ಬೆಂಗಳೂರಿನ ಕ್ಯಾಬ್ನಲ್ಲಿ ಅತ್ಯಾಚಾರ: ಚಾಲಕನ ಮೊಬೈಲ್ನಲ್ಲಿ ಮತ್ತಷ್ಟು ಕೃತ್ಯಗಳು ಪತ್ತೆ!
ಬೆಂಗಳೂರಿನ ಕ್ಯಾಬ್ನಲ್ಲಿ ಅತ್ಯಾಚಾರ: ಚಾಲಕನ ಮೊಬೈಲ್ನಲ್ಲಿ ಮತ್ತಷ್ಟು ಕೃತ್ಯಗಳು ಪತ್ತೆ!
ಯುವತಿ ಮೇಲೆ ಕಾರಿನಲ್ಲೇ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದಿರುವ ಕ್ಯಾಬ್ ಚಾಲಕ ದೇವರಾಜ್, ಈ ಹಿಂದೆಯೂ ಇದೇ ರೀತಿ ಕೃತ್ಯ ನಡೆಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಆತನ ಮೊಬೈಲ್ನಲ್ಲಿ ಈ ಹಿಂದೆ ನಡೆಸಿರುವ ಕುಕೃತ್ಯಗಳು ಕೂಡ ಬಯಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ.
: ಮದ್ಯದ ಅಮಲಿನಲ್ಲಿ ನಿದ್ದೆ ಮಾಡಿದ್ದ ಯುವತಿ ಮೇಲೆ ಕಾರಿನಲ್ಲೇ ನಡೆಸಿ ಸಿಕ್ಕಿಬಿದ್ದಿರುವ ಚಾಲಕ ದೇವರಾಜ್, ಈ ಹಿಂದೆಯೂ ಇದೇ ರೀತಿ ಕೃತ್ಯ ನಡೆಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಆರೋಪಿ ದೇವರಾಜ್ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಿಂದಿನ ಸೀಟಿಗೆ ಹೋಗಿ ಅತ್ಯಾಚಾರ ನಡೆಸಿದ ಬಳಿಕ ಆಕೆಯ ಜೊತೆ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿ ನಿದ್ದೆ ಮಾಡಿದ್ದ ಯುವತಿಗೆ ಚಾಲಕ ಸೆಲ್ಪಿ ತೆಗೆದುಕೊಳ್ಳುವಾಗ ಎಚ್ಚರವಾಗಿದೆ. ಗಾಬರಿಯಲ್ಲಿ ಮೊಬೈಲ್ ಅಲ್ಲೇ ಬಿಟ್ಟು ಮುಂದಿನ ಸೀಟಿಗೆ ಚಾಲಕ ಹೋಗಿದ್ದಾನೆ.
ಚಾಲಕ ತನ್ನ ಮೇಲೆ ಎರಗಿರುವ ಅನುಮಾನ ಬಂದ ಯುವತಿ, ನಿದ್ದೆಯಿಂದ ಸಾವರಿಸಿಕೊಂಡು ನೋಡಿದಾಗ ಚಾಲಕನ ಮೊಬೈಲ್ ಹಿಂದಿನ ಸೀಟಿನ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಅದನ್ನು ತೆಗೆದುಕೊಂಡು ಬ್ಯಾಗಿನಲ್ಲಿ ಹಾಕಿಕೊಂಡಿದ್ದಾಳೆ. ಕೊನೆಗೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಯುವತಿ ನಡೆದ ಸಂಗತಿಗಳ ಮಾಹಿತಿ ನೀಡಿದ್ದಾಳೆ.
ಬಳಿಕ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಹಾಗೂ ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆಯೂ ಹೊರ ರಾಜ್ಯದ ಯುವತಿಯರಿಗೆ ಡ್ರಾಪ್ ಕೊಡುವಾಗ ಸೆಲ್ಫಿ ತೆಗೆದುಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಪಾರ್ಟಿಗಳಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡುವ ಯುವತಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ!ಯುವತಿಯೊಬ್ಬಳನ್ನು ಕ್ಯಾಬ್ನಲ್ಲಿ ಕರೆದುಕೊಂಡು ಹೋಗುವಾಗ ಅದೇ ಕ್ಯಾಬ್ನ ಚಾಲಕ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಚಾಲಕನನ್ನು ಜೆ.ಬಿ. ನಗರ ಪೊಲೀಸರು ಬಂಧಿಸಿದ್ದರು. ಆವಲಹಳ್ಳಿ ನಿವಾಸಿ ದೇವರಾಜುಲು (25) ಬಂಧಿತ ಆರೋಪಿ. ಕ್ಯಾಬ್ನಲ್ಲಿ ಪ್ರಯಾಣಿಸುವಾಗ ನಿದ್ರೆಗೆ ಜಾರಿದ ಸಮಯದಲ್ಲಿ ಚಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಜಾರ್ಖಂಡ್ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುಗಿದೆ.
ಸಂತ್ರಸ್ತ ಯುವತಿ ಕಳೆದ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಮುರುಗೇಶ್ಪಾಳ್ಯದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಯುವತಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವತಿ ಮಂಗಳವಾರ ರಾತ್ರಿ ಎಚ್ಎಸ್ಆರ್ ಲೇಔಟ್ನಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದಳು.
ತಡರಾತ್ರಿವರೆಗೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಳು. ಬಳಿಕ ಒಬ್ಬಳೇ ಮುರುಗೇಶ್ಪಾಳ್ಯದಲ್ಲಿರುವ ತನ್ನ ಅಪಾರ್ಟ್ಮೆಂಟ್ಗೆ ತೆರಳಲು ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ಕ್ಯಾಬ್ ಬುಕ್ ಮಾಡಿದ್ದಳು. ಹತ್ತು ನಿಮಿಷಕ್ಕೆ ಸ್ಥಳಕ್ಕೆ ಬಂದಿದ್ದ ಯುವತಿಯನ್ನು ಹತ್ತಿಸಿಕೊಂಡಿದ್ದ. ಮದ್ಯದ ನಶೆಯಲ್ಲಿದ್ದ ಸಂತ್ರಸ್ತೆ ಕಾರಿನ ಹಿಂಬದಿ ಸೀಟಿನಲ್ಲಿ ನಿದ್ರೆಗೆ ಜಾರಿದ್ದಳು.
‘‘ನನಗೆ ಪ್ರಜ್ಞೆ ಬಂದಾಗ ಚಾಲಕ ನನ್ನ ಮೇಲೆ ಮಲಗಿದ್ದ. ಆತಂಕಗೊಂಡು ಕೂಗುತ್ತಾ ಆತನನ್ನು ತಳ್ಳಿ ಕ್ಯಾಬ್ನಿಂದ ಹೊರಗೆ ಓಡಿ ಬಂದೆ, ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಿಶೇಷ ತನಿಖಾ ತಂಡ ಆರೋಪಿಯನ್ನು ಆವಲಹಳ್ಳಿಯ ಆತನ ಮನೆಯಲ್ಲಿ ಬಂಧಿಸಿದೆ. ದೇವರಾಜುಲು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಸಂತ್ರಸ್ತೆ ಹಾಗೂ ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವೈದ್ಯರ ವರದಿಗಾಗಿ ಕಾಯಲಾಗುತ್ತಿದೆ. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.