ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ವಿರುದ್ಧ 115 ಕೋಟಿ ಮೌಲ್ಯದ ಸರಕಾರಿ ಭೂಮಿ ಕಬಳಿಕೆ ಆರೋಪ

ವಿಧಾನ ಪರಿಷತ್‌ನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್‌ ಷರೀಫ್‌ ಅವರ ವಿರುದ್ಧ ಇದೀಗ ಭೂ ಕಬಳಿಕೆಯ ಆರೋಪವೊಂದು ಕೇಳಿ ಬಂದಿದೆ. ಹಾಗಾದರೆ ಬಿಜೆಪಿ ಮುಖಂಡ ಎನ್‌ಆರ್‌ ರಮೇಶ್‌ ಮಾಡಿರುವ ಆರೋಪವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ವಿರುದ್ಧ 115 ಕೋಟಿ ಮೌಲ್ಯದ ಸರಕಾರಿ ಭೂಮಿ ಕಬಳಿಕೆ ಆರೋಪ
Linkup
: ವಿಧಾನ ಪರಿಷತ್‌ನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್‌ ಷರೀಫ್‌ () ಅವರು 115 ಕೋಟಿಗಿಂತ ಹೆಚ್ಚು ಮೌಲ್ಯದ ಸರಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದರು. ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ''ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದ ಸರ್ವೆ ನಂ. 15ರಲ್ಲಿ 7.20 ಎಕರೆ ಸರಕಾರಿ ಜಮೀನು ಹಾಗೂ ಇದಕ್ಕೆ ಹೊಂದಿಕೊಂಡಂತೆ ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ಬಿಬಿಎಂಪಿಗೆ ಹಸ್ತಾಂತರಿಸಿದ್ದ 2.21 ಎಕರೆ, ಪಕ್ಕದ 1.01 ಎಕರೆಗೆ ಕೆಜಿಎಫ್‌ ಬಾಬು ಅಕ್ರಮವಾಗಿ ಬೇಲಿ ಹಾಕಿಕೊಂಡಿದ್ದಾರೆ,'' ಎಂದು ದೂರಿದರು. ''ಶ್ರೀನಿವಾಸಪುರ ಗ್ರಾಮದ ಸರ್ವೆ ನಂ. 15ರಲ್ಲಿ 11.01 ಎಕರೆ ಸರಕಾರಿ ಸ್ವತ್ತಿನ ಪೈಕಿ ಪಶ್ಚಿಮ ಭಾಗದ 7.20 ಎಕರೆಯನ್ನು ಹರಾಜು ಹಾಕಲು 2007ರ ಮೇ 23ರಂದು ಆಗಿನ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಅಧಿಸೂಚನೆ ಹೊರಡಿಸಿದ್ದರು. ಹರಾಜು ಮೊತ್ತದ ಶೇ 25 ರಷ್ಟನ್ನು ಪ್ರಕ್ರಿಯೆ ಮುಗಿದ 24 ಗಂಟೆಯೊಳಗೆ ಡಿಡಿ ಮೂಲಕ ಸಕ್ಷಮ ಅಧಿಕಾರಿಗೆ ಸಲ್ಲಿಸಬೇಕು. ಉಳಿದ ಶೇ 75ರಷ್ಟನ್ನು 10 ದಿನದಲ್ಲಿ ಪಾವತಿಸಬೇಕೆಂದು ಷರತ್ತು ವಿಧಿಸಲಾಗಿತ್ತು,'' ಎಂದು ಹೇಳಿದರು. ''7.20 ಎಕರೆಗೆ ಕನಿಷ್ಠ ಬೆಲೆ 7.50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು 2007ರ ಜೂ. 2ರ ಸಂಜೆ 5 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಷರತ್ತು ವಿಧಿಸಿದ್ದರೂ, ಕೆಜಿಎಫ್‌ ಬಾಬು ಅವರು ತಮ್ಮ ಮಾಲೀಕತ್ವದ ಹಿಲ್ಲಾ್ಯಂಡ್‌ ಎಸ್ಟೇಟ್ಸ್‌ ಹೆಸರಿನಲ್ಲಿ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಜೂ. 4ರಂದು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಬಾಕಿ ಬರಬೇಕಿರುವ 2.67 ಕೋಟಿಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಕೆಜಿಎಫ್‌ ಬಾಬು ಅವರೊಂದಿಗೆ ಶಾಮೀಲಾಗಿದ್ದ ಅಂದಿನ ಸಹಾಯಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಸತ್ಯಾಸತ್ಯ ಪರಿಶೀಲಿಸದೆ ಸರಕಾರಕ್ಕೆ ವಂಚಿಸಿದ್ದಾರೆ,'' ಎಂದು ಆಪಾದಿಸಿದರು. ''7.20 ಎಕರೆಗೆ 7.50 ಕೋಟಿ ರೂ. ಬದಲಿಗೆ ಕೇವಲ 6.20 ಕೋಟಿ ರೂ.ಗಳಿಗೆ ಕೆಜಿಎಫ್‌ ಬಾಬು ಅವರಿಗೆ ಮಾರಾಟ ಮಾಡಿ ಉತ್ತರ ತಾಲೂಕಿನ ಅಂದಿನ ತಹಶೀಲ್ದಾರ್‌ ಕೆ.ರಂಗನಾಥಯ್ಯ ಅಕ್ರಮವೆಸಗಿದ್ದಾರೆ. ನಿಯಮಾನುಸಾರ ಅರ್ಜಿ ಸಲ್ಲಿಸಿದ್ದ 4 ಮಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಹರಾಜು ಪ್ರಕ್ರಿಯೆ ಮುಗಿದ 10 ದಿನದಲ್ಲಿ ಶೇ 75ರಷ್ಟು ಮೊತ್ತ ಪಾವತಿಸಿ ತಮ್ಮ ಹೆಸರಿಗೆ ಸ್ವತ್ತು ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ, 2012, 2015 ಮತ್ತು 2018ರಲ್ಲಿ ಒಟ್ಟು ಐದು ಕಂತುಗಳಲ್ಲಿ ಹಣ ಪಾವತಿಸಿದ ಕೆಜಿಎಫ್‌ ಬಾಬು ಅವರಿಗೆ ಕ್ರಯಪತ್ರ ಮಾಡಿಕೊಡಲಾಗಿದೆ. ಜತೆಗೆ ಪ್ರತ್ಯೇಕವಾಗಿ ಭೂ ಪರಿವರ್ತನೆ ಮಾಡಿಕೊಟ್ಟು ಆದೇಶಿಸಲಾಗಿದೆ,'' ಎಂದು ಹೇಳಿದರು.