ಅಬ್ಬರ, ಗದ್ದಲವಿಲ್ಲದೆ ಸತತ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅವರು ರಾಜ್ಯದ ಕೋವಿಡ್ ಪರಿಸ್ಥಿತಿಯ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಕ್ರಮದ ಬಗ್ಗೆ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಬ್ಬರ, ಗದ್ದಲವಿಲ್ಲದೆ ಸತತ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ
Linkup
ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಕೋಲ್ಕತಾದ ರಾಜಭವನದ 'ಥ್ರೋನ್ ರೂಮ್'ನಲ್ಲಿ ತೀರಾ ಸರಳ ಸಮಾರಂಭದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವುದು ಮತ್ತು ಒಟ್ಟಾರೆ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿಯನ್ನು ತಹಬದಿಗೆ ತರುವುದು ತಮ್ಮ ಆದ್ಯತೆಯಾಗಿರಲಿದೆ ಎಂದು ಅವರು ತಿಳಿಸಿದರು. ಕಳೆದ ಎರಡೂ ಬಾರಿ ಮಮತಾ ಅವರ ಪದಗ್ರಹಣ ಸಮಾರಂಭ ಭಾರಿ ವಿಜೃಂಭಣೆಯಿಂದ ಜರುಗಿತ್ತು. ಆದರೆ ಈ ಬಾರಿ ಯಾವುದೇ ಸಂಭ್ರಮಾಚರಣೆ, ಹರ್ಷೋದ್ಗಾರ, ಪಟಾಕಿ, ಕುಣಿತಗಳಿಲ್ಲದೆ ನಡೆಯಿತು. ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಿಂದ ರಾಜಭವನಕ್ಕೆ ಅವರು ತೆರಳಿದ ಹತ್ತು ನಿಮಿಷದ ಮಾರ್ಗದಲ್ಲಿ ಜನರಿಲ್ಲದೆ ಭಣಗುಡುತ್ತಿತ್ತು. ಆದರೆ ಇಡೀ ರಸ್ತೆಯನ್ನು ನೀಲಿ-ಬಿಳಿ ಬಣ್ಣದೊಂದಿಗೆ ಅಲಂಕರಿಸಲಾಗಿತ್ತು. ರಸ್ತೆಗಳಲ್ಲಿ ಬೃಹತ್ ಗಾತ್ರದ ಫುಟ್ಬಾಲ್ ಚಿತ್ರ ಹಾಗೂ 'ಖೇಲಾ ಹೊಬೆ' (ನಾವು ಆಡುತ್ತೇವೆ) ಎಂಬ ಥೀಮ್ ಬರೆಯಲಾಗಿತ್ತು. ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ಗೆಲುವಿಗೆ ತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರೊಂದಿಗೆ ಮಮತಾ ರಾಜಭವನಕ್ಕೆ ತೆರಳಿದರು. ಟಿಎಂಸಿ ಮುಖಂಡರಾದ ಅರೂಪ್ ಬಿಸ್ವಾಸ್, ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಸುಬ್ರತಾ ಬಕ್ಷಿ ಮತ್ತು ಫಿರ್ಹಾದ್ ಹಕೀಂ ಹಾಜರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ, ಹಿರಿಯ ನಾಯಕ ಅಬ್ದುಲ್ ಮನ್ನನ್, ಎಡಪಕ್ಷದ ಅಧ್ಯಕ್ಷ ಬಿಮನ್ ಬಸು, ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಹಾಜರಿರಲಿಲ್ಲ. 'ನಾನು ಇಂದಿನಿಂದಲೇ ನನ್ನ ಕೆಲಸ ಪ್ರಾರಂಭಿಸುತ್ತೇನೆ. ನಂಬನ್ನಾಕ್ಕೆ ತೆರಳಿ ರಾಜ್ಯದಲ್ಲಿನ ಕೋವಿಡ್ ಸನ್ನಿವೇಶದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದೇನೆ. ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ ಮತ್ತು ಸಂಜೆ ವೇಳೆಗೆ ಕೆಲವು ಕ್ರಮಗಳನ್ನು ಪ್ರಕಟಿಸಲಾಗುವುದು. ಈ ಹಿಂದೆ ಮಾಡಿದಂತೆಯೇ ಈಗಿನ ಸನ್ನಿವೇಶವನ್ನು ನಾವು ನಿಯಂತ್ರಿಸುವ ವಿಶ್ವಾಸವಿದೆ' ಎಂದು ಮಮತಾ ತಿಳಿಸಿರು. ಮಮತಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ , ಬಂಗಾಳದಲ್ಲಿ ಚುನಾವಣೆ ಬಳಿಕ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾಗೆ ಕಠಿಣ ಸಂದೇಶ ರವಾನಿಸಿದರು. 'ಚುನಾವಣೋತ್ತರ ಅರ್ಥರಹಿತ ಮತ್ತು ಭಯಾನಕ ಹಿಂಸಾಚಾರಗಳಿಗೆ ಅಂತ್ಯ ಹಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಮಮತಾ ಬ್ಯಾನರ್ಜಿ ಅವರು ಕಾನೂನಿನ ನಿಯಮಗಳನ್ನು ಮರಳಿ ಸ್ಥಾಪಿಸಲು ತುರ್ತು ಆಧಾರದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಎಲ್ಲ ಭರವಸೆ ಇದೆ. ಮುಖ್ಯಮಂತ್ರಿ, ನನ್ನ ಕಿರಿಯ ಸಹೋದರಿ ಈ ಸಂದರ್ಭದಲ್ಲಿ ಸೂಕ್ತ ಹೆಜ್ಜೆ ಇರಿಸುತ್ತಾರೆ ಎಂಬ ಎಲ್ಲ ವಿಶ್ವಾಸವಿದೆ' ಎಂದು ಧಂಕರ್ ತಿಳಿಸಿದರು. 'ನೀವು ಪಕ್ಷಪಾತಿ ಹಿತಾಸಕ್ತಿಗಳಾಚೆ ಸಾಗಬೇಕಿದೆ. ನೀವು ಹೊಸ ಆಡಳಿತ ಸ್ವರೂಪವನ್ನು ಸೃಷ್ಟಿಸುತ್ತೀರಿ ಎಂಬ ಖಾತರಿಯಿದೆ' ಎಂದು ಅವರು ಹೇಳಿದರು.