ಕೈಗಾರಿಕೆ ಸ್ಥಾಪನೆಗೆ ಕರಾವಳಿಯಲ್ಲಿ 1,050 ಎಕರೆ ಭೂ ಸ್ವಾಧೀನ: ಜಗದೀಶ್‌ ಶೆಟ್ಟರ್‌

ಕೈಗಾರಿಕೆ ಸ್ಥಾಪನೆಗಾಗಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ 250 ಎಕರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆಯಲ್ಲಿ 800 ಎಕರೆಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಕೈಗಾರಿಕೆ ಸ್ಥಾಪನೆಗೆ ಕರಾವಳಿಯಲ್ಲಿ 1,050 ಎಕರೆ ಭೂ ಸ್ವಾಧೀನ: ಜಗದೀಶ್‌ ಶೆಟ್ಟರ್‌
Linkup
ಉಡುಪಿ: ಕೈಗಾರಿಕೆ ಸ್ಥಾಪನೆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ 250 ಎಕರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆಯಲ್ಲಿ 800 ಎಕರೆಯನ್ನು ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಹೇಳಿದ್ದಾರೆ. ಬೆಳಪು ಕೈಗಾರಿಕಾ ಪ್ರದೇಶದಲ್ಲಿರುವ ಎಸ್‌.ಎನ್‌. ಕ್ರಯೋಜೆನಿಕ್ಸ್‌ನ ಆಮ್ಲಜನಕ ಘಟಕಕ್ಕೆ ಸೋಮವಾರ ಭೇಟಿ ನೀಡಿ, ಉದ್ಯಮಿಗಳ ಅಹವಾಲು ಸ್ವೀಕರಿಸಿ ಮಾತನಾಡಿ, "ಕೈಗಾರಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹದೊಂದಿಗೆ ಇಲಾಖೆ, ಕಚೇರಿಗಳಿಗೆ ಅಡ್ಡಾಡದೆ ಏಕಗವಾಕ್ಷಿ ಮೂಲಕ ಸುಲಭ ಸಾಧ್ಯ ವ್ಯವಹಾರದ ವ್ಯವಸ್ಥೆ ರೂಪಿಸಲಾಗಿದೆ," ಎಂದರು. ಅರ್ಜಿ ಹಾಕಿ ಎಲ್ಲ ಪರವಾನಗಿ ಒಂದೆಡೆ ಪಡೆದು ಕೈಗಾರಿಕಾ ಸ್ಥಾಪನೆಗೆ ಅವಕಾಶದ ನಿಟ್ಟಿನಲ್ಲಿ ಕಾಯಿದೆ ತಿದ್ದುಪಡಿ ಮಾಡಲಾಗಿದೆ. ದೇಶದಲ್ಲಿ ಉದ್ಯಮ ಸ್ಥಾಪನೆ ನಿಟ್ಟಿನಲ್ಲಾದ 4 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ ರಾಜ್ಯದ ಪಾಲು 1.60 ಲಕ್ಷ ಕೋಟಿ ರೂ.ಗಳಾಗಿದ್ದು, ಬೇರೆ ರಾಜ್ಯಕ್ಕೆ ಹೋಲಿಸಿದರೆ ಉತ್ತಮ ಕೈಗಾರಿಕಾ ಬೆಳವಣಿಗೆಯಾಗಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ್‌ ಶೆಟ್ಟರ್‌, "ಬೆಂಗಳೂರು ಹೊರತಾದ 2, 3ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ, ಹೂಡಿಕೆ ಪ್ರಕ್ರಿಯೆ ನಡೆದಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಯಾವುದೇ ಉದ್ಯಮ ಎ, ಬಿ ವರ್ಗದ ಹುದ್ದೆಗಳನ್ನು ಶೇ.80 ಹಾಗೂ ಸಿ, ಡಿ ವರ್ಗದ ಹುದ್ದೆಗಳನ್ನು ಶೇ.100 ಕನ್ನಡಿಗರಿಗೆ ಮೀಸಲಿಡಬೇಕು. ಖಾಸಗಿ ಕಂಪನಿ ಹಾಗೂ ಸರಕಾರದ ನಡುವಿನ ಒಪ್ಪಂದ ಮೀರಿ ನಡೆದವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು," ಎಂದರು. ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಹಿರಿಯಡ್ಕದ 100 ಎಕರೆ ಜಾಗದಲ್ಲಿ ಕೈಗಾರಿಕಾ ಪಾರ್ಕ್ ಸಹಿತ ಪರಿಸರ ಪೂರಕ ಕೈಗಾರಿಕೆ ಕ್ಷೇತ್ರಕ್ಕೆ ಬರಲಿ. ಸುಜ್ಲಾನ್‌, ಯುಪಿಸಿಎಲ್‌ನಿಂದ ಸ್ಥಳೀಯರಿಗೆ 4 ರಿಂದ 5 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹುಸಿಯಾಗಿದೆ. ಪಂಚಾಯಿತಿಗೆ ಕೈಗಾರಿಕೆಗಳು ತೆರಿಗೆ ಪಾವತಿಸಬೇಕು. ಕಸ ವಿಲೇವಾರಿ, ವಸತಿ ನಿಟ್ಟಿನಲ್ಲಿ ಸುಜ್ಲಾನ್‌ನಿಂದ 100 ಎಕರೆ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್‌, ಉಡುಪಿ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌, ಎಸ್‌.ಎನ್‌. ಕ್ರಯೋಜೆನ್ಸಿಕ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ನಟರಾಜ್‌, ಜನರಲ್‌ ಮ್ಯಾನೇಜರ್‌ ದಿನೇಶ್‌ ಬಂಗೇರ ಉಪಸ್ಥಿತರಿದ್ದರು. ಸಹಾಯಕ ಔಷಧ ನಿಯಂತ್ರಕ ಕೆ.ವಿ. ನಾಗರಾಜ್‌ ಅವರನ್ನು ಕೋವಿಡ್‌ ಕಾಲದಲ್ಲಿ ಉಡುಪಿ ಜಿಲ್ಲೆಗೆ ಸಮರ್ಪಕ ಔಷಧ ಮತ್ತು ಆಕ್ಸಿಜನ್‌ ಪೂರೈಕೆಯಲ್ಲಿಉತ್ತಮ ನಿರ್ವಹಣೆಗಾಗಿ ಸಚಿವ ಜಗದೀಶ್‌ ಶೆಟ್ಟರ್‌ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಇದೇ ವೇಳೇ ಸಚಿವ ಸಿ.ಪಿ. ಯೋಗೇಶ್ವರ್‌ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ನಡೆ ನುಡಿಯನ್ನು ಹೈಕಮಾಂಡ್‌ ಗಮನಿಸುತ್ತಿದೆ, ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.