ಮೆಗಾಫೋನ್ ಬಳಕೆಯಿಂದ ಆನ್‌ಲೈನ್ ಕ್ಲಾಸ್‌ಗೆ ಕಿರಿಕಿರಿ; ಬೀದಿ ವ್ಯಾಪಾರಿಗಳ ವಿರುದ್ಧ ದೂರುಗಳ ಸುರಿಮಳೆ

ಬಿಬಿಎಂಪಿ ಕಸ ಸಂಗ್ರಹಿಸುವ ವಾಹನಗಳು ಸಹ ಅನುಮತಿ ಪಡೆದು ಧ್ವನಿವರ್ಧಕಗಳನ್ನು ಬಳಸಬೇಕು. ವಿಪರೀತಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿವೆ. ಗುತ್ತಿಗೆದಾರರು ಅನುಮತಿ ಪಡೆದು ಕಸ ಸಂಗ್ರಹಿಸುವ ವಾಹನಗಳಲ್ಲಿ ಹಿತಕರ ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮೆಗಾಫೋನ್ ಬಳಕೆಯಿಂದ ಆನ್‌ಲೈನ್ ಕ್ಲಾಸ್‌ಗೆ ಕಿರಿಕಿರಿ; ಬೀದಿ ವ್ಯಾಪಾರಿಗಳ ವಿರುದ್ಧ ದೂರುಗಳ ಸುರಿಮಳೆ
Linkup
ಬೆಂಗಳೂರು: ನಗರದ ಬೀದಿಗಳಲ್ಲಿ ಧ್ವನಿವರ್ಧಕ ಅಥವಾ ಮೆಗಾಫೋನ್‌ಗಳನ್ನು ಬಳಸಿ ತರಕಾರಿ ಸೇರಿದಂತೆ ಇನ್ನಿತರೆ ಸಾಮಾಗ್ರಿಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಗಳ ವಿರುದ್ಧ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬರುವ ದೂರುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೀದಿ ವ್ಯಾಪಾರಿಗಳು ಬಡಾವಣೆಯ ಒಂದು ಬದಿಯಲ್ಲಿ ನಿಂತುಕೊಂಡು ಮೊದಲೇ ರೆಕಾರ್ಡ್‌ ಮಾಡಿದ ಧ್ವನಿಯನ್ನು ತಮ್ಮ ಮೆಗಾಪೋನ್‌ಗಳಲ್ಲಿ ಜೋರು ಧ್ವನಿಯಲ್ಲಿ ಹಾಕುತ್ತಾರೆ. ಇದರಿಂದ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ವರ್ಕ್ ಫ್ರಮ್‌ ಹೋಮ್‌ ಮಾಡುತ್ತಿರುವ ಉದ್ಯೋಗಿಗಳಿಗೆ ಸೇರಿದಂತೆ ಅನಾರೋಗ್ಯ ಪೀಡಿತ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಹೆಚ್ಚಿನ ದೂರುಗಳು ಬರುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರತ್ಯೇಕವಾಗಿ ದೂರು ದಾಖಲಿಸದಿದ್ದರೂ, ಇದನ್ನು 'ಸಾರ್ವಜನಿಕರಿಗೆ ತೊಂದರೆ' ಎಂದು ಪರಿಗಣಿಸಲಾಗುತ್ತದೆ. ಬೆಂಗಳೂರು ನಗರ ಪೊಲೀಸರ ದಾಖಲೆ ಪ್ರಕಾರ, ಕೋವಿಡ್‌ ಪ್ರಕರಣಗಳು ಅಧಿಕವಿದ್ದ ಸಮಯದಲ್ಲಿ ಈ ಬಗ್ಗೆ ದೂರುಗಳು ಕಡಿಮೆಯಾಗಿತ್ತು. ಕೋವಿಡ್‌ ಪ್ರಕರಣಗಳು ತಗ್ಗಿದ ನಂತರ ಪುನಃ ಇದೀಗ ದೂರುಗಳ ಸಂಖ್ಯೆ ಹೆಚ್ಚಿದೆ. ಪೊಲೀಸರ ದಾಖಲೆಗಳ ಪ್ರಕಾರ, 'ಸಾರ್ವಜನಿಕರಿಗೆ ತೊಂದರೆ'ಗೆ ಸಂಬಂಧಪಟ್ಟಂತೆ ಈ ವರ್ಷ ಜನವರಿಯಲ್ಲಿ 711 ದೂರುಗಳು ದಾಖಲಾಗಿವೆ. ಅದೇ ರೀತಿ ಫೆಬ್ರವರಿಯಲ್ಲಿ 650 ದೂರುಗಳು, ಮಾರ್ಚ್‌ನಲ್ಲಿ 621, ಏಪ್ರಿಲ್‌ನಲ್ಲಿ 275, ಮೇನಲ್ಲಿ 136, ಜೂನ್‌ನಲ್ಲಿ 186, ಜುಲೈನಲ್ಲಿ 250 ಮತ್ತು ಆಗಸ್ಟ್‌ನಲ್ಲಿ 484 ದೂರುಗಳು