ಮುತ್ತು ತಂದ ಕುತ್ತು: ಗಂಡನಿಗೆ ಕಿಸ್ ಮಾಡಲು ಮಾಸ್ಕ್ ಹಾಕಿಲ್ಲ ಎಂದಾಕೆ ಕಂಬಿ ಹಿಂದೆ ಅಳೋದ್ಯಾಕೆ?

ಕಾರಿನಲ್ಲಿ ಮಾಸ್ಕ್‌ ಧರಿಸದೇ ಬಂದ ಜೋಡಿಯೊಂದನ್ನು ದೆಹಲಿ ಪೊಲೀಸರು ತಡೆದಾಗ, ಗಂಡನಿಗೆ ಮುತ್ತು ಕೊಡಲು ಮಾಸ್ಕ್ ಹಾಕಿಲ್ಲ ಏನು ಮಾಡುತ್ತೀರಿ ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ.

ಮುತ್ತು ತಂದ ಕುತ್ತು: ಗಂಡನಿಗೆ ಕಿಸ್ ಮಾಡಲು ಮಾಸ್ಕ್ ಹಾಕಿಲ್ಲ ಎಂದಾಕೆ ಕಂಬಿ ಹಿಂದೆ ಅಳೋದ್ಯಾಕೆ?
Linkup
ಹೊಸದಿಲ್ಲಿ: ಕಾರಿನಲ್ಲಿ ಮಾಸ್ಕ್‌ ಧರಿಸದೇ ಬಂದ ಜೋಡಿಯೊಂದನ್ನು ದೆಹಲಿ ಪೊಲೀಸರು ತಡೆದಾಗ, ಗಂಡನಿಗೆ ಮುತ್ತು ಕೊಡಲು ಮಾಸ್ಕ್ ಹಾಕಿಲ್ಲ ಏನು ಮಾಡುತ್ತೀರಿ ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಇಲ್ಲಿನ ದರಿಯಾಗಂಜ್ ಪ್ರದೇಶದಲ್ಲಿ ಪೊಲೀಸರು ಕೊರೊನಾ ಮಾರ್ಗಸೂಚಿ ಪಾಲನೆಯ ಕರ್ತವ್ಯದಲ್ಲಿ ನಿರತರಾಗಿದ್ದಾಗ, ಮಾಸ್ಕ್ ಧರಿಸದೇ ಕಾರಿನಲ್ಲಿ ಹೋಗುತ್ತಿದ್ದ ಜೋಡಿಯೊಂದನ್ನು ತಡೆದಿದ್ದರು. ಈ ವೇಳೆ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ ಮಹಿಳೆ, ನನ್ನ ಗಂಡನಿಗೆ ಮುತ್ತು ಕೊಡಲು ನಾನು ಮಾಸ್ಕ್ ಹಾಕಿಲ್ಲ. ನೀವೆನು ಮಾಡಿಕೊಳ್ಳುತ್ತೀರಿ ನಾನೂ ನೋಡ್ತಿನಿ ಎಂದೆಲ್ಲಾ ಅಬ್ಬರಿಸಿದ್ದಳು. ಅಷ್ಟೇ ಅಲ್ಲದೇ ನಾನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಮೇನ್ಸ್ ಪರೀಕ್ಷೆ ಬರೆದಿದ್ದು, ನೀವೆಲ್ಲಾ ನನ್ನ ಮುಂದೆ ಭಿಕ್ಷುಕರಿದ್ದಂತೇ ಎಂದೂ ಈ ಮಹಿಳೆ ಪೊಲೀಸರ ಮೇಲೆ ಕೂಗಾಡಿದ್ದಳು. ದಂಪತಿಯ ಅಸಭ್ಯ ವರ್ತನೆಗೆ ಕೆಂಡವಾದ ಖಾಕಿ ಪಡೆ ಸೂಕ್ತ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನಿನ್ನೆ(ಏ.18-ಭಾನುವಾರ) ಗಂಡನನ್ನು ಜೈಲಿಗೆ ತಳ್ಳಿತ್ತು. ಇಂದು(ಏ.19-ಸೋಮವಾರ) ಪತ್ನಿಯನ್ನೂ ಬಂಧಿಸಿರುವ ದೆಹಲಿ ಪೊಲೀಸರು, ಜೈಲಿನಲ್ಲಿ ಮಾಸ್ಕ್ ಹಾಕಿಕೊಂಡೇ ಮುದ್ದೆ ಮುರಿಯುವಂತೆ ಹೇಳಿದ್ದಾರೆ. ಇನ್ನು ಪೊಲೀಸರೊಂದಿಗೆ ದಂಪತಿ ಅಸಭ್ಯವಾಗಿ ವರ್ತಿಸಿರುವುದನ್ನು ಖಂಡಿಸಿರುವ ಸಾರ್ವಜನಿಕರು, ದಂಪತಿಗೆ ಜೈಲುಶಿಕ್ಷೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಾರ್ವಜನಿಕರು, ದಂಪತಿಗೆ ಜಾಮೀನು ನೀಡದೇ ನೇರವಾಆಗಿ ಕಠಿಣ ಜೈಲು ಶಿಕ್ಷೆ ವಿಧಿಸುವಂತೆ ಕೋರಿದ್ದಾರೆ. ಅಸಭ್ಯ ವರ್ತನೆ ತೋರಿದ ದಂಪತಿ ದೆಹಲಿಯ 10,000 ಜನರಿಗೆ ಉಚಿತವಾಗಿ ಮಾಸ್ಕ್ ನೀಡುವಂತೆ ಶಿಕ್ಷೆ ವಿಧಿಸಿ ಎಂದು ಮತ್ತೋರ್ವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ಕರ್ಫ್ಯೂ ಜಾರಿಯ ವೇಳೆ ಖಾಕಿ ಪಡೆಯನ್ನು ಎದುರು ಹಾಕಿಕೊಂಡರೇ ಏನಾದೀತು ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ ಎಂದು ಹೇಳಬಹುದು.