ಅಧಿಕ ಸದಸ್ಯರಿಗೆ ತಲಾ 5000 ರೂ. ನೀಡುವುದಕ್ಕೆ ಮುಂದಾಗಿದ್ದಾರೆ. ನನ್ನ ಸ್ನೇಹಿತರ ನೆರವಿಗೆ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ! 'ಕೊರೊನಾ ಸಾಂಕ್ರಾಮಿಕ ವೈರಸ್ ಜಗತ್ತನ್ನು ಆವರಿಸಿ ಒಂದು ವರ್ಷಕ್ಕೂ ಜಾಸ್ತಿಯಾಗಿದೆ. ಈ ವೈರಸ್‌ಗೆ ಅನೇಕ ಕುಟುಂಬಗಳು ನಲುಗಿ ಹೋಗಿವೆ. ಅವುಗಳಲ್ಲಿ ನನ್ನ ಕನ್ನಡ ಸಿನಿಮಾ ಕಲಾವಿದರ ಕುಟುಂಬವೂ ಹೊರತಲ್ಲ. ಮನೆಯಲ್ಲಿದ್ದರೆ ಸುರಕ್ಷಿತವಾಗಿರುತ್ತೇವೆಂದು ನಾವೆಲ್ಲ ಭಾವಿಸಿರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕೊರೊನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ ನಿಲ್ಲಬೇಕಾಗಿರವುದು ನನ್ನ ಕರ್ತವ್ಯ' ಎಂದು ಮನುರಂಜನ್ ಹೇಳಿದ್ದಾರೆ. ಸದ್ಯ 'ಮುಗಿಲ್‌ಪೇಟೆ' ಸಿನಿಮಾದಲ್ಲಿ ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ನನ್ನ ಈ ಒಂದು ವರ್ಷದ ಪ್ರಾಜೆಕ್ಟ್‌ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ನನ್ನ ಸಿನಿಮಾಕ್ಕಾಗಿ ತನುಮನವನ್ನು ಅರ್ಪಿಸಿದ್ದಾರೆ. ಈಗ ಅವರ ಸಂಕಷ್ಟ ಕಾಲದಲ್ಲಿ ಅವರ ಜೊತೆಗೆ ಅವರ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಜವಾಬ್ದಾರಿ. ಹೀಗಾಗಿ 'ಮುಗಿಲ್‌ಪೇಟೆ'ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡುವ ಸಣ್ಣ ಪ್ರಯತ್ನ. ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ. ನಿಮ್ಮ ಕೈಲಾದಷ್ಟು ಇತರರಿಗೂ ಸಹಾಯ ಮಾಡಿ' ಎಂದು ಮನುರಂಜನ್ ಹೇಳಿದ್ದಾರೆ. ಮನುರಂಜನ್ ಅವರ ಈ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ, ಮುಗಿಲ್‌ಪೇಟೆ ಸಿನಿಮಾಕ್ಕೆ ಭರತ್‌ ಎಸ್‌. ನಾವುಂದ ನಿರ್ದೇಶನ ಮಾಡುತ್ತಿದ್ದು, ರಕ್ಷಾ ವಿಜಯಕುಮಾರ್ ಇದರ ನಿರ್ಮಾಣ ಮಾಡುತ್ತಿದ್ದಾರೆ.