ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿನ ಆತಂಕಕಾರಿ ಸನ್ನಿವೇಶದ ನಡುವೆ ಅಲ್ಲಿರುವ ಭಾರತೀಯ ಪ್ರಜೆಗಳು, ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಸಂಪೂರ್ಣ ಹಿಡಿತದಲ್ಲಿರುವ ಅಫ್ಘನ್ ನೆಲದಿಂದ ಭಾರತೀಯರನ್ನು ಕರೆತರುವುದು ಅಷ್ಟು ಸುಲಭವೇ? ಇಲ್ಲಿ ಒಂದೊಂದು ಪ್ರಯತ್ನವೂ ಹಾಲಿವುಡ್ ಮಾದರಿ ಸಿನಿಮಾಗಳಂತೆ ರೋಚಕವಾಗಿರುತ್ತದೆ. ಅಲ್ಲಿರುವ ಭಾರತೀಯರನ್ನು ಕರೆತರಲು ತೆರಳುವ ವಾಯುಪಡೆ ಹಾಗೂ ಸೇನಾ ಸಿಬ್ಬಂದಿ ಜೀವವನ್ನು ಪಣಕ್ಕಿಟ್ಟಿರುತ್ತಾರೆ. ಅಂತಹದೇ ಸಿನಿಮೀಯ ಸನ್ನಿವೇಶಗಳನ್ನು ಭಾರತೀಯರು ಎದುರಿಸಿದ್ದಾರೆ.
ಕಾಬೂಲ್ನಲ್ಲಿನ ಭಾರತೀಯ ಸಿಬ್ಬಂದಿ ಹಾಗೂ ಅದಕ್ಕೆ ರಕ್ಷಣೆ ಒದಗಿಸಿರುವ ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ಕರೆತರಲು ಆಗಸ್ಟ್ 15ರಂದು ವಾಯುಪಡೆಯ ಎರಡು ಸಿ-17 ಸಾರಿಗೆ ವಿಮಾನಗಳು ಕಾಬೂಲ್ಗೆ ತೆರಳಿದ್ದವು. ಆದರೆ ಅಲ್ಲಿನ ಸಂಕೀರ್ಣ ಹಾಗೂ ಅಪಾಯಕಾರಿ ಸನ್ನಿವೇಶದ ನಡುವೆ ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸುವುದು ಸುಲಭದ ಸಂಗತಿಯಾಗಿರಲಿಲ್ಲ.
ಆಗಸ್ಟ್ 15 ಮತ್ತು 16ರ ರಾತ್ರೋರಾತ್ರಿ ಇಡೀ ಭದ್ರತಾ ಸನ್ನಿವೇಶವೇ ಬದಲಾಗಿತ್ತು. ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರಿಸುವುದು ದುಸ್ಸಾಹಸವೇ ಆಗಿತ್ತು. ಏಕೆಂದರೆ ಭಾರತದ ರಾಯಭಾರ ಕಚೇರಿಯ ಮೇಲೆ ತಾಲಿಬಾನ್ ಹದ್ದಿನ ಕಣ್ಣಿಟ್ಟಿತ್ತು. ಅಲ್ಲಿನ ಅತ್ಯುನ್ನತ ಭದ್ರತೆಯ 'ಹಸಿರು ವಲಯ'ವನ್ನು ಅವರು ಪ್ರವೇಶಿಸಿದ್ದರು. ಭಾರತಕ್ಕೆ ಪ್ರಯಾಣಿಸಲು ಬಯಸುವ ಅಫ್ಘನ್ನರಿಗೆ ವೀಸಾ ಪ್ರಕ್ರಿಯೆಗೊಳಿಸುವ ಶಾಹಿರ್ ವೀಸಾ ಸಂಸ್ಥೆಯ ಮೇಲೆ ತಾಲಿಬಾನ್ ದಾಳಿ ನಡೆಸಿದ್ದರು.
ಅಡ್ಡಗಟ್ಟಿದ ತಾಲಿಬಾನಿಗಳುಐಎಎಫ್ ಯುದ್ಧವಿಮಾನದಲ್ಲಿ 45 ಭಾರತೀಯ ಸಿಬ್ಬಂದಿಯ ಮೊದಲ ಬ್ಯಾಚ್ ಅನ್ನು ಕರೆತರುವ ಪ್ರಯತ್ನ ಆತಂಕಕ್ಕೆ ಕಾರಣವಾಗಿತ್ತು. ವಿಮಾನ ನಿಲ್ದಾಣದತ್ತ ಹೊರಟಿದ್ದ ಅವರನ್ನು ತಾಲಿಬಾನ್ ಪಡೆಗಳು ಅಡ್ಡಗಟ್ಟಿದ್ದವು. ಕೆಲವು ಭಾರತೀಯ ಸಿಬ್ಬಂದಿಯನ್ನು ತಾಲಿಬಾನ್ ಉಗ್ರರು ಕೆಲ ಸಮಯ ಬೇರೆಡೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಉಳಿದ ಸಿಬ್ಬಂದಿಯಲ್ಲಿ ನಡುಕ ಹುಟ್ಟಿತ್ತು. ಅವರಿಗೆ ವಿವರಣೆ ನೀಡಿ ಹೇಗೋ ಬಚಾವಾಗಿ ಬರುವಾಗ ಜೀವವೇ ಬಾಯಿಗೆ ಬಂದ ಹಾಗಿತ್ತು.
ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವೇ ಇಲ್ಲ!ಕಾಬೂಲ್ನಿಂದ ಮೊದಲ ಸಾರಿಗೆ ವಿಮಾನ ಹೊರಡುವಾಗ ಪರಿಸ್ಥಿತಿ ಬಹಳ ಸವಾಲಿನದ್ದಾಗಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರಿ ಗದ್ದಲ, ಸಂಘರ್ಷ ನಡೆಯುತ್ತಿತ್ತು. ಸಾವಿರಾರು ಅಫ್ಘನ್ನರು ದೇಶದಿಂದ ಹೊರ ಹೋಗಲು ಬರುವ ವಿಮಾನಗಳನ್ನೇರುವುದಕ್ಕಾಗಿ ಹತಾಶೆಯಿಂದ ಕಾದಿದ್ದರು.
ವಿಮಾನ ನಿಲ್ದಾಣದ ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದರಿಂದ ಮತ್ತು ವಿಮಾನ ನಿಲ್ದಾಣದಲ್ಲಿ ಜನರು ತುಂಬಿಕೊಂಡಿದ್ದರಿಂದ ಭಾರತೀಯ ರಾಜತಾಂತ್ರಿಕ ಕಚೇರಿಯ ಉಳಿದ ಸಿಬ್ಬಂದಿಯನ್ನು ಸ್ಥಳಾಂತರಿಸುವುದು ಸಾಧ್ಯವಾಗಲಿಲ್ಲ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವೆ ಸೋಮವಾರ ರಾತ್ರಿ ನಡೆದ ಮಾತುಕತೆಯು, ಉಳಿದ ಭಾರತೀಯ ಸಿಬ್ಬಂದಿಯನ್ನು ಮಂಗಳವಾರ ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸಲು ನೆರವಾಗಿದೆ ಎನ್ನಲಾಗಿದೆ.
ಭಾರತಕ್ಕೆ ಬಂದಿಳಿದ ಸಿಬ್ಬಂದಿಅಫ್ಘಾನಿಸ್ತಾನದಲ್ಲಿ ಎದುರಾಗಿರುವ ಭೀಕರ ಸನ್ನಿವೇಶದ ನಡುವೆ, ಕಾಬೂಲ್ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿನ ಸಿಬ್ಬಂದಿಯನ್ನು ಭಾರತ ವಿಶೇಷ ವಾಯುಪಡೆ ವಿಮಾನದ ಮೂಲಕ ಸ್ಥಳಾಂತರ ಮಾಡಿದೆ. ರಾಯಭಾರಿ ರುದ್ರೇಂದ್ರ ಟಂಡನ್ ಒಳಗೊಂಡಂತೆ 120ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.
'ಪ್ರಸ್ತುತದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕಾಬೂಲ್ನಲ್ಲಿರುವ ನಮ್ಮ ರಾಯಭಾರಿ ಮತ್ತು ಅವರ ಭಾರತೀಯ ಸಿಬ್ಬಂದಿಯನ್ನು ತಕ್ಷಣವೇ ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದರು.
ಅಫ್ಘಾನಿಸ್ತಾನದಲ್ಲಿನ ಭಾರತದ ರಾಯಭಾರಿ ಹಾಗೂ ಅವರ ಸಿಬ್ಬಂದಿ ಮತ್ತು ಐಟಿಬಿಪಿ ಪಡೆಗಳನ್ನು ವಿಶೇಷ ವಾಯುಪಡೆ ವಿಮಾನ ಮರಳಿ ಕರೆತರುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು +919717785379 ಮತ್ತು MEAHelpdeskIndia@gmail.com ಇ-ಮೇಲ್ ವಿಳಾಸವನ್ನು ನೀಡಿದ್ದಾರೆ.
ಅಫ್ಘಾನಿಸ್ತಾನದ ವಿಭಿನ್ನ ಭಾಗಗಳಲ್ಲಿ ಸಿಲುಕಿರುವ ಸುಮಾರು 120 ಮಂದಿ ಭಾರತೀಯರನ್ನು ಒಂದೆರಡು ದಿನಗಳಲ್ಲಿಯೇ ರಕ್ಷಿಸಿ ತಾಯ್ನಾಡಿಗೆ ಮರಳಿ ಕರೆತರಲಾಗುವುದು ಎಂದು ಭಾರತ ಸರ್ಕಾರ ಸೋಮವಾರ ತಿಳಿಸಿದೆ.