2-4 ವಾರಗಳ ಒಳಗೇ ಕೋವಿಡ್ 19 ಮೂರನೇ ಅಲೆ, ಈ ಬಾರಿ ಅಪಾಯ ದುಪ್ಪಟ್ಟು: ಕಾರ್ಯಪಡೆ ಎಚ್ಚರಿಕೆ

ಕೋವಿಡ್ 19 ಮೂರನೇ ಅಲೆಯು ಇನ್ನು ಎರಡರಿಂದ ನಾಲ್ಕು ವಾರಗಳಲ್ಲಿಯೇ ಅಪ್ಪಳಿಸುವ ಸಂಭವವಿದೆ. ಈ ಬಾರಿ ಮಕ್ಕಳಿಗೆ ಹೆಚ್ಚು ಅಪಾಯವಿಲ್ಲದೆ ಇದ್ದರೂ, ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಅಧಿಕವಾಗಲಿದೆ ಎಂದು ಮಹಾರಾಷ್ಟ್ರ ಕಾರ್ಯಪಡೆ ಎಚ್ಚರಿಕೆ ನೀಡಿದೆ.

2-4 ವಾರಗಳ ಒಳಗೇ ಕೋವಿಡ್ 19 ಮೂರನೇ ಅಲೆ, ಈ ಬಾರಿ ಅಪಾಯ ದುಪ್ಪಟ್ಟು: ಕಾರ್ಯಪಡೆ ಎಚ್ಚರಿಕೆ
Linkup
ಮುಂಬಯಿ: ಮುಂದಿನ ಎರಡರಿಂದ ನಾಲ್ಕು ವಾರಗಳ ಒಳಗೆ ಮೂರನೇ ಅಲೆಯು ಅಥವಾ ಮುಂಬಯಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ನಾಗರಿಕರಿಗೆ ಭೀಕರ ಭವಿಷ್ಯದ ಬಗ್ಗೆ ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಎಚ್ಚರಿಕೆ ನೀಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಜನರು ಗುಂಪುಗೂಡುತ್ತಿರುವ ಪರಿ ಇದರ ಮುನ್ಸೂಚನೆಯಾಗಿದೆ ಎಂದು ಅದು ಹೇಳಿದೆ. ಆದರೆ ಮಧ್ಯಮ ವಯಸ್ಸಿನ ಗುಂಪಿನವರಿಗೆ ಹೋಲಿಸಿದರೆ, ಈವರೆಗೂ ಅಷ್ಟಾಗಿ ಸೋಂಕಿನಿಂದ ಬಾಧೆಗೆ ಒಳಗಾಗದ ಮಕ್ಕಳ ವರ್ಗಕ್ಕೆ ತೊಂದರೆಯಾಗುವುದಿಲ್ಲ ಎಂದು ಕಾರ್ಯಪಡೆ ಭರವಸೆ ನೀಡಿದೆ. ಅಂದಾಜಿಸಲಾಗಿರುವ ಕೋವಿಡ್ ಕುರಿತು ನಡೆಸಲಾಗುತ್ತಿರುವ ಸಿದ್ಧತೆಯ ಪರಾಮರ್ಶೆಗಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯಲ್ಲಿ ಕಾರ್ಯಪಡೆಯ ಸದಸ್ಯರು, ರಾಜ್ಯ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಪ್ರಸ್ತುಪಡಿಸಲಾದ ದಾಖಲೆಗಳ ಪ್ರಕಾರ, ಎರಡನೆಯ ಅಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳು ಮೂರನೇ ಅಲೆಯಲ್ಲಿ ದಾಖಲಾಗಲಿವೆ. ಸಕ್ರಿಯ ಪ್ರಕರಣಗಳು 8 ಲಕ್ಷ ತಲುಪಲಿದೆ ಎಂದು ಎಚ್ಚರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳು ಪ್ರಸ್ತುತ 1.4 ಲಕ್ಷದಷ್ಟಿದೆ. ಮೊದಲ ಅಲೆಯಲ್ಲಿ 19 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಎರಡನೆಯ ಅಲೆಯಲ್ಲಿ ಅದರ ಸಂಖ್ಯೆ 40 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಭೆಯಲ್ಲಿ ಕಾರ್ಯಪಡೆ ವಿವರಿಸಿದೆ. ಮುಂದಿನ ಅಲೆಯಲ್ಲಿ ಇದರ ಎರಡು ಪಟ್ಟು ಪ್ರಕರಣಗಳು ದಾಖಲಾಗಬಹುದು. ಆದರೆ, ಮೊದಲ ಎರಡು ಅಲೆಗಳಲ್ಲಿರುವಂತೆಯೇ ಒಟ್ಟು ಪ್ರಕರಣಗಳಲ್ಲಿ ಶೇ 10ರಷ್ಟು ಮಕ್ಕಳು ಅಥವಾ ತಾರುಣ್ಯದವರಲ್ಲಿ ಕಾಣಿಸಿಕೊಳ್ಳಬಹುದು ಎಂದು ಅದು ತಿಳಿಸಿದೆ. ಇದೇ ರೀತಿ ನಿರ್ಲಕ್ಷಿಸಿದರೆ ಶೀಘ್ರವೇ ಮೂರನೇ ಅಲೆ'ಎರಡನೆಯ ಅಲೆ ತಗ್ಗಿದ ನಾಲ್ಕು ವಾರಗಳ ಒಳಗೇ ಬ್ರಿಟನ್‌ನಲ್ಲಿ ಮೂರನೇ ಅಲೆ ಶುರುವಾಗಿತ್ತು. ನಾವು ಎಚ್ಚರಿಕೆಯಿಂದ ಇರದೆ ಮತ್ತು ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದರೆ ಇದೇ ರೀತಿಯ ಸನ್ನಿವೇಶ ಎದುರಿಸಬೇಕಾಗಬಹುದು' ಎಂದು ಕಾರ್ಯಪಡೆ ಸದಸ್ಯ ಡಾ. ಶಶಾಂಕ್ ಜೋಷಿ ಎಚ್ಚರಿಕೆ ನೀಡಿದ್ದಾರೆ. ಸಾಂಪ್ರದಾಯಿಕ ಅಂದಾಜಿನಂತೆ, ಸಾಂಕ್ರಾಮಿಕ ರೋಗ ತಜ್ಞರು ಎರಡು ಅಲೆಗಳ ನಡುವಿನ ಉತ್ತುಂಗವನ್ನು 100 ದಿನಗಳಲ್ಲಿ ಅಥವಾ ಒಂದು ಅಲೆ ತಗ್ಗಿದ ಬಳಿಕ ಮುಂದಿನ ಅಲೆ ಉತ್ತುಂಗಕ್ಕೆ ಹೋಗಲು ಎಂಟು ವಾರಗಳ ಸಮಯವನ್ನು ನಿರೀಕ್ಷಿಸಿದ್ದಾರೆ. 'ಮುಂದಿನ ಅಲೆಯಲ್ಲಿ ಮಕ್ಕಳು ಗುರಿಯಾಗಿರುವುದಿಲ್ಲ ಎಂದು ನಾವು ಭಾವಿಸಿದ್ದೇವೆ' ಎಂದಿದ್ದಾರೆ. ಜನರ ನಿಯಂತ್ರಣ ಸಾಧ್ಯವಾಗುತ್ತಿಲ್ಲಕಳೆದ ಎರಡು ವಾರಗಳಿಂದ ರಾಜ್ಯ ಸರಕಾರವು ಐದು ಹಂತದ ಅನ್‌ಲಾಕ್ ಘೋಷಣೆ ಮಾಡಿದೆ. ನಿಯಂತ್ರಿಸಲಾಗದ ಗುಂಪುಗೂಡುವಿಕೆ ಮತ್ತು ಮಾಸ್ಕ್ ಧರಿಸುವ ಹಾಗೂ ಅನಗತ್ಯ ಓಡಾಟವನ್ನು ತಡೆಯುವಂತಹ ಕೋವಿಡ್ ನಿಯಮಗಳ ಪಾಲನೆಯಾಗದೆ ಇರುವುದು ಚಿಂತೆಗೀಡುಮಾಡಿದೆ. ಮುಂಬಯಿಯಂತಹ ನಗರದಲ್ಲಿ ಜನರ ಚಟುವಟಿಕೆಗಳಿಗೆ ನಿರ್ದಿಷ್ಟ ಸಮಯಗಳಿದ್ದರೂ, ದಿನವಿಡೀ ಜನರು ಓಡಾಡುತ್ತಲೇ ಇದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಯಾರಿಗೆ ಅಪಾಯ ಹೆಚ್ಚು?ಮೊದಲ ಎರಡು ಅಲೆಗಳಲ್ಲಿ ಕೋವಿಡ್‌ನಿಂದ ತಪ್ಪಿಸಿಕೊಂಡಿದ್ದ ಜನಸಂಖ್ಯೆಯ ಭಾಗಕ್ಕೆ ಮೂರನೇ ಅಲೆ ಹೆಚ್ಚು ಅಪಾಯಕಾರಿಯಾಗಲಿದೆ. ಮೊದಲ ಎರಡು ಅಲೆಗಳಿಂದ ತಪ್ಪಿಸಿಕೊಂಡಿದ್ದ ಅಥವಾ ಅತ್ಯಧಿಕ ಪ್ರಮಾಣದಲ್ಲಿ ಆಂಟಿಬಾಡಿಗಳನ್ನು ಕಳೆದುಕೊಂಡಿರುವ ಮಧ್ಯಮ ಅಥವಾ ಮೇಲ್ ಮಧ್ಯಮ ವರ್ಗದಲ್ಲಿ ಇದರ ಪರಿಣಾಮ ಹೆಚ್ಚಿರಲಿದೆ. ಟೆಸ್ಟಿಂಗ್ ಅಧಿಕಗೊಳಿಸುವುದು ಮತ್ತು ಹಾಗೂ ಮೂಲಸೌಕರ್ಯ ಸಿದ್ಧತೆ ನಡೆಸುವುದು ಮುಖ್ಯ ಕ್ರಮಗಳಾಗಿವೆ ಎಂದು ಅವರು ಹೇಳಿದ್ದಾರೆ.