ಪಲ್ಸ್‌ ಆಕ್ಸಿಮೀಟರ್‌ ಪೂರೈಕೆ ಸೋಗಿನಲ್ಲಿ ಮೋಸ: ಬೆಂಗಳೂರಿನ ಅಂಗಡಿ ಮಾಲೀಕರಿಗೆ ದೋಖಾ

ತಮ್ಮ ಸಂಬಂಧಿ ಇಂದೋರ್‌ನಲ್ಲಿದ್ದಾನೆ. ಆತ ನಿಮಗೆ 10 ರೂ. ನೋಟಿನ ಫೋಟೊ ಕಳುಹಿಸುತ್ತಾನೆ. ಅದನ್ನು ಆಧರಿಸಿ 7 ಲಕ್ಷ ರೂ. ಗಳನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿ ಎಂದು ವಂಚಕರು ಹೇಳುತ್ತಾರೆ. ಅವರ ಮಾತು ನಂಬಿ ಅಂಗಡಿ ಮಾಲೀಕ ಹಣ ಕಳುಹಿಸಿ ಮೋಸ ಹೋಗಿದ್ದಾರೆ.

ಪಲ್ಸ್‌ ಆಕ್ಸಿಮೀಟರ್‌ ಪೂರೈಕೆ ಸೋಗಿನಲ್ಲಿ ಮೋಸ: ಬೆಂಗಳೂರಿನ ಅಂಗಡಿ ಮಾಲೀಕರಿಗೆ ದೋಖಾ
Linkup
: ಪಲ್ಸ್‌ ಆಕ್ಸಿಮೀಟರ್‌ ಪೂರೈಸುವುದಾಗಿ ನಂಬಿಸಿ ಸ್ಟೇಷನರಿ ಅಂಗಡಿ ಮಾಲೀಕರೊಬ್ಬರಿಂದ 7.50 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ನ್ಯೂ ತಿಪ್ಪಸಂದ್ರದ ದಯಾ ಮಾರ್ಟ್‌ ಸ್ಟೇಷನರಿ ಅಂಗಡಿ ಮಾಲೀಕ ಹುಕ್ಕಂ ಸಿಂಗ್‌ ವಂಚನೆಗೊಳಗಾದವರು. ಇವರು ನೀಡಿದ ದೂರಿನ ಮೇಲೆ ಆಂಕುರ್‌ ಸಿಂಗ್‌ ಮತ್ತು ಮಂಡಲ್‌ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಜೀವನ್‌ ಬಿಮಾ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಪಲ್ಸ್‌ ಆಕ್ಸಿಮೀಟರ್‌ಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದರಿಂದ ಹುಕ್ಕಂಸಿಂಗ್‌ ಅವರು ಏಪ್ರಿಲ್ 28ರಂದು ತಮ್ಮ ಮೊಬೈಲ್‌ಗೆ ಬಂದಿದ್ದ ಎಸ್‌ಎಂಎಸ್‌ನಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿಯು ಅಂಗಡಿಯ ವಿಳಾಸ ಪಡೆದು, ಪೇಟಿಎಂ ಮೂಲಕ ಮುಂಗಡವಾಗಿ 20 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಈ ವೇಳೆ ಹುಕ್ಕಂಸಿಂಗ್‌ ಒಂದು ಸಾವಿರ ಪಲ್ಸ್‌ ಆಕ್ಸಿಮೀಟರ್‌ ಪೂರೈಸುವಂತೆ ಕೋರಿದ್ದಾರೆ. ಅದಕ್ಕೆ ಒಪ್ಪಿದ ಆರೋಪಿಗಳು ಕೆಲ ದಿನಗಳ ಬಳಿಕ 30 ಸಾವಿರ ರೂ. ಪಡೆದಿದ್ದರು. ಕೊರೊನಾ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಆರೋಪಿಗಳು ಪಲ್ಸ್‌ ಆಕ್ಸಿಮೀಟರ್‌ ಪೂರೈಸಿರಲಿಲ್ಲ. ಇತ್ತೀಚೆಗೆ ಮತ್ತೆ ಕರೆ ಮಾಡಿದ್ದ ಆರೋಪಿಗಳು, 'ತಮ್ಮ ಸಂಬಂಧಿ ಇಂದೋರ್‌ನಲ್ಲಿದ್ದಾನೆ. ಆತ ನಿಮಗೆ 10 ರೂ. ನೋಟಿನ ಫೋಟೊ ಕಳುಹಿಸುತ್ತಾನೆ. ಅದನ್ನು ಆಧರಿಸಿ 7 ಲಕ್ಷ ರೂ. ಗಳನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿ' ಎಂದು ಸೂಚಿಸುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಹುಕ್ಕಂಸಿಂಗ್‌ಗೆ ಕರೆ ಮಾಡಿದ್ದ ವ್ಯಕ್ತಿಯು 10 ರೂ. ನೋಟಿನ ಫೋಟೊವನ್ನು ವಾಟ್ಸ್‌ಅಪ್‌ಗೆ ಕಳುಹಿಸಿ, 7 ಲಕ್ಷ ರೂ. ಪಾವತಿಸಿದರೆ ಪಲ್ಸ್‌ ಆಕ್ಸಿಮೀಟರ್‌ಗಳನ್ನು ಸರಬರಾಜು ಮಾಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಹುಕ್ಕಂಸಿಂಗ್‌ ಹಣ ಕಳುಹಿಸಿದ್ದಾರೆ. ಆದರೆ, ಪಲ್ಸ್‌ ಆಕ್ಸಿಮೀಟರ್‌ಗಳ ಪಾರ್ಸೆಲ್‌ ಮಾತ್ರ ಬರಲಿಲ್ಲ. ಕೊನೆಗೆ ಮೋಸ ಹೋಗಿರುವುದು ಗೊತ್ತಾಗಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.