ಮಲಯಾಳಿ ತಾಲಿಬಾನಿಗಳು ಇರುವಂತಿದೆ: ಚರ್ಚೆ ಹುಟ್ಟುಹಾಕಿದ ಶಶಿ ತರೂರ್ ಟ್ವೀಟ್

ಅಫ್ಘಾನಿಸ್ತಾನವನ್ನು ಅತಿಕ್ರಮಿಸಿಕೊಂಡಿರುವ ಉಗ್ರ ಸಂಘಟನೆಯಲ್ಲಿ ಕೇರಳದವರು ಇದ್ದಾರೆಯೇ? ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದರಲ್ಲಿ ಕನಿಷ್ಠ ಇಬ್ಬರು ಮಲಯಾಳಿಗಳು ಇರುವಂತಿದೆ ಎಂದಿದ್ದಾರೆ.

ಮಲಯಾಳಿ ತಾಲಿಬಾನಿಗಳು ಇರುವಂತಿದೆ: ಚರ್ಚೆ ಹುಟ್ಟುಹಾಕಿದ ಶಶಿ ತರೂರ್ ಟ್ವೀಟ್
Linkup
ತಿರುವನಂತಪುರಂ: ಅಫ್ಘಾನಿಸ್ತಾನವನ್ನು ಕೈವಶಪಡಿಸಿಕೊಂಡ ತಾಲಿಬಾನಿಗಳ ಸಂಭ್ರಮಾಚರಣೆಯ ವಿಡಿಯೋವನ್ನು ಕಾಂಗ್ರೆಸ್ ಸಂಸದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಬಂದೂಕು ಹಿಡಿದ ಕೆಲವು ಉಗ್ರರು ಮಲಯಾಳಂನಲ್ಲಿ ಮಾತನಾಡುವುದು ಕೇಳಿಸಿದೆ. ''ಇಲ್ಲಿ ಕನಿಷ್ಠ ಇಬ್ಬರು ತಾಲಿಬಾನಿಗಳು ಇರುವಂತೆ ಇದೆ. ಒಬ್ಬ 'ಸಂಸಾರಿಕೆತ್ತೆ' ಎಂದು ಎಂಟನೇ ಸೆಕೆಂಡಿನ ವೇಳೆ ಹೇಳುತ್ತಾನೆ ಮತ್ತು ಇನ್ನೊಬ್ಬ ಆತನ ಮಾತನ್ನು ಅರ್ಥಮಾಡಿಕೊಳ್ಳುತ್ತಾನೆ'' ಎಂದು ತರೂರ್ ಹೇಳಿದ್ದಾರೆ. ಪತ್ರಕರ್ತ ರಮೀಜ್ ಪೋಸ್ಟ್ ಮಾಡಿದ್ದ ವಿಡಿಯೋವನ್ನು ತರೂರ್ ಹಂಚಿಕೊಂಡಿದ್ದರು. ' ಹೋರಾಟಗಾರ ಕಾಬೂಲ್ ಹೊರಭಾಗ ತಲುಪಿದಾಗ ಆನಂದ ಭಾಷ್ಪ ಹರಿಸುತ್ತಿರುವುದು. ತಮ್ಮ ಗೆಲುವು ಬಹಳ ದೊಡ್ಡದು ಎನ್ನುವುದು ಅವರಿಗೆ ಅರಿವಾಗಿದೆ' ಎಂದು ರಮೀಜ್ ಹೇಳಿಕೊಂಡಿದ್ದರು. ಅಲ್ಲದೆ, ತರೂರ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ರಮೀಜ್, 'ತಾಲಿಬಾನ್‌ನಲ್ಲಿ ಕೇರಳ ಮೂಲದ ಹೋರಾಟಗಾರರಿಲ್ಲ. ಅವರು ಜಬೂಲ್ ಪ್ರಾಂತ್ಯದ ಬಲೂಚ್‌ಗಳಾಗಿದ್ದಾರೆ. ಬ್ರಹ್ವಿ ಮತ್ತು ಬ್ರವ್ಹಿ ಭಾಷೆಗಳನ್ನು ಇಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ. ಇದು ತೆಲುಗು, ತಮಿಳು, ಮಲಯಾಳಂ ಅಥವಾ ಇತರೆ ಭಾಷೆಗೆ ಹೊಂದುವ ದ್ರಾವಿಡ ಭಾಷೆಯಾಗಿದೆ' ಎಂದಿದ್ದಾರೆ. 'ಇದು ಆಸಕ್ತಿಕರ ವಿವರಣೆ. ಇದರ ವಾಸ್ತವವನ್ನು ಕಂಡುಹಿಡಿಯಲು ನಾವು ಭಾಷಾ ತಜ್ಞರಿಗೆ ಬಿಡಬೇಕು. ಆದರೆ ತಪ್ಪು ದಾರಿಗೆ ಎಳೆಯಲ್ಪಟ್ಟು ತಾಲಿಬಾನ್ ಸೇರಿಕೊಂಡ ಮಲಯಾಳಿಗಳಿದ್ದಾರೆ. ಹೀಗಾಗಿ ಈ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ' ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.