ಕೇಂದ್ರ ಸಂಪುಟ ಪುನಾರಚನೆ, ಐದು ಪ್ರಮುಖ ಅನಿರೀಕ್ಷಿತ ಬದಲಾವಣೆಗಳು

ಬುಧವಾರ ನಡೆದ ಎನ್‌ಡಿಎ ಸರಕಾರದ 2ನೇ ಅವಧಿಯ ಮೊದಲ ಸಂಪುಟ ವಿಸ್ತರಣೆಯಲ್ಲಿ ಒಂದೇ ಬಾರಿಗೆ 36 ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದರೆ, 7 ರಾಜ್ಯದರ್ಜೆ ಸಚಿವರಿಗೆ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ಸಿಕ್ಕಿತು. ಇದರ ಜತೆಗೆ 12 ಸಚಿವರು ತಮ್ಮ ಹುದ್ದೆಗೂ ರಾಜೀನಾಮೆ ನೀಡಿದರು.

ಕೇಂದ್ರ ಸಂಪುಟ ಪುನಾರಚನೆ, ಐದು ಪ್ರಮುಖ ಅನಿರೀಕ್ಷಿತ ಬದಲಾವಣೆಗಳು
Linkup
ಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಸಂಪುಟ ವಿಸ್ತರಣೆ ಬುಧವಾರ ನಡೆಯಿತು. ಒಂದೇ ಬಾರಿಗೆ 36 ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದರೆ, 7 ರಾಜ್ಯದರ್ಜೆ ಸಚಿವರಿಗೆ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ನೀಡಲಾಯಿತು. ಇದರ ಜತೆಗೆ 12 ಸಚಿವರು ತಮ್ಮ ಹುದ್ದೆಗೂ ರಾಜೀನಾಮೆ ನೀಡಿದರು. ಹೀಗೆ ಸಂಪುಟ ಪುನಾರಚನೆಯಲ್ಲಿ ಕಂಡುಬಂದ ಐದು ಪ್ರಮುಖ ಅನಿರೀಕ್ಷಿತ ಬದಲಾವಣೆಗಳು ಹೀಗಿವೆ. * ಹರ್ಷವರ್ಧನ್‌, ರವಿಶಂಕರ್‌ ಪ್ರಸಾದ್‌ ರಾಜೀನಾಮೆ ಕೇಂದ್ರ ಆರೋಗ್ಯ ಸಚಿವರಾಗಿ ಕೊರೊನಾ ಕಾಲದಲ್ಲಿ ದೇಶವನ್ನು ಮುನ್ನಡೆಸಿದ್ದ ಡಾ. ಹರ್ಷವರ್ಧನ್‌ ಅವರ ರಾಜೀನಾಮೆ ನಿರೀಕ್ಷಿತವಾಗಿರಲಿಲ್ಲ. ಅದೇ ರೀತಿ ಕಾನೂನು ಸಚಿವರಾಗಿ, ಐಟಿ ಖಾತೆಯನ್ನು ಕೂಡ ನಿರ್ವಹಿಸುತ್ತಿದ್ದ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌, ಎಚ್‌ಆರ್‌ಡಿ ಸಚಿವಾಲಯವು ಶಿಕ್ಷಣ ಸಚಿವಾಲಯವಾದ ಬಳಿಕ ಮೊದಲ ಸಚಿವರಾಗಿ ಕಾರ್ಯನಿರ್ವಹಿದ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರ ರಾಜೀನಾಮೆ ಕೂಡ ಊಹೆಗೆ ಸಿಕ್ಕಿರಲಿಲ್ಲ. ಇನ್ನು ಕರ್ನಾಟಕದ ಹಿರಿಯ ಬಿಜೆಪಿ ನಾಯಕ, ರಾಸಾಯನಿಕ ಖಾತೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ಅವರ ನಿರ್ಗಮನ ಕೂಡ ಅಚ್ಚರಿ ಮೂಡಿಸಿದೆ. ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌, ಪರಿಸರ ಖಾತೆ ಸಹಾಯಕ ಸಚಿವ ಬಾಬುಲ್‌ ಸುಪ್ರಿಯೊ ಅವರ ಪದಚ್ಯುತಿಯೂ ಚರ್ಚೆಗೆ ಗ್ರಾಸವಾಗಿದೆ. * 'ಕೈ'ಬಿಟ್ಟ 1 ವರ್ಷಕ್ಕೆ ಜ್ಯೋತಿರಾದಿತ್ಯ ಸಚಿವ ಮಧ್ಯಪ್ರದೇಶದ ಕಮಲ್‌ನಾಥ್‌ ನಾಯಕತ್ವಕ್ಕೆ ಸೆಡ್ಡು ಹೊಡೆದು, ಬಹುಕಾಲದಿಂದ ದುಡಿದಿದ್ದ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದ , ರಾಹುಲ್‌ ಗಾಂಧಿ ಅವರ ಪರಮಾಪ್ತ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಿಜೆಪಿ ಪಕ್ಷದ ಸಂಘಟನೆಯ ದೊಡ್ಡ ಜವಾಬ್ದಾರಿ ವಹಿಸುವ ನಿರೀಕ್ಷೆಯಿತ್ತು. ಮಧ್ಯಪ್ರದೇಶದಲ್ಲಿ ಎರಡನೇ ಸಾಲಿನ ನಾಯಕರ ಮುಂದಾಳು ಆಗುವ ಸುಳಿವನ್ನು ಕೂಡ ಸಿಂಧಿಯಾ ನೀಡಿದ್ದರು. ಆದರೆ, ಕಾಂಗ್ರೆಸ್‌ ತೊರೆದ ಒಂದೇ ವರ್ಷದಲ್ಲಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನವನ್ನು ನೀಡಲಾಗಿದೆ. * ಚಿರಾಗ್‌ ಆಕ್ರೋಶ ಡೋಂಟ್‌ಕೇರ್‌, ಪರಾಸ್‌ಗೆ ಜೈ ಎನ್‌ಡಿಎ ಮೈತ್ರಿಯಲ್ಲಿನ ಲೋಕಜನಶಕ್ತಿ ಪಕ್ಷದಲ್ಲಿ ಸದ್ಯ ಕಲಹ ತಾರಕಕ್ಕೇರಿದೆ. ಈ ನಡುವೆ ಚಿರಾಗ್‌ ಪಾಸ್ವಾನ್‌ ಅವರು ಪ್ರಧಾನಿ ಮೋದಿ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದರು. ಎಲ್‌ಜೆಪಿಯ ಬಂಡಾಯ ಅಭ್ಯರ್ಥಿ ಪಶುಪತಿ ಪಾರಸ್‌ಗೆ ಸಂಪುಟ ಸ್ಥಾನ ಬೇಡ ಎಂದು ಖುದ್ದು ಚಿರಾಗ್‌ ಅವರೇ ಪ್ರಧಾನಿಗೆ ಮನವಿ ಕೂಡ ಸಲ್ಲಿಸಿದ್ದರು. ಆದರೆ ಅದಕ್ಕೆ ಮಣೆ ಹಾಕದೆ, ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಸ್ಥಾನಕ್ಕೆ ಎಲ್‌ಜೆಪಿಯಿಂದ ಪಾರಸ್‌ಗೆ ಅವಕಾಶ ನೀಡಲಾಗಿದೆ. ಆದರೆ ಚಿರಾಗ್‌, ಇದರ ವಿರುದ್ಧ ಕೋರ್ಟ್‌ಗೆ ಹೋಗುವ ಬೆದರಿಕೆ ಹಾಕಿದ್ದಾರೆ. * ಸಹಾಯಕ ಸಚಿವರಿಗೆ ಬಡ್ತಿ ಸ್ವತಂತ್ರ ಸಹಾಯಕ ಖಾತೆ ಸಚಿವರಾಗಿದ್ದ ಹರ್‌ದೀಪ್‌ ಸಿಂಗ್‌ ಪುರಿ, ಅನುರಾಗ್‌ ಠಾಕೂರ್‌, ಜಿ. ಕಿಶನ್‌ ರೆಡ್ಡಿ ಹಾಗೂ ಇತರರಿಗೆ ಹೊಸದಾಗಿ ಸಂಪುಟ ಸ್ಥಾನಮಾನ ನೀಡಲಾಗಿದ್ದು, ಹಿರಿಯ ಸಚಿವರಾಗಿ ಬಡ್ತಿ ಸಿಕ್ಕಿದೆ. * ಸೊನೊವಾಲ್‌ಗೆ ಸಚಿವಗಿರಿ ಅಸ್ಸಾಂ ಮಾಜಿ ಸಿಎಂಗೆ ಪಕ್ಷ ಸಂಘಟನೆಯ ಮಹತ್ತರ ಜವಾಬ್ದಾರಿಯನ್ನು ಕೇಂದ್ರ ಕಚೇರಿಯ ಮಟ್ಟದಲ್ಲಿ ನೀಡುವ ನಿರೀಕ್ಷೆ ಇತ್ತು. ಆದರೆ ಸರಕಾರದೊಳಗೆ ಅವರಿಗೆ ಆಹ್ವಾನ ನೀಡಲಾಗಿದೆ. ಪ್ರಮುಖ ಸಚಿವಾಲಯದ ಹೊಣೆಯನ್ನು ಸರ್ಬಾನಂದ್‌ ಸೊನೊವಾಲ್‌ಗೆ ವಹಿಸುವ ಸಾಧ್ಯತೆ ಇದೆ.