ಬೆಂಗಳೂರು: ಬಿಡಿಎನಲ್ಲಿ ನಡೆಯುತ್ತಿರುವುದು ನಿಜ. ನಾನು ಇದಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದ್ದೇನೆ. ಎಸಿಬಿ ದಾಳಿ ನಡೆಸಿರುವುದನ್ನು ಸ್ವಾಗತಿಸುತ್ತೇನೆ. ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಗುಳುಂ ಮಾಡಲಾಗಿದೆ. ಇಂಥ ಭಾರೀ ಅಕ್ರಮ ಪತ್ತೆ ಮಾಡಲು ಪ್ರತ್ಯೇಕ ಎಸ್‌ಐಟಿ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೋರಲು ನಿರ್ಧರಿಸಿದ್ದೇನೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಶುಕ್ರವಾರ ಬಿಡಿಎ ಅಧಿಕಾರಿಗಳ ವಿರುದ್ಧ ಎಸಿಬಿ ನಡೆಸಿದ ದಾಳಿಯ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಭ್ರಷ್ಟಾಚಾರ ನಡೆಸುವವರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಭ್ರಷ್ಟರ ವಿರುದ್ಧ ತನಿಖೆ ನಡೆಸುವ ಎಸಿಬಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಶನಿವಾರ ತಿಳಿಸಿದರು. ‘ನನ್ನ ಅವಧಿಯಲ್ಲಿ ಭ್ರಷ್ಟಾಚಾರ, ಅವ್ಯವವಹಾರ ನಡೆಯಲು ಬಿಟ್ಟಿಲ್ಲ. ಹಿಂದೆ ದೊಡ್ಡ ಅವ್ಯವಹಾರಗಳು ಆಗಿವೆ. ಹಿಂದಿನ ಆಯುಕ್ತರ ಅವಧಿಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿರುವುದು ಈಗಿನ ಪರಿಸ್ಥಿತಿಗೆ ಕಾರಣವಾಗಿದೆ. ಇದಕ್ಕಾಗಿ ಒಂದು ಪ್ರತ್ಯೇಕ ತನಿಖಾ ಸಂಸ್ಥೆಯನ್ನು ರಚನೆ ಮಾಡಿದರೆ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ಆಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಗಳಿಗೆ ವಿವರಣೆ ನೀಡುವೆಈ ದಾಳಿಯ ಸಂಬಂಧ ಸಂಪೂರ್ಣ ಮಾಹಿತಿ ಪಡೆದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ವಿವರಣೆ ನೀಡಲಿದ್ದೇನೆ ಎಂದು ತಿಳಿಸಿದರು. ನಾನು ಬಿಡಿಎ ಅಧ್ಯಕ್ಷನಾಗಿ ಕಳೆದ ವರ್ಷದ ನವೆಂಬರ್ 26 ರಂದು ಅಧಿಕಾರ ವಹಿಸಿಕೊಂಡು ಸಂಸ್ಥೆಯನ್ನು ಭ್ರಷ್ಟಮುಕ್ತವನ್ನಾಗಿ ಮಾಡುವ ಗುರಿಯನ್ನು ಹಾಕಿಕೊಂಡಿದ್ದೆ. ಅದರಂತೆ, ಸಂಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದ್ದೇನೆ ಎಂದರು.
ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಶುಕ್ರವಾರ ಸಂಜೆ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಪ್ರಕ್ರಿಯೆ ಶನಿವಾರವೂ ಮುಂದುವರಿದಿದೆ. ವಿಶ್ವೇಶ್ವರಯ್ಯ ಬಡಾವಣೆ ಮತ್ತು ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಈ ಆಧಾರದಲ್ಲಿ ದಾಳಿ ನಡೆದಿದೆ ಎಂದು ವಿಶ್ವನಾಥ್ ತಿಳಿಸಿದರು.
ನಾನು ಬಂದಾಗ ಭ್ರಷ್ಟಾಚಾರ ಮಾಡಿ ಸಿಕ್ಕಿಕೊಂಡಿದ್ದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೆವು. ಇದು ಸಾರ್ವಜನಿಕರ ಹಣಕಾಸು ವ್ಯವಹಾರ ನಡೆಯುವ ಸಂಸ್ಥೆ. ನಾನೂ ಸಹ ದೂರುಗಳನ್ನು ನಾವೂ ಎಸಿಬಿಗೆ ಕೊಟ್ಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವುದಾಗಿ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಎಸಿಬಿಗೆ ಸಂಪೂರ್ಣ ಸಹಕಾರಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ಇರಬೇಕೆಂಬುದು ನಮ್ಮ ಬಿಜೆಪಿ ಸರ್ಕಾರದ ಗುರಿಯಾಗಿದೆ. ಅದರಂತೆ ಬಿಡಿಎ ಸಂಸ್ಥೆಯನ್ನೂ ಭ್ರಷ್ಟ ಮುಕ್ತ ಮಾಡಿ ಸಾರ್ವಜನಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಎಸಿಬಿ ನಡೆಸಿರುವ ದಾಳಿಯನ್ನು ಸ್ವಾಗತ ಮಾಡುತ್ತೇನೆ ಮತ್ತು ತನಿಖೆ ವಿಚಾರದಲ್ಲಿ ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.
50 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಗರದಲ್ಲಿ ಬಿಡಿಎಗೆ ಸೇರಿದ 50 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಈಗಾಗಲೇ 400 ಕ್ಕೂ ಹೆಚ್ಚು ಎಕರೆಯಷ್ಟು ಆಸ್ತಿಯನ್ನು ಗುರುತಿಸಿ ಭೂಕಬಳಿಕೆದಾರರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಕಮಿಷನ್ ದಂಧೆ ಆರಂಭಿಸಿದ್ದೇ ಕಾಂಗ್ರೆಸ್‌ಬಿಜೆಪಿ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿರುವುದಕ್ಕೆ ತಿರುಗೇಟು ನೀಡಿದ ವಿಶ್ವನಾಥ್ ಅವರು, ಕಮೀಷನ್ ದಂಧೆಯನ್ನು ಆರಂಭ ಮಾಡಿದ್ದೇ ಕಾಂಗ್ರೆಸ್‌ನವರು. ಅವರ ಆಡಳಿತದಲ್ಲಿ ಶೇಕಡ 20 ರಷ್ಟು ಮಾತ್ರ ಫಲಾನುಭವಿಗಳಿಗೆ ತಲುಪುತ್ತಿತ್ತು. ಉಳಿದ ಹಣ ಏಜೆನ್ಸಿಗಳಿಗೆ ಹೋಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು. ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ದೂರಿಗೆ ತಕ್ಕಂತೆ ನಿಖರವಾದ ದಾಖಲೆ ಕೊಡಲಿ. ಸರ್ಕಾರ ಸೂಕ್ತ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.