![](https://vijaykarnataka.com/photo/88459508/photo-88459508.jpg)
: ಕಲಬುರಗಿ ವಿಶ್ವ ವಿದ್ಯಾಲಯದ ಅಂಕ ಪಟ್ಟಿ ಸೃಷ್ಟಿಸಿ ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಹಾಗೂ ನಕಲಿ ಅಂಕ ಪಟ್ಟಿ ಸೃಷ್ಟಿಸಿಕೊಡುತ್ತಿದ್ದ ಏಜೆಂಟ್‌ವೊಬ್ಬನನ್ನು ಏರ್‌ಪೋರ್ಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ದೇವೆಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಕೇರಳ ಮೂಲದ ವಿದ್ಯಾರ್ಥಿ ಸೋಜು ಹಾಗೂ ನಕಲಿ ಅಂಕ ಪಟ್ಟಿ ಜಾಲದ ಪ್ರಮುಖ ಆರೋಪಿ ಅನುರಾಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ನಕಲಿ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವುದಾಗಿ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ, ಅವರ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವೊಂದು ಕೇರಳಕ್ಕೆ ತೆರಳಿದೆ. ಶೀಘ್ರದಲ್ಲೇ ಆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಮಾಹಿತಿ ನೀಡಿದರು.
ವಿದೇಶಕ್ಕೆ ಹಾರುವ ಕನಸು: ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸೋಜು, ಇಂಗ್ಲೆಂಡ್‌ಗೆ ತೆರಳಿ ಕೆಲಸ ಮಾಡಿ ಹೆಚ್ಚು ಹಣ ಗಳಿಸುವ ಕನಸು ಕಂಡಿದ್ದ. ಹಾಗಾಗಿ ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಹೋಗಲು ಯತ್ನಿಸಿದ್ದ. ಇದಕ್ಕಾಗಿ ನಕಲಿ ಅಂಕ ಪಟ್ಟಿ ಪಡೆದುಕೊಂಡು ವೀಸಾ ಪಡೆದುಕೊಂಡಿದ್ದ. ಅಲ್ಲದೇ, ಡಿಸೆಂಬರ್ 17ರಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ಯುಕೆಗೆ ತೆರಳಲು ಮುಂದಾಗಿದ್ದ. ಈ ವೇಳೆ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಸೋಜು ಬಳಿಯಿದ್ದ ಅಂಕ ಪಟ್ಟಿಗಳನ್ನು ನೋಡಿ ಅನುಮಾನ ಬಂದಿದೆ. ಹಾಗಾಗಿ, ಸೋಜುನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತನ್ನ ಬಳಿ ಇರುವ ಅಂಕಪಟ್ಟಿಗಳು ನಕಲಿ ಎಂದು ಹೇಳಿದ್ದ. ಆನಂತರ ಅಧಿಕಾರಿಗಳು ಏರ್‌ಪೋರ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜತೆಗೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಈ ನಕಲಿ ಅಂಕಪಟ್ಟಿ ನೀಡಿದ್ದ ಏಜೆಂಟ್ ಅನುರಾಗ್‌ನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.
ಬೇರೆ ರಾಜ್ಯದ ಅಂಕಪಟ್ಟಿ ನಕಲು : ಬಂಧಿತ ಆರೋಪಿ ಟ್ರೂ ವೇ ಗ್ಲೋಬಲ್ ಎಜುಕೇಷನ್ ಇನ್‌ಸ್ಟಿಟ್ಯೂಟ್ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ವ್ಯವಹಾರ ನಡೆಸುತ್ತಿದ್ದ. ಹಣ ನೀಡಿದರೆ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೊಡುವ ಏಜೆಂಟ್ ಆಗಿ ಗುರುತಿಸಿಕೊಂಡಿದ್ದ. ಈತ ಕೇವಲ ರಾಜ್ಯ ವಿವಿಗಳಲ್ಲದೇ, ಅಂತಾರಾಜ್ಯ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸುತ್ತಿದ್ದ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಂಕಪಟ್ಟಿಗಳನ್ನು ನಕಲು ಮಾಡುತ್ತಿದ್ದ ಎಂದು ಡಿಸಿಪಿ ವಿವರಿಸಿದರು.
ಆರೋಪಿಗಳು ಅಂಕಪಟ್ಟಿ ತಯಾರಿಸಲು ಬೇಕಾದ ಪೇಪರ್‌ಗಳು ಹಾಗೂ ವಿವಿ ಲಾಂಛನ ಮತ್ತು ವಿವಿ ಕುಲಪತಿಗಳ ನಕಲಿ ಸಹಿ, ಸೀಲ್‌ಗಳನ್ನು ಇಟ್ಟಿಕೊಂಡಿದ್ದರು. ಯಾವ ವಿವಿ ಅಂಕಪಟ್ಟಿಗೆ ಹಣ ನೀಡುತ್ತಾರೋ ಅದೇ ವಿವಿ ನಕಲಿ ಅಂಕಪಟ್ಟಿ ತಯಾರಿಸಿಕೊಡುತ್ತಿದ್ದರು ಎಂದು ಮಾಹಿತಿ ನೀಡಿದರು.