ದಾಖಲಾಗಿವೆ. ಇದನ್ನು ಗಮನಿಸಿದರೆ ಕೊರೊನಾ ಪ್ರಕರಣಗಳು ತಗ್ಗುತ್ತಿದ್ದಂತೆ ದೂರುಗಳ ಸಂಖ್ಯೆ ಅಧಿಕವಾಗಿರುವುದು ಕಂಡುಬರುತ್ತದೆ. ಬೀದಿ ವ್ಯಾಪಾರಿಗಳು ಜೋರು ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಹಾಕುವ ಬಗ್ಗೆ ನಾವು ಅನೇಕ ಬಾರಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದೇವೆ. ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ಆರಂಭವಾಗುವ ವೇಳೆಗೆ ಅವರು ಬರುತ್ತಾರೆ. ಧ್ವನಿಯನ್ನು ತಗ್ಗಿಸುವಂತೆ ಅಥವಾ ಮೆಗಾಫೋನ್‌ಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಅವರು ಕ್ಯಾರೆ ಎನ್ನುವುದಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ನಾವು 1,000-1,500 ರೂ. ಕೊಟ್ಟು ಮೆಗಾಫೋನ್‌ ಖರೀದಿಸಿದ್ದೇವೆ. ತರಕಾರಿ ಸೇರಿದಂತೆ ವಿವಿಧ ಸಾಮಾಗ್ರಿಗಳು ಮತ್ತು ಅದರ ಬೆಲೆ ಬಗ್ಗೆ ಮೊದಲೇ ನಮ್ಮ ಧ್ವನಿಯಲ್ಲಿ ರೆಕಾರ್ಡ್‌ ಮಾಡುತ್ತೇವೆ. ನಂತರ ವ್ಯಾಪಾರದ ಸಮಯದಲ್ಲಿ ಇದನ್ನು ಹಾಕುತ್ತೇವೆ. ಈ ಹಿಂದೆ ಅವಶ್ಯಕತೆ ಇಲ್ಲದೇ ಇದ್ದರಿಂದ ಮೆಗಾಫೋನ್‌ಗಳನ್ನು ಬಳಸುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ. ಅಲ್ಲದೇ ಅಪಾರ್ಟ್‌ಮೆಂಟ್‌ನ ಆವರಣದ ಒಳಗೆ ನಮ್ಮನ್ನು ಬಿಡುವುದಿಲ್ಲ. ಎಲ್ಲ ಮನೆಗಳಿಗೂ ನಮ್ಮ ಧ್ವನಿ ಕೇಳಲೆಂದು ನಾವು ಮೆಗಾಫೋನ್‌ಗಳನ್ನು ಬಳಸುತ್ತಿದ್ದೇವೆ ಎಂದು ತರಕಾರಿ ವ್ಯಾಪಾರಿ ಮಣಿಕಂಠ ಹೇಳಿದರು. ಬಿಬಿಎಂಪಿ ಕಸ ಸಂಗ್ರಹಿಸುವ ವಾಹನಗಳು ಸಹ ಅನುಮತಿ ಪಡೆದು ಧ್ವನಿವರ್ಧಕಗಳನ್ನು ಬಳಸಬೇಕು. ವಿಪರೀತಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿವೆ. ಗುತ್ತಿಗೆದಾರರು ಅನುಮತಿ ಪಡೆದು ಕಸ ಸಂಗ್ರಹಿಸುವ ವಾಹನಗಳಲ್ಲಿ ಹಿತಕರ ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಕೇಳುವಂತೆ ಒಬ್ಬ ಬೀದಿ ವ್ಯಾಪಾರಿ ಹೇಗೆ ತಾನೆ ಕೂಗಬಲ್ಲ? ಹೀಗಾಗಿ ಮೆಗಾಫೋನ್‌ಗಳ ಬಳಕೆ ಅನಿವಾರ್ಯವಾಗಿವೆ. ಬೀದಿ ವ್ಯಾಪಾರಿ ಬೆಳಗಿನ ಜಾವ ಎದ್ದು ತರಕಾರಿ, ಹಣ್ಣುಗಳನ್ನು ಖರೀದಿಸಿ, ಚಳಿ-ಬಿಸಿಲು ಎನ್ನದೇ ಬೀದಿ ಬೀದಿ ಅಲೆದು ನಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತಾನೆ. ಇದನ್ನು ನಾವು ಮರೆಯಬಾರದು ಎಂದು ಬೆಂಗಳೂರು ಬೀದಿ ವ್ಯಾಪಾರಿಗಳ ಒಕ್ಕೂಟದ ಸದಸ್ಯ, ವಕೀಲ ವಿನಯ್‌ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.