ರಾಕೇಶ್‌ ಆಸ್ಥಾನಾ ನೇಮಕ ಹಿಂಡೆಯಲು ಆಗ್ರಹ, ನಿರ್ಣಯ ತೆಗೆದುಕೊಂಡ ದಿಲ್ಲಿ ಸರಕಾರ

ನಿವೃತ್ತಿಗೆ ಮೂರು ದಿನಗಳು ಬಾಕಿ ಇರುವಾಗ ಸಿಬಿಐ ಮಾಜಿ ಅಧಿಕಾರಿ ರಾಕೇಶ್‌ ಆಸ್ತಾನಾ ಅವರನ್ನು ಮಂಗಳವಾರ ದಿಲ್ಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದಕ್ಕೀಗ ಎಎಪಿ ಹಾಗೂ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಕೇಶ್‌ ಆಸ್ಥಾನಾ ನೇಮಕ ಹಿಂಡೆಯಲು ಆಗ್ರಹ, ನಿರ್ಣಯ ತೆಗೆದುಕೊಂಡ ದಿಲ್ಲಿ ಸರಕಾರ
Linkup
ಹೊಸದಿಲ್ಲಿ: ಮಾಜಿ ಸಿಬಿಐ ಅಧಿಕಾರಿ ಅವರನ್ನು ದಿಲ್ಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಿರುವುದರ ವಿರುದ್ಧ ದಿಲ್ಲಿಯ ಆಮ್‌ ಆದ್ಮಿ ಪಕ್ಷದ ಸರಕಾರ ನಿರ್ಣಯ ತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವಾಲಯ ನೇಮಕವನ್ನು ಹಿಂಪಡೆಯಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ. ಆಸ್ತಾನಾ ಅವರನ್ನು ಮಂಗಳವಾರ ದಿಲ್ಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಅವರ ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗ ಈ ನೇಮಕ ನಡೆದಿತ್ತು. ಆಸ್ತಾನಾ ಅವರನ್ನು ಗುಜರಾತ್‌ ಕೇಡರ್‌ನಿಂದ ಎಜಿಎಂಯುಟಿ ಕೇಡರ್‌ಗೆ ವರ್ಗಾವಣೆ ಮಾಡಲಾಗಿತ್ತು. ಈ ಕೇಡರ್‌ನಿಂದ ದಿಲ್ಲಿ ಪೊಲೀಸ್‌ ಆಯುಕ್ತರನ್ನು ನೇಮಕ ಮಾಡಿಕೊಳ್ಳುವುದು ರೂಢಿ. ಅಷ್ಟೇ ಅಲ್ಲ ಅವರ ಸೇವಾ ಅವಧಿಯನ್ನು 1 ವರ್ಷ ವಿಸ್ತರಣೆ ಮಾಡಲಾಗಿತ್ತು. "ಡಿಜಿಪಿ ಮಟ್ಟದ ಅಧಿಕಾರಿಗಳ ನೇಮಕ ಮಾಡುವಾಗ ನಿವೃತ್ತಿಗೆ ಕನಿಷ್ಠ 6 ತಿಂಗಳು ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ರಾಕೇಶ್‌ ಆಸ್ತಾನಾ ನೇಮಕದ ವೇಳೆ ಕೇವಲ 4 ದಿನ ಬಾಕಿ ಉಳಿದಿತ್ತು," ಎಂದು ಎಎಪಿ ನಾಯಕ ಸತ್ಯೇಂದರ್‌ ಜೈನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕೂಡ ನೇಮಕವನ್ನು ವಿರೋಧಿಸಿದ್ದು, ಇದು ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ. ಎರಡು ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ ಈ ಮಹತ್ವದ ಆದೇಶ ನೀಡಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕ ಹುದ್ದೆಗೆ ಆಸ್ತಾನಾ ಅವರನ್ನು ಪರಿಗಣಿಸಿರಲಿಲ್ಲ. ಆದರೆ ಇದೀಗ ಅವರನ್ನು ದಿಲ್ಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.