ನಾಗಪ್ಪ ನಾಗನಾಯಕನಹಳ್ಳಿ : ಕೊರೊನಾ ವಿರುದ್ಧ ಸೆಣೆಸಲು ರಾಮ ಬಾಣವೆನಿಸಿರುವ 'ಕೋವಿಡ್ ಲಸಿಕೆ'ಯನ್ನು ರಾಜಧಾನಿಯಲ್ಲಿನ 50 ಲಕ್ಷ ಮಂದಿ ಪಡೆದುಕೊಂಡಿದ್ದಾರೆ. ಕೋವಿಡ್ ಸೋಂಕಿನ ಮೂರನೇ ಅಲೆ ಅಪ್ಪಳಿಸುವ ಮುನ್ನವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡುವ ಗುರಿ ಹಾಕಿಕೊಳ್ಳಲಾಗಿದೆ.
ನಗರದಲ್ಲಿನ 1.30 ಕೋಟಿ ಜನಸಂಖ್ಯೆ ಪೈಕಿ 18 ವರ್ಷ ಮೇಲ್ಪಟ್ಟ 90 ಲಕ್ಷ ಮಂದಿ ಇದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 42.79 ಲಕ್ಷ ಹಾಗೂ ನಗರ ಜಿಲ್ಲೆಯಲ್ಲಿ 6.01 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಉಳಿದವರಿಗೆ ಅಕ್ಟೋಬರ್ ವೇಳೆಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಲಸಿಕೆ ಪಡೆದರೆ ಜನರು ಸುರಕ್ಷಿತವಾಗಿರುತ್ತಾರೆ. ಸೋಂಕು ತಗಲಿದರೂ ಚಿಕಿತ್ಸೆ ನೀಡುವುದು ಸುಲಭವಾಗಲಿದೆ. ಹಾಗಾಗಿ, ಪಾಲಿಕೆಯು ಎಲ್ಲರಿಗೂ ನವೆಂಬರ್ ತಿಂಗಳೊಳಗೆ ಲಸಿಕೆಯ ಎರಡೂ ಡೋಸ್ಗಳನ್ನು ಕೊಡಲು ಉದ್ದೇಶಿಸಿದೆ. ದಿನಕ್ಕೆ ಒಂದು ಲಕ್ಷದಂತೆ ತಿಂಗಳಿಗೆ 30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
18 ರಿಂದ 44 ವರ್ಷದೊಳಗಿನವರಲ್ಲಿ ಆಯ್ದ 42 ಆದ್ಯತಾ ಗುಂಪುಗಳನ್ನು ಗುರುತಿಸಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಈ ವಯೋಮಾನದ ಶೇ. 75ರಷ್ಟು ಮಂದಿಗೆ ಖಾಸಗಿ ಆಸ್ಪತ್ರೆಗಳ ಮೂಲಕವೇ ಲಸಿಕೆ ನೀಡಲಾಗುತ್ತಿದೆ. ನಾನಾ ಕಂಪನಿಗಳ ಕಚೇರಿಗಳು, ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಪ್ರತ್ಯೇಕವಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚಿಸಿ, ತಮ್ಮ ಸಿಬ್ಬಂದಿಗೆ ಲಸಿಕೆ ಕೊಡಿಸುತ್ತಿವೆ. ಅಪಾರ್ಟ್ಮೆಂಟ್ಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೂಡ ಖಾಸಗಿ ಆಸ್ಪತ್ರೆಗಳ ನೆರವಿನಿಂದ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿವೆ.
ನಗರದಲ್ಲಿ 18-44 ವರ್ಷದೊಳಗಿನ 64 ಲಕ್ಷ ಮಂದಿಯನ್ನು ಗುರುತಿಸಿದ್ದು, ಇಲ್ಲಿಯವರೆಗೆ 18.56 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ಈ ವಯೋಮಾನದ ಒಟ್ಟು 32 ಲಕ್ಷ ಮಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ತಿಂಗಳೊಳಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಹಾಗೆಯೇ, 45ರಿಂದ 60 ವರ್ಷದೊಳಗಿನ 26 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇದುವರೆಗೆ 10.25 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.80ರಷ್ಟು ಮಂದಿಗೆ ಲಸಿಕೆ ವಿತರಿಸಲಾಗಿದೆ.
ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿ ಒಟ್ಟು 204 ಕಡೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಆದ್ಯತಾ ಗುಂಪುಗಳಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿಯೇ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿಯನ್ನೊಳಗೊಂಡ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ನಗರ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 10.61 ಲಕ್ಷವಿದ್ದು, ಇಲ್ಲಿಯವರೆಗೆ 6.01 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. 18-44 ವರ್ಷದ 1.71 ಲಕ್ಷ, 45 ವರ್ಷ ಮೇಲ್ಪಟ್ಟ ಸುಮಾರು 3 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.
ಪಾಲಿಕೆಗೆ 2-3 ದಿನಗಳಿಗೊಮ್ಮೆ 50-60 ಸಾವಿರ ಡೋಸ್ ಲಸಿಕೆ ಲಭ್ಯವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ದೊರಕುತ್ತಿರುವುದರಿಂದ ವಿತರಣೆ ಪ್ರಮಾಣವನ್ನು ಜಾಸ್ತಿ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿತ್ಯ 300 ಮಂದಿಗೆ ಲಸಿಕೆ ಹಾಕಲಾಗುತ್ತಿದೆ.
45 ವರ್ಷದವರ ಪತ್ತೆಗೆ ಸಮೀಕ್ಷೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆಯದ 45 ವರ್ಷ ಮೇಲ್ಪಟ್ಟವರ ಪತ್ತೆಗಾಗಿ ಮನೆ-ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿ ಆಧಾರದಲ್ಲಿ 45 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಲಸಿಕೆ ಪಡೆಯಲು ಉತ್ತೇಜಿಸಲಾಗುತ್ತಿದೆ. ಹಾಗೆಯೇ, ಲಸಿಕೆಯ ಎರಡನೇ ಡೋಸ್ ಪಡೆಯಲು ಬಾಕಿ ಇರುವವರಿಗೆ 1912 ಸಹಾಯವಾಣಿಯಿಂದಲೇ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ.
ದಾನಿಗಳ ನೆರವಿಂದ ಉಚಿತ ಲಸಿಕೆ: ಪಾಲಿಕೆಯು ಸಿಎಸ್ಆರ್ ನಿಧಿಯಲ್ಲಿ ವೆಚ್ಚ ಭರಿಸಲು ಸಾಧ್ಯವಿಲ್ಲದವರಿಗೆ ಲಸಿಕೆ ಶಿಬಿರ ಏರ್ಪಡಿಸುತ್ತಿದೆ. ಇದಕ್ಕಾಗಿಯೇ ವಿಶೇಷ ಕಾರ್ಯಪಡೆ (ಎಸಿಟಿ) ರಚಿಸಲಾಗಿದೆ. ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್, ಸಣ್ಣ ಕೈಗಾರಿಕೆಗಳ ಕಾರ್ಮಿಕರಿಗೆ ದಾನಿಗಳ ನೆರವಿನಿಂದ ಲಸಿಕೆ ನೀಡಲಾಗುತ್ತಿದೆ. ಕೊಳೆಗೇರಿಗಳಲ್ಲಿನ ಬಿಪಿಎಲ್ ಪಡಿತರ ಚೀಟಿ ಹೊಂದಿರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ.
ಲಸಿಕೆ ಅಂತರ 28 ದಿನಗಳಿಗೆ ಪರಿಷ್ಕರಣೆ: ಕೇಂದ್ರ ಸರಕಾರದ ನಿರ್ದೇಶನದಂತೆ ವಿದ್ಯಾಭ್ಯಾಸ, ನೌಕರಿಗೆ ವಿದೇಶಕ್ಕೆ ತೆರಳುವವರು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ಗಾಗಿ ಟೋಕಿಯೊಗೆ ತೆರಳುವ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ಅಂತರವನ್ನು 84 ದಿನಗಳಿಂದ 28 ದಿನಗಳಿಗೆ ಪರಿಷ್ಕರಿಸಲಾಗಿದೆ. ವಿದೇಶಕ್ಕೆ ತೆರಳುವವರು ನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಲ್ಲಿನ ಆಯುಕ್ತರಿಂದ ಅನುಮತಿ ಪಡೆದು ಲಸಿಕೆ ಪಡೆಯಬಹುದಾಗಿದೆ.
'ಸುರಕ್ಷಿತವಾಗಿ ಸಹಜ ಜೀವನಕ್ಕೆ ಮರಳಲು ಲಸಿಕೆಯು ನೆರವಾಗಲಿದೆ. ಕೋವಿಡ್ನ ಮೂರನೇ ಅಲೆ ಕಾಣಿಸಿಕೊಳ್ಳುವ ವೇಳೆಗೆ 18 ವರ್ಷ ಮೇಲ್ಪಟ್ಟ 90 ಲಕ್ಷ ಮಂದಿಗೂ ಎರಡು ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ರತಿದಿನ ಸರಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ದಾನಿಗಳ ನೆರವಿನಿಂದ 90 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